9ರಿಂದ ಬಿಜೆಪಿಯಿಂದ ಮಳೆಹಾನಿ ಪ್ರದೇಶಕ್ಕೆ ಭೇಟಿ

| Published : Sep 07 2025, 01:01 AM IST

ಸಾರಾಂಶ

ಕೊಡಗಿನಲ್ಲಿ ಮಳೆಯಿಂದ ರೈತರಿಗೆ ಸಮಸ್ಯೆಯಾಗಿದೆ. ಕಾಂಗ್ರೆಸ್‌ ರೈತ ವಿರೋಧಿ ಸರ್ಕಾರವಾಗಿದೆ ಎಂದು ಮಾಜಿ ಸಚಿವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನಲ್ಲಿ ಮಳೆಯಿಂದ ಅಪಾರ ರೈತರಿಗೆ ಸಮಸ್ಯೆಯಾಗಿದೆ. ಕಾಂಗ್ರೆಸ್ ರೈತ ವಿರೋಧಿ ಸರ್ಕಾರವಾಗಿದೆ. ರೈತರಿಗೆ ಬೇಕಾದ ಸೌಲಭ್ಯ ಕೊಡುತ್ತಿಲ್ಲ. ಆದ್ದರಿಂದ ಸೆ.9ರಿಂದ ಮಳೆಹಾನಿ ಪ್ರದೇಶ ಭೇಟಿ ನೀಡಿ ಪಕ್ಷದ ವತಿಯಿಂದ ಸರ್ವೆ ಮಾಡಿ ಜಿಲ್ಲಾಧಿಕಾರಿ ಮತ್ತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಕ್ರಮವಾಗಿ 38 ಕೋಟಿ ರುಪಾಯಿ, 66 ಕೋಟಿ ರುಪಾಯಿ, 1040 ಕೋಟಿ ರುಪಾಯಿ ಪರಿಹಾರ ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರದಿಂದ ಬಿಡಿಗಾಸು ಸಿಗುತ್ತಿಲ್ಲ. ಆದ್ದರಿಂದ ಈ ಸರ್ವೆ ಕಾರ್ಯ ಮಾಡಲಾಗುತ್ತದೆ ಎಂದರು.

ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಮಾತನಾಡಿ, 2025ರಲ್ಲಿ ಸೂರ್ಲಬ್ಬಿ, ಕಾಲೂರು, ಹಮ್ಮಿಯಾಲ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗಿದೆ. ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಸರ್ಕಾರದಿಂದ ಸರ್ವೆಗೆ ಮುಂದಾಗಿಲ್ಲ. ಸಚಿವರು, ಶಾಸಕರು ಕಾಳಜಿ ಇಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ವರ್ಷಂಪ್ರತಿ ಕಂದಾಯ ಇಲಾಖೆ ಮಾಡುತ್ತಿದ್ದ ಸರ್ವೆಯು ನಡೆಯುತ್ತಿಲ್ಲ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಫಂಡ್ ಬಳಕೆಯಾಗುತ್ತಿಲ್ಲ. ಗುಂಡಿಮುಚ್ಚುವ ಕೆಲಸವಾಗುತ್ತಿಲ್ಲ. ಪರಿಣಾಮ ಇಂದು ಜಿಲ್ಲೆಯ ಮುಖ್ಯ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ ಸೆ. 9ರಂದು ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ವರದಿ ತಯಾರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಡಗು ಜಿಲ್ಲೆಯಲ್ಲಿ ಮೇ ತಿಂಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಕಾಫಿ, ಕಾಳುಮೆಣಸು, ಅಡಕೆ ಬೆಳೆಗಳು ನೆಲಕಚ್ಚುತ್ತಿದ್ದರೂ ಸರ್ಕಾರ, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳದ ಪರಿಣಾಮ ಬಿಜೆಪಿ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಳೆದ 4 ತಿಂಗಳಿನಿಂದ ಎಡೆಬಿಡದೇ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಪರಿಣಾಮ ಕಾಫಿ, ಮೆಣಸು ಉದುರುತ್ತಿವೆ. ಅರೆಭಿಕ ಸಂರ್ಪೂಣ ನಾಶವಾಗಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಿ ಕಾರ್ಯಕ್ರಮಕ್ಕೆ ಮಾತ್ರ ಹಾಜರಾಗಿ ಸಭೆ ನಡೆಸಿ ತೆರಳುತ್ತಿದ್ದಾರೆ. ಯಾವುದೇ ಪರಿಹಾರ ಕ್ರಮ ಕಂಡುಬರುತ್ತಿಲ್ಲ. ಈ ಹಿನ್ನೆಲೆ ಬಿಜೆಪಿ ವತಿಯಿಂದ ಅತ್ಯಧಿಕ ಮಳೆಯಾಗಿರುವ ಶಾಂತಳ್ಳಿ, ಸೂರ್ಲಬ್ಬಿ, ಹಮ್ಮಿಯಾಲ, ಗಾಳಿಬೀಡು, ಮುಟ್ಲು, ಚೇರಂಬಾಣೆ, ಚೆಟ್ಟಿಮಾನಿ ಸೇರಿದಂತೆ ವಿವಿಧೆಡೆ ಭೇಟಿ ನೀಡಿ ವರದಿ ತಯಾರಿಸಲಾಗುವುದು ಎಂದು ತಿಳಿಸಿದರು.

ಮಳೆಹಾನಿ ಪರಿಹಾರವನ್ನು ರಾಜ್ಯ ಸರ್ಕಾರ ಶೀಘ್ರದಲ್ಲಿ ನೀಡಬೇಕು ಎಂದು ಒತ್ತಾಯಿಸಿರುವ ಅವರು, ಕಾಫಿ ಕೆಲಸಗಳಿಗೆ ವೆಚ್ಚ ಹೆಚ್ಚಾಗಿದೆ. ಕಾರ್ಮಿಕರ ಕೂಲಿ ಕೂಡ ಹೆಚ್ಚಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆ ಸರ್ಕಾರ ಒಬ್ಬ ರೈತನಿಗೆ ಕನಿಷ್ಠ 2 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಅರುಣ್ ಕುಮಾರ್, ಮಡಿಕೇರಿ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ ಉಪಸ್ಥಿತರಿದ್ದರು.

ಹಿಂದೂ ಸಂಸ್ಕೃತಿ ಮೇಲೆ ನೇರ ದಾಳಿ

ಹಿಂದೂ ಸಂಸ್ಕೃತಿ, ಆಚಾರ, ವಿಚಾರ ಮೇಲೆ ಇಂದು ನೇರ ದಾಳಿ ನಡೆಯುತ್ತಿದೆ ಎಂದು ಮಾಜಿ ಸ್ಪೀಕರ್ ಮತ್ತು ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಆರೋಪಿಸಿದರು.

ಪೊಲೀಸ್ ಇಲಾಖೆಯಿಂದ ಗೌರಿಗಣೇಶೋತ್ಸವ ಸಂದರ್ಭದಲ್ಲಿ ಮೆರವಣಿಗೆ ಮಾಡಲು 1500 ರು.. ಕಟ್ಟಬೇಕಾಗಿದೆ. ಇದರೊಂದಿಗೆ 150 ರು. ಪ್ರಚಾರಮಾಡಲು ಮೈಕ್ ಬಳಕೆಗೆ ನಿಗದಿಪಡಿಸಲಾಗಿದೆ. ಈ ರೀತಿಯಲ್ಲಿ ಹಿಂದು ಆಚರಣೆಗಳ ಮೇಲೆ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ ಎಂದು ಆರೋಪಿಸಿದರು.

ಡಿಜೆ ಸಂಪೂರ್ಣ ನಿಷೇಧಕ್ಕೆ ಕೋರ್ಟ್ ಆದೇಶ ಮಾಡಿಲ್ಲ. ಡಿಜೆ ಬಳಸುವಾಗ ನಿಗದಿತ ಡಿಸಿಬಲ್ ಬಳಸಲು ಸೂಚಿಸಲಾಗಿದೆ ಅಷ್ಟೇ ಎಂದ ಅವರು, ಡಿಜೆಯನ್ನು 10 ಗಂಟೆವರೆಗೆ ಮಾತ್ರ ಬಳಕೆ ಮಾಡಬೇಕೆಂದು ಹೇಳಿಲ್ಲ. ವರ್ಷಕ್ಕೊಮ್ಮೆ ಹಿಂದುಗಳ ಹಬ್ಬ ಗೌರಿಗಣೇಶೋತ್ಸವವನ್ನು ಆಚರಿಸಲು ನಿಯಮ, ಆದೇಶಗಳನ್ನು ಜಾರಿ ಮಾಡಿ ದಾಳಿ ನಡೆಸುತ್ತಿದೆ. ಇವೆಲ್ಲವನ್ನು ಗಮನಿಸಿದರೆ ಕರ್ನಾಟಕ ಭಾರತದ ಒಳಗೆ ಇದೆಯೋ ಎನ್ನುವ ಪ್ರಶ್ನೆ ಮೂಡುತ್ತದೆ ಎಂದ ಅವರು, ಅದೇ ರೀತಿ ಮುಸ್ಲಿಂ ಜನಾಂಗಬಾಂಧವರು ಬೆಳಗ್ಗೆ 4.30 ಗಂಟೆಯಿಂದ ಬಾಂಗ್ ಆರಂಭ ಮಾಡುತ್ತಾರೆ. ಇವರಿಗೆ ಯಾವುದೇ ಕಾನೂನು ಇಲ್ಲವೇ ಎಂದು ಪ್ರಶ್ನಿಸಿದರು.

ಬಾನು ಮುಷ್ತಾಕ್‌ಗೆ ಆಹ್ವಾನ ಸರಿಯಲ್ಲ

ಮೈಸೂರು ದಸರ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ ಸರಿಯಲ್ಲ. ಇದು ಚಾಮುಂಡೇಶ್ವರಿಗೆ ಮಾಡಿದ ಅವಮಾನ ಎಂದು ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಹೇಳಿದರು.

ಮೈಸೂರು ದಸರಾ ಹಬ್ಬಕ್ಕೆ ಅದರದ್ದೇ ಆದ ಚಾರಿತ್ರಿಕ ಇತಿಹಾಸವಿದೆ. ಆದರೆ, ಇಂತಹ ಕಾರ್ಯಕ್ರಮಕ್ಕೆ ಬಾನು ಮುಷ್ತಾಕ್‌ಗೆ ಆಹ್ವಾನ ನೀಡಿರುವುದು ಸರಿಯಲ್ಲ. ಅಷ್ಟೇ ಅಲ್ಲದೇ, ಬೂಕರ್ ಪ್ರಶಸ್ತಿ ಬಂದಿರುವುದು ಭಾಷಾಂತರಕ್ಕೆ. ಅದು ಕೂಡ ಕೊಡಗು ಜಿಲ್ಲೆಯ ಬರಹಗಾರ್ತಿ ದೀಪ ಬಾಸ್ತಿಯವರಿಗೆ. ಅವರನ್ನು ಆಹ್ವಾನಿಸಿದ್ದರೆ ಕೊಡಗು ಜಿಲ್ಲೆಗೂ ಹೆಮ್ಮೆಯಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರ ಮಾಡಿಲ್ಲ. ಆದ್ದರಿಂದ ಇದನ್ನು ವಿರೋಧಿಸಿ ಬಿಜೆಪಿ ವತಿಯಿಂದ ಸೆ.9ರಂದು ಚಾಮುಂಡೇಶ್ವರಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಇವರಿಗೆಲ್ಲ ಕೇರಳದ ಲಿಂಕ್ ಇದ್ದಿರಬಹುದು

ಸ್ತ್ರೀಶಕ್ತಿ ಸಂಘಗಳ ಮೂಲಕ ಮದ್ಯ ವರ್ಜನ ಶಿಬಿರದಂತಹ ಸಾಕಷ್ಟು ಕೆಲಸಗಳನ್ನು ಧರ್ಮಸ್ಥಳ ಸಂಘಗಳು ಮಾಡಿವೆ. ಜೊತೆಗೆ ಹಿಂದೂ ಸಂಸ್ಕೃತಿಯನ್ನು ಬೆಳೆಸುವಂತಹ ಕೆಲಸ ಮಾಡಿದೆ

ಆದರೆ ಇದನ್ನು ಕೆಡಿಸಲು ಜಯಂತ್ ಮತ್ತು ತಂಡ ಕೊಡಗಿಗೆ ಬಂದಿರಬಹುದು ಎಂದು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಹೇಳಿದರು.

ಕೊಡಗು ಧಾರ್ಮಿಕ ಭಾವನೆಯುಳ್ಳ ಜಿಲ್ಲೆ. ಇದನ್ನು ಹಾಳು ಮಾಡಲು ಕೊಡಗು ಜಿಲ್ಲೆಗೆ ಜಯಂತ್ ಮತ್ತು ತಂಡ ಬಂದಿರಬಹುದು. ಆದರೆ ಕೊಡಗಿನ ಜನ ಇದನ್ನು ಬಿಟ್ಟು ಕೊಡಲ್ಲ. ಎಲ್ಲರೂ ಒಗ್ಗಟ್ಟಾಗಿ ಇರುತ್ತಾರೆ ಎಂದರು.

ಕೊಡಗಿನಲ್ಲೂ ಒಂದು ಪುಣ್ಯ ಕ್ಷೇತ್ರ ಇದೆ. ಹಿಂದೆಯೂ ಒಬ್ಬರು ಅಲ್ಲಿ ತೀರ್ಥ ಬರಲ್ಲ ಅಂತ ಹೇಳಿದ್ದರು.

ಜಯಂತ್ ಮತ್ತು ತಂಡ ತಲಕಾವೇರಿಯ ಮೇಲೂ ಕಣ್ಣು ಇಟ್ಟಿದ್ರೋ ಏನೋ ಅದಕ್ಕೆ ಕೊಡಗಿಗೆ ಬಂದಿರಬಹುದು ಎಂದು ಆರೋಪಿಸಿದರು.

ಇವರಿಗೆಲ್ಲ ಕೇರಳದ ಲಿಂಕ್ ಇದ್ದಿರಬಹುದು. ಅದಕ್ಕೆ ಒಬ್ಬ ಎಂಪಿ ನೇರವಾಗಿ ಇದ್ದಾರೆ.

ಕರ್ನಾಟಕದಲ್ಲಿ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುವ ಪ್ರಕರಣಗಳ ತನಿಖೆ ಮಾಡುವುದಿಲ್ಲ ಅಂತ ಕೇರಳದಲ್ಲಿ ತನಿಖೆ ಮಾಡಿದ್ದಾರೆ. ಹೀಗಾಗಿ ಖಂಡಿತಾ ಹಿಂದೂ ವಿರೋಧಿಗಳಾದ ಕಮ್ಯುನಿಸ್ಟರು ಇದರ ಹಿಂದೆ ಇದ್ದಾರೆ.

ಇವರಿಗೆ ಟಾರ್ಗೆಟ್ ಇರುವುದೇ ಹಿಂದೂ ಧರ್ಮದ ಮೇಲೆ, ಹಿಂದೂ ಧರ್ಮಗಳ ಶ್ರದ್ಧಾ ಕೇಂದ್ರಗಳ ಮೇಲೆ ಟಾರ್ಗೆಟ್ ಇದೆ. ಅವರು ಯಾವುದರಲ್ಲೂ ಯಶಸ್ಸು ಕಂಡಿಲ್ಲ ಎಂದರು.

ಇದನ್ನು ಮಟ್ಟಹಾಕಬೇಕಾದರೆ ಮೊದಲು ತ್ರಿಮೂರ್ತಿಗಳ ಒಳಗೆ ಹಾಕಿ, ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡಲಿ, ಇಂತಹ ನೀಚ ಕೆಲಸಕ್ಕೆ ಯಾರು ಕೈಹಾಕುವ ಕೆಲಸ ಮಾಡಲ್ಲ. ಇಲ್ಲದಿದ್ದರೆ ಎಸ್ಐಟಿ ಗೆ ಅರ್ಥ ಬರಲ್ಲ ಎಂದರು. ಸೆಂಥಿಲ್ ವಿಚಾರಣೆ ಮಾಡಬೇಕು!

ಧರ್ಮಸ್ಥಳ ಪ್ರಕರಣದಲ್ಲಿ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಅವರನ್ನು ವಿಚಾರಣೆ ಮಾಡಬೇಕು ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಆಗ್ರಹಿಸಿದ್ದಾರೆ.

ಇವರ ಜೊತೆಗೆ ಕಮ್ಯುನಿಸ್ಟರು ಇದ್ದಾರೆ. ಸರ್ಕಾರ ಎಸ್ಐಟಿ ಮಾಡಿ ಸುಮ್ಮನಾಯಿತು.

ಎಸ್ಐಟಿಯಿಂದ ಎಲ್ಲಾ ವಿಚಾರ ಹೊರಗೆ ಬರಲ್ಲ. ಸಸಿಕಾಂತ್ ಸೆಂಥಿಲ್ ಅವರ ತಾಯಿ ಹೆಸರಿಗೆ 10 ಕೋಟಿ ಬಂದಿದೆ. ಇದು ಎಲ್ಲಿಂದ ಬಂತು ವಿಚಾರಣೆ ಆಗಬೇಕು. ದುಬೈನಿಂದ ಅವರ ಖಾತೆಗೆ ಹಣ ಬಂದಿದೆ ಎನ್ನಲಾಗುತ್ತಿದೆ. ಇದನ್ನು ಇಡಿ ಮತ್ತು ಎನ್ಐಎ ತನಿಖೆಗೆ ವಹಿಸಬೇಕು ಎಂದು ರಂಜನ್ ಆಗ್ರಹಿಸಿದರು.