ವಕ್ಫ್ ವಿಚಾರದಲ್ಲಿ ಬಿಜೆಪಿಯಿಂದ ಸಮಾಜ ಒಡೆಯಲು ಯತ್ನ: ಸಚಿವ ಎಚ್.ಕೆ. ಪಾಟೀಲ್

| Published : Nov 10 2024, 01:50 AM IST

ವಕ್ಫ್ ವಿಚಾರದಲ್ಲಿ ಬಿಜೆಪಿಯಿಂದ ಸಮಾಜ ಒಡೆಯಲು ಯತ್ನ: ಸಚಿವ ಎಚ್.ಕೆ. ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಮತಗಳ ಧ್ರುವೀಕರಣಗೊಳಿಸಲು ಬಿಜೆಪಿಯವರು ಹೊರಟಿದ್ದಾರೆ.

ಸಂಡೂರು: ರಾಜ್ಯದಲ್ಲಿ ಭೂಸುಧಾರಣಾ ಕಾಯ್ದೆ, ವಕ್ಫ್ ಕಾನೂನು, ಇನಾಂ ರದ್ದತಿ ಕಾಯ್ದೆ, ರೂಲ್ ಆಫ್ ಲಾ ಇದೆ ಎನ್ನುವುದನ್ನು ಕಡೆಗಣಿಸಿ, ಬಿಜೆಪಿಯವರು ಇಲ್ಲದ ವಕ್ಫ್ ವಿಷಯವನ್ನು ಕೈಗೆತ್ತಿಕೊಂಡು ಸುಳ್ಳು ಸರಮಾಲೆ ಕಟ್ಟಿ ಸಮಾಜ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ವಿಷಯದ ಮೂಲಕ ಸಮಾಜದಲ್ಲಿ ದ್ವೇಷ ಭಾವನೆ ಉಂಟು ಮಾಡಿ, ಮತಗಳ ಧ್ರುವೀಕರಣಗೊಳಿಸಲು ಬಿಜೆಪಿಯವರು ಹೊರಟಿದ್ದಾರೆ. ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ವಕ್ಫ್ ವಿಚಾರದಲ್ಲಿ ಯಾವ ರೈತರ ಭೂಮಿಯನ್ನು ಕಸಿದುಕೊಂಡಿಲ್ಲ. ಹಾವೇರಿಯಲ್ಲಿ ವಕ್ಫ್‌ ಸುಮಾರು ೫೩೦ ಪ್ರಕರಣ ಮುಸ್ಲಿಮರಿಗೆ ಸಂಬಂಧಿಸಿದವು. ಹಿಂದೂಗಳದ್ದು ಕೇವಲ ೫೫ ಪ್ರಕರಣ. ಅವುಗಳಲ್ಲಿ ರೈತರದ್ದು ೨೫-೩೦. ಬಿಜೆಪಿಯವರು ವಕ್ಫ್ ಕುರಿತು ಸುಳ್ಳು ಪ್ರಚಾರದಿಂದ ಜನರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಸಿಬಿಐ, ಇಡಿ, ಐಟಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದರು.

ಪ್ರಧಾನಿ ಮೋದಿ ವಚನಭ್ರಷ್ಟರಾಗಿದ್ದಾರೆ. ಅವರು ನೀಡಿದ್ದ ₹೧೫ ಲಕ್ಷ ಅಕೌಂಟಿಗೆ ಹಾಕುವ, ೨ ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಗಳನ್ನು ಈಡೇರಿಸಿಲ್ಲ. ಅವರು ನಡೆಸಿದ ಆಡಳಿತ ಶೈಲಿಯಿಂದಾಗಿ ಈ ಬಾರಿಯ ಲೋಕಸಭಾ ಚುನಾವಣೆಯ ನಂತರ ಅಧಿಕಾರದಲ್ಲಿ ಮುಂದುವರಿಯಲು ಎರಡು ರಾಜ್ಯಗಳ ಆಸರೆ ಪಡೆಯಬೇಕಾಯಿತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೊರೋನಾ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಲಾಗಿದೆ ಎಂದು ಟೀಕಿಸಿದರು.

ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಮಿಂಚಿನ ಸಂಚಾರ, ಅವರಿಗೆ ದೊರೆಯುತ್ತಿರುವ ಜನಸ್ಪಂದನ ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಸಂಸದ ಈ. ತುಕಾರಾಂ ತಾವು ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಕಣ್ಣಿಗೆ ಕಾಣುತ್ತಿವೆ. ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯಗಳು ಪಕ್ಷದ ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ ಅವರ ಕೈಹಿಡಿಯಲಿವೆ. ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಒಂದು ಪೈಸೆಯೂ ಭ್ರಷ್ಟಾಚಾರ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಮಾರು ೨೦ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗಲಿದ್ದಾರೆ ಎಂದು ಯಡಿಯೂರಪ್ಪ ಹೇಳುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಿದ್ದರಾಮಯ್ಯ ಕುರಿತು ಈ ರೀತಿ ಮಾತನಾಡಲು ಯಡಿಯೂರಪ್ಪ ಅವರಿಗೆ ನೈತಿಕ ಹಕ್ಕಿದೆಯಾ? ಸಿದ್ದರಾಮಯ್ಯ ಅವರನ್ನು ಚುನಾವಣಾ ಪ್ರಚಾರಕ್ಕೆ ಬಾರದಂತೆ ತಡೆಯಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಅಬ್ಬರದ ಪ್ರಚಾರ ನೋಡಿ ಬಿಜೆಪಿಯವರಿಗೆ ಗಾಬರಿಯಾಗಿದೆ. ಜಿಲ್ಲೆಯಲ್ಲಿ ಗಣಿ ಲೂಟಿಯಾಗಿದ್ದನ್ನು ನೋಡಿದ್ದೀರಿ. ಲೂಟಿ ಮಾಡಿದವರು ಇಂದು ಒಂದಾಗಿದ್ದಾರೆ. ಜನತೆ ಅಭಿವೃದ್ಧಿಯನ್ನು ನೋಡುತ್ತಾರೆ ಎಂದರು.

ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಕೆಪಿಸಿಸಿ ಉಪಾಧ್ಯಕ್ಷ ಎಆರ್‌ಎಂ ಹುಸೇನ್, ಪ್ರಧಾನ ಕಾರ್ಯದರ್ಶಿ ಷಣ್ಮುಖಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಮುಖಂಡರಾದ ಚೈತನ್ಯಾ, ಕೊಟ್ರೇಶ್ ಮುಂತಾದವರು ಉಪಸ್ಥಿತರಿದ್ದರು.