ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತ ದುರ್ಘಟನೆ ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿ ಜೂ.17 ರಂದು ರಾಜ್ಯ ಬಿಜೆಪಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ.

ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತ ದುರ್ಘಟನೆ ಖಂಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿ ಜೂ.17 ರಂದು ರಾಜ್ಯ ಬಿಜೆಪಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶಾಸಕ ಗೋಪಾಲಯ್ಯ, ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮಂಗಳವಾರ ಬೆಳಗ್ಗೆ 10.30ಕ್ಕೆ ಬೃಹತ್‌ ಪ್ರತಿಭಟನೆ ನಡೆಯಲಿದ್ದು ಉಭಯ ಸದನಗಳ ಬಿಜೆಪಿ ಸದಸ್ಯರು, ಪರಾಜಿತ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸೇರಿ ಸುಮಾರು 10 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ತರಾತುರಿಯಿಂದಾಗಿ ದುರ್ಘಟನೆ:

ಯಾವುದೇ ಸಿದ್ಧತೆ ಮಾಡಿಕೊಳ್ಳದೆ ತರಾತುರಿಯಲ್ಲಿ ವಿಧಾನಸೌಧದ ಮುಂದೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮ ಆಯೋಜಿಸಬಾರದು ಎಂದು ಪೊಲೀಸ್ ಇಲಾಖೆ ಪತ್ರ ಬರೆದಿದ್ದರೂ ನಿರ್ಲಕ್ಷಿಸಿ ಸರ್ಕಾರ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಿಸಲು ಅವಕಾಶ ಕಲ್ಪಿಸಿ 11 ಅಭಿಮಾನಿಗಳ ಬಲಿ ಪಡೆದಿದೆ. ಆದ್ದರಿಂದ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪತ್ರಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಭದ್ರತಾ ವೈಫಲ್ಯದ ಹೆಸರಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ದುರ್ಘಟನೆ ರಾಜ್ಯದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ. ಕಾಲ್ತುಳಿತ ದುರ್ಘಟನೆ ಮರೆಮಾಚಲು ಮತ್ತೊಮ್ಮೆ ಜಾತಿಗಣತಿ ಮಾಡಲು ಸರ್ಕಾರ ನಿರ್ಧರಿಸಿದೆ. ಹಿಂದಿನ ಗಣತಿಗೆ 167 ಕೋಟಿ ರು. ವೆಚ್ಚವಾಗಿದ್ದು, ಈ ಬಗ್ಗೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಎಲ್ಲರ ಬಂಧನ ಏಕಿಲ್ಲ?:

ಅಭಿಮಾನಿಗಳು ಚಿನ್ನಸ್ವಾಮಿ ಸ್ಟೇಡಿಯಂಗೆ ಆಗಮಿಸಬೇಕು ಎಂದು ಆರ್‌ಸಿಬಿ ತಂಡದವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ಆದರೆ ಡಿಪಿಎಆರ್‌ ಕಾರ್ಯದರ್ಶಿಗಳು ‘ಎಲ್ಲರೂ ಚಿನ್ನಸ್ವಾಮಿ ಸ್ಟೇಡಿಯಂಗೆ ಬರಬೇಕು’ ಎಂದು ಹೇಳಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರೂ ಇದೇ ಹೇಳಿಕೆ ನೀಡಿದ್ದಾರೆ. ಇವರಿಬ್ಬರನ್ನೂ ಏಕೆ ಬಂಧಿಸಿಲ್ಲ. ಎಲ್ಲರಿಗೂ ಒಂದೇ ಕಾನೂನಲ್ಲವೇ ಎಂದು ಶಾಸಕ ಧೀರಜ್‌ ಮುನಿರಾಜು ಪ್ರಶ್ನಿಸಿದರು.

ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಉಪಸ್ಥಿತರಿದ್ದರು.ಕ್ಯಾಪ್ಷನ್‌....

ರಾಜ್ಯ ಸರ್ಕಾರದ ವಿರುದ್ಧ ಮಂಗಳವಾರ ನಡೆಯುವ ಬೃಹತ್‌ ಪ್ರತಿಭಟನೆಗೆ ಸಂಬಂಧಿಸಿದ ಕರಪತ್ರವನ್ನು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಶಾಸಕರಾದ ಗೋಪಾಲಯ್ಯ, ಎನ್‌.ರವಿಕುಮಾರ್‌ ಮತ್ತಿತರರು ಬಿಡುಗಡೆಗೊಳಿಸಿದರು.