ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮಗಾಂಧಿ ಹೆಸರನ್ನು ಯೋಜನೆಯಿಂದ ತೆಗೆದುಹಾಕಿ ಜೀ ರಾಮ್ ಜೀ ಹೆಸರನ್ನು ಇಟ್ಟಿದ್ದಾರೆ. ಇದರ ಉದ್ದೇಶವಾದರೂ ಏನು. ನರೇಗಾ ಯೋಜನೆಯಲ್ಲಿ ಲೋಪ-ದೋಷಗಳಿದ್ದರೆ ಅದನ್ನು ಕಾನೂನಾತ್ಮಕವಾಗಿ ಸರಿ ಪಡಿಸಬಹುದಿತ್ತು. ಮೂಲ ಕಾಯ್ದೆಯನ್ನೇ ಬದಲಾವಣೆ ಮಾಡುತ್ತಿರುವುದೇಕೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶ ಹರಾಜು ಹಾಕುವುದನ್ನು ಬಿಟ್ಟು ಮಿಕ್ಕಿದ್ದೆಲ್ಲವನ್ನೂ ಮಾಡಿದ್ದಾರೆ. ಕೂಲಿ ಕಾರ್ಮಿಕರ ಹಕ್ಕನ್ನು ಕಸಿದುಕೊಳ್ಳಲು ನರೇಗಾ ಯೋಜನೆಗೆ ಕೊನೆಯ ಮೊಳೆ ಹೊಡೆಯುತ್ತಿದೆ. ಮೋದಿ ಮತ್ತು ಅಮಿತ್ ಶಾ ಸೇರಿ ಇಡೀ ದೇಶದಲ್ಲಿ ಬಡವರಿಗೆ ಕೂಲಿ ಇಲ್ಲದೆ ಬಡವರನ್ನು ಬೀದಿಗೆ ತಳ್ಳುತ್ತಿದ್ದಾರೆ ಎಂದು ಶಾಸಕ ಪಿ.ರವಿಕುಮಾರ್ ಟೀಕಿಸಿದರು.ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನವನದಲ್ಲಿ ಮಂಗಳವಾರ ನಡೆದ ಯುವ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮಗಾಂಧಿ ಹೆಸರನ್ನು ಯೋಜನೆಯಿಂದ ತೆಗೆದುಹಾಕಿ ಜೀ ರಾಮ್ ಜೀ ಹೆಸರನ್ನು ಇಟ್ಟಿದ್ದಾರೆ. ಇದರ ಉದ್ದೇಶವಾದರೂ ಏನು. ನರೇಗಾ ಯೋಜನೆಯಲ್ಲಿ ಲೋಪ-ದೋಷಗಳಿದ್ದರೆ ಅದನ್ನು ಕಾನೂನಾತ್ಮಕವಾಗಿ ಸರಿ ಪಡಿಸಬಹುದಿತ್ತು. ಮೂಲ ಕಾಯ್ದೆಯನ್ನೇ ಬದಲಾವಣೆ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಒಬ್ಬ ಹಿಂದೂ ಹಿಂದೂವನ್ನು ಕೊಲ್ಲುತ್ತಾನೆ. ಬಾಂಗ್ಲಾದಲ್ಲಿ ಹಿಂದೂಗಳನ್ನು ಕೊಲ್ಲುತ್ತಿದ್ದಾರೆ. ಮೋದಿ ಮಾತ್ರ ಏನೂ ಮಾತನಾಡಲ್ಲ. ಅಮಿತ್ ಶಾ ಇಲ್ಲದ ಬಾಣ ಬಿಡುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಇದೆ ಎಂದಾಗ ಮಾತ್ರ ಅವರು ಮಾತನಾಡುತ್ತಾರೆ. ಇವರಿಗೂ ಬಾಂಗ್ಲಾದಲ್ಲಿ ಅಡ್ಜೆಸ್ಟ್‌ಮೆಂಟ್ ರಾಜಕೀಯವಿರುವಂತೆ ಕಾಣುತ್ತಿದೆ. ಬೆಳಗ್ಗೆ ಎದ್ದರೆ ದೇವಸ್ಥಾನಕ್ಕೆ ಹೋಗುವವರು ನಾವು. ಅವರು ಬಡವರ ಅನ್ನ ಕಿತ್ತುಕೊಳ್ಳುವುದಕ್ಕೆ ಹೋಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ವಿಷಯಗಳನ್ನು ಚರ್ಚೆಗೆ ಬಿಟ್ಟು ಜನರು ಚರ್ಚೆ ಮಾಡಿಕೊಂಡಿರುವಂತೆ ಮಾಡಿ ಬಡವರ ಹಕ್ಕನ್ನು ಕಿತ್ತುಹಾಕುತ್ತಿದ್ದಾರೆ ಎಂದು ದೂಷಿಸಿದರು.ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಮಂಜುನಾಥಗೌಡ ಮಾತನಾಡಿ, ಎಲ್ಲಿ ಬಡತನ ಇರುತ್ತೋ ಅಲ್ಲಿ ಕಷ್ಟ ಇರುತ್ತೆ. ಹೋರಾಟ ಮಾಡಿ ಬದುಕುವುದು ಒಂದು ಸವಾಲಿನ ಕೆಲಸ. ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುವ ಎಚ್.ಡಿ. ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಆದರೆ, ಬಡವರು, ಜಿಲ್ಲೆಯ ಪರವಾಗಿ ಯಾವುದೇ ಲಾಭದಾಯಕ ಅಭಿವೃದ್ಧಿಯನ್ನು ಕೊಡಲು ಅವರು ಸಿದ್ಧರಿಲ್ಲ ಎಂದು ಮೂದಲಿಸಿದರು.
ಜೆಡಿಎಸ್ ಕುಟುಂಬದ ಕಂಪನಿ. ಆ ಕಂಪನಿಯನ್ನು ಇಟ್ಟುಕೊಂಡು ಈ ಜಿಲ್ಲೆಗೆ ಹೊರ ಜಿಲ್ಲೆಯಿಂದ ಬಂದು ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಕರೆತಂದು ಈ ಜಿಲ್ಲೆಯ ನಾಯಕರನ್ನಾಗಿ ಮಾಡುವುದು ಅವರ ಉದ್ದೇಶ. ಹಿಟ್ಲರ್ ಕಂಪನಿಯ ವಿರುದ್ಧ ಹೋರಾಡಿ ಕಾಂಗ್ರೆಸ್‌ಗೆ ಬಂದು ಚಲುವರಾಯಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ತೋಟದಲ್ಲಿ ಇದ್ದುಕೊಂಡು ಮೋಜು-ಮಸ್ತಿಯಲ್ಲಿ ತೊಡಗಿರುವವರು ಏನೂ ಮಾಡಲು ಸಾಧ್ಯವಿಲ್ಲ. ನಿಜವಾಗಲೂ ಮಣ್ಣಿನಿಂದ ಬಂದು ಹೋರಾಟ ಮಾಡುವುದೇ ನಾಯಕತ್ವ ಎಂದರು.ನಾನೂ ಸಹ ನಾಗಮಂಗಲ ತಾಲೂಕಿನವನು. ಈ ಮಣ್ಣಿನ ಗುಣ ಸುಲಭವಾಗಿ ಬಂದವರಿಗೆ ಸಿಗುದಿಲ್ಲ. ಹೋರಾಟದಿಂದ ಬರಬೇಕು. ಕೇಂದ್ರ ಸರ್ಕಾರ ನರೇಗಾ ಕಾಯ್ದೆಯನ್ನು ಬದಲಾಯಿಸಿದೆ. ಮಹಾತ್ಮಾಗಾಂಧಿ ಅವರ ಹೆಸರನ್ನು ಬದಲಾಯಿಸುವ ಕೆಲಸ ಮಾಡುತ್ತಿದೆ. ಆದರೂ ಈ ಬಗ್ಗೆ ಮಾತನಾಡುವುದಿಲ್ಲ. ಏಕೆಂದರೆ ತಮ್ಮ ಮನೆ, ಕುಟುಂಬ ಉಳಿಯಬೇಕು ಎನ್ನುವುದೇ ಜೆಡಿಎಸ್ ಉದ್ದೇಶ ಎಂದರು.
ಬಡವರಿಗೆ ಕಾಂಗ್ರೆಸ್ ಪಕ್ಷ ಕೊಟ್ಟಂತಹ ಹಕ್ಕನ್ನು ಕಿತ್ತುಕೊಳ್ಳುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಅದನ್ನು ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಬಡವರ ಪರವಾಗಿದೆ. ಬಿಜೆಪಿ ಧರ್ಮ-ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದರೆ ಕಾಂಗ್ರೆಸ್ ಬೆಸೆಯುವ ಕೆಲಸ ಮಾಡುತ್ತಿದೆ ಎಂದು ನುಡಿದರು.ಶಾಸಕ ಕೆ.ಎಂ.ಉದಯ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಉಪಾಧ್ಯಕ್ಷ ಚಲುವರಾಜು, ಮನ್‌ಮುಲ್ ನಿರ್ದೇಶಕ, ಮಾಜಿ ಶಾಸಕ ಅಪ್ಪಾಜಿಗೌಡ, ಮುಡಾ ಅಧ್ಯಕ್ಷ ಬಿ.ಪಿ. ಪ್ರಕಾಶ್, ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಭಂಡಾರಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶೈಲೇಂದ್ರ ಕುಮಾರ್, ಕಾಂಗ್ರೆಸ್ ಮುಖಂಡರಾದ ಆರ್.ವಿ.ದೇವರಾಜು, ಸತೀಶ್ ಸಿದ್ದಾರೂಢ, ಅಂಜನಾ, ಸಿ.ಎಂ.ದ್ಯಾವಪ್ಪ ಇತರರು ಉಪಸ್ಥಿತರಿದ್ದರು.