ಸಾರಾಂಶ
ಕೊಪ್ಪಳ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಡಿ. 12ರಂದು ಹನುಮಮಾಲೆ ಧರಿಸಲಿದ್ದಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷವೇ ಅವರು ಮಾಲೆ ಹಾಕುವುದು ನಿಗದಿಯಾಗಿತ್ತು. ಕಾರಣಾಂತರಗಳಿಂದ ಆಗಿಲ್ಲ. ಆದರೆ, ಈ ವರ್ಷ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಡಿ. 12ರಂದು ಹನುಮಮಾಲೆ ಧರಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು ಹನುಮಮಾಲೆ ಧರಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದಾದ್ಯಂತ ಎಲ್ಲ ಜಿಲ್ಲೆಯಿಂದಲೂ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಅಂದು ಅಂಜನಾದ್ರಿಗೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಅಂಜನಾದ್ರಿಯಲ್ಲಿ ಈ ವರ್ಷ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗುತ್ತಿದೆ. ಪ್ರತಿ ವರ್ಷ ಕೇವಲ ಒಂದು ದಿನ ಮಾತ್ರ ಪ್ರಸಾದ ವ್ಯವಸ್ಥೆ ಇರುತ್ತಿತ್ತು. ಈ ವರ್ಷ ಮೂರು ದಿನಗಳ ಕಾಲ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಡಿ. 12ರಂದೇ ಹನುಮಮಾಲಾ ವಿಸರ್ಜನೆ ನಡೆಯುವುದರಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಬಿಗಿಭದ್ರತೆ ಕೈಗೊಳ್ಳಲು ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗಿದೆ. 1500ಕ್ಕೂ ಹೆಚ್ಚು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಂಚಾರ ಸುಗಮ ಮಾಡಲು ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ಅಲ್ಲದೆ ಆನೆಗೊಂದಿಯಿಂದ ಅಂಜನಾದ್ರಿ ವರೆಗೂ ರಸ್ತೆಯುದ್ದಕ್ಕೂ ವಿಶೇಷ ದೀಪಾಲಂಕಾರ ಮಾಡಲಾಗುತ್ತದೆ ಎಂದರು.ಅಂಜನಾದ್ರಿಗೆ ₹1100 ಕೋಟಿ ಪ್ರಸ್ತಾವನೆ: ಅಂಜನಾದ್ರಿ ಅಭಿವೃದ್ಧಿಗೆ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹100 ಕೋಟಿ ನೀಡಲಾಗಿದೆ ಮತ್ತು ಈಗಿನ ಸರ್ಕಾರ ₹100 ಕೋಟಿ ನೀಡಿದೆ. ಹಾಗೆ ಕೆಕೆಆರ್‌ಡಿಬಿ ಅನುದಾನ ಸೇರಿ ₹242 ಕೋಟಿಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು. ಅಂಜನಾದ್ರಿಯ ಸರ್ವಾಂಗೀಣ ಅಭಿವೃದ್ಧಿಗೆ ಖಾಸಗಿ ಸಂಸ್ಥೆಯಿಂದ ಸಿದ್ಧಪಡಿಸಿದ ನೀಲನಕ್ಷೆಯ ಪ್ರಕಾರ ₹1350 ಕೋಟಿ ಬೇಕಾಗುತ್ತದೆ. ಈಗ ರಾಜ್ಯ ಸರ್ಕಾರ ಹಾಗೂ ಕೆಕೆಆರ್‌ಡಿಬಿಯ ವಿಶೇಷ ಅನುದಾನ ಹೊರತುಪಡಿಸಿ, ಇನ್ನು ₹1108 ಕೋಟಿ ಅಗತ್ಯವಿದೆ. ಇದನ್ನು ಕೇಂದ್ರದಿಂದ ಪಡೆಯಲು ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗೆ ಕ್ಯಾಬಿನೆಟ್‌ನಲ್ಲಿ ಅನುಮೋದನೆ ಪಡೆಯಬೇಕಾಗುತ್ತದೆ ಎಂದು ವಿಳಂಬವಾಯಿತು. ಆದರೆ, ರಾಜ್ಯ ಸರ್ಕಾರದ ಪಾಲು ಬೇಕಾಗಿಲ್ಲವಾದ್ದರಿಂದ ನೇರವಾಗಿಯೇ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಬಹುದು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹೇಳಿದ್ದರಿಂದ ರಾಜ್ಯ ಸರ್ಕಾರದಿಂದ ಪ್ರಸ್ತಾವನೆಯನ್ನು ಕಳೆದೆರಡು ದಿನಗಳ ಹಿಂದೆಯೇ ಕಳುಹಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದಲ್ಲಿ ರಾಜ್ಯ ನಾಯಕರ ಸಹಕಾರದೊಂದಿಗೆ ₹1108 ಕೋಟಿಯನ್ನು ಅಂಜನಾದ್ರಿ ಅಭಿವೃದ್ಧಿಗೆ ಮಂಜೂರಿ ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಅಂಜನಾದ್ರಿಯ ವಿಷಯದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ಸಚಿವ ಶಿವರಾಜ ತಂಗಡಗಿ ಅವರು ಏನು ಬೇಕಾದರೂ ಹೇಳಿಕೊಳ್ಳಲಿ, ಆ ಬಗ್ಗೆ ನಾನು ಉತ್ತರಿಸುವುದಿಲ್ಲ, ಅದನ್ನು ದೇವರು ನೋಡಿಕೊಳ್ಳುತ್ತಾನೆ ಎಂದರು.