ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಗೆ ಸಂಬಂಧಿಸಿದಂತೆ ವಿವಾದಕ್ಕೊಳಗಾಗಿರುವ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ಸೋಮವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಗೆ ಸಂಬಂಧಿಸಿದಂತೆ ವಿವಾದಕ್ಕೊಳಗಾಗಿರುವ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್‌ನಿಂದ ಸೋಮವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಪ್ರತಿಭಟನಕಾರರು ಜ್ಞಾನೇಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಗೇಟ್‌ಗಳನ್ನು ಬಂದ್ ಮಾಡಿ ತಡೆದರು. ಕೆಲ ಕಾರ್ಯಕರ್ತರು ಗೇಟ್ ಹತ್ತಿ ಆಕ್ರೋಶ ವ್ಯಕ್ತಪಡಿಸಿದರೆ, ಮತ್ತಷ್ಟು ಮಂದಿ ಗೇಟ್ ಎದುರು ಧರಣಿ ನಡೆಸಿ ಚುನಾವಣಾ ಆಯುಕ್ತರ ವಿರುದ್ಧ ಘೋಷಣೆಗಳನ್ನು ಕೂಗಿದರು.ಈ ಸಂದರ್ಭ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೇಂದ್ರ ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಸಂಶಯವಿದೆ, ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಮೂಲಕ ವೋಟ್ ಚೋರಿ ನಡೆಸಿ ಚುನಾವಣೆಯಲ್ಲಿ ಗೆಲ್ಲುವ ಹುನ್ನಾರ ನಡೆಸಿದ ಎಂದು ಆರೋಪಿಸಿದರಲ್ಲದೇ, ಈ ಬಗ್ಗೆ ತಾಲೂಕು ಹಾಗೂ ಗ್ರಾಮೀಣ ಮಟ್ಟದಲ್ಲಿಯೂ ಪ್ರತಿಭಟನೆಗಳನ್ನು ನಡೆಸಿ ಜನಜಾಗೃತಿ ಮಾಡಲಾಗುವುದು ಎಂದರು.ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಚುನಾವಣಾ ಆಯೋಗವು ಎಸ್‌ಐಆರ್‌ ಮೂಲಕ ಲಕ್ಷಾಂತರ ಜನರನ್ನು ಮತದಾನದ ಹಕ್ಕಿನಿಂದ ವಂಚಿಸುತ್ತಿದೆ. ಬಡವರು, ಕಾರ್ಮಿಕರು, ಆದಿವಾಸಿಗಳು, ಅಲೆಮಾರಿಗಳು, ದಲಿತರು ಹಾಗೂ ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿ ಅವರ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ದೂರಿದರು.ಮಾಜಿ ಶಾಸಕ ಗೋಪಾಲ ಪೂಜಾರಿ, ಕೆಪಿಸಿಸಿ ವಕ್ತಾರೆ ವರೋನಿಕಾ ಕರ್ನೆಲಿಯೋ ಹಾಗೂ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್ ಮಾತನಾಡಿದರು.ಪಕ್ಷದ ಪ್ರಮುಖರಾದ ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಅಶೋಕ್ ಕುಮಾರ್ ಕೊಡವೂರು, ಪ್ರಶಾಂತ್ ಜತ್ತನ್ನ, ಪ್ರಖ್ಯಾತ್ ಶೆಟ್ಟಿ, ಹರಿಪ್ರಸಾದ್ ರೈ, ಜ್ಯೋತಿ ಹೆಬ್ಬಾರ್, ಹಬೀಬ್ ಅಲಿ, ಶಬ್ಬೀರ್ ಉಡುಪಿ, ಇಸ್ಮಾಯಿಲ್ ಆತ್ರಾಡಿ, ಎಂ.ಪಿ. ಮೊದಿನಬ್ಬ, ಅಬ್ದುಲ್ ಅಝೀಜ್ ಹೆಜಮಾಡಿ, ಹರೀಶ್ ಕಿಣಿ, ಗಣೇಶ್ ನೆರ್ಗಿ, ರಾಜು ಪೂಜಾರಿ ಮೊದಲಾದವರು ಇದ್ದರು.