ಸಾರಾಂಶ
ಇದು ಗ್ಯಾರಂಟಿ ಸಮಾವೇಶ ಅಲ್ಲ. ಗ್ಯಾರಂಟಿಗಳ ಯಶಸ್ಸಿನ ಉತ್ಸವ ಎಂದು ಸಚಿವೆ ಹೇಳಿದರು. ಜಿಲ್ಲೆಯ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದರು.
ಉಡುಪಿ: ಇದು ಗ್ಯಾರಂಟಿ ಸಮಾವೇಶ ಅಲ್ಲ, ಗ್ಯಾರಂಟಿಗಳ ಯಶಸ್ಸಿನ ಉತ್ಸವ ಎಂದು ಜಿಲ್ಲಾ ಉಸ್ತುವಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬುಧವಾರ ಉಡುಪಿ ಜಿಲ್ಲಾಡಳಿತದ ವತಿಯಿಂದ ನಡೆದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಉಡುಪಿ ಜಿಲ್ಲೆಯ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದರು. ಈ ಗ್ಯಾರಂಟಿಗಳನ್ನು ಸರ್ಕಾರ ಸ್ವಾರ್ಥ ರಾಜಕಾರಣಕ್ಕಾಗಿ ಜಾರಿಗೊಳಿಸಿಲ್ಲ, ಕಾಂಗ್ರೆಸ್ ಜನರ ಭಾವನೆಗಳ ಜೊತೆ ಆಟ ಆಡುವುದಿಲ್ಲ, ಉಚಿತ ಗ್ಯಾರಂಟಿಗಳ ಮೂಲಕ ಜನರ ಬದುಕನ್ನು ಕಟ್ಟುವ ಕೆಲಸ ಮಾಡುತ್ತಿದೆ ಎಂದರು.ಉಡುಪಿಯ ಎಲ್ಲಾ 5 ಶಾಸಕರು ಬಿಜೆಪಿಯವರೇ ಆಗಿದ್ದರೂ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡಿಲ್ಲ. ಉಡುಪಿ ಜಿಲ್ಲೆಯಲ್ಲಿ ಶೇ. 90ರಷ್ಟು ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ತಲುಪಿಸಿದ್ದೇವೆ. ಈ ಯೋಜನೆಯ ಲಾಭ ಪಡೆಯುವಾಗ ನೀವು ಬಿಜೆಪಿ ಮತದಾರರಾ ಎಂದು ಕೇಳಿಲ್ಲ ಎಂದರು. ಬಿಜೆಪಿಯವರು ಅಂಬಾನಿ ಅದಾನಿಗೆ ಲಾಭ ಮಾಡಿದ್ರೇ ಅಭಿವೃದ್ಧಿಯಾ, ನಾವು ಜನರಿಗೆ ಲಾಭ ಆಗುವಂತೆ ಮಾಡಿದ್ರೇ ಅದು ಅಭಿವೃದ್ಧಿ ಅಲ್ಲವೇ ಎಂದು ಪ್ರಶ್ನಿಸಿದರು.ಬಿಜೆಪಿ ಎಂಪಿ ಅನಂತಕುಮಾರ್ ಹೆಗಡೆ ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳುತ್ತಿದ್ದಾರೆ, ಅವರೂ ಅದೇ ಸಂವಿಧಾನದಿಂದಾಗಿ ಎಂಪಿಯಾಗಿದ್ದಾರೆ ಎಂಬುದನ್ನು ಮರೆತಿದ್ದಾರೆ ಎಂದು ಹೇಳಿದರು.ಮಂಗಳೂರಿನ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೆ ಬಿಜೆಪಿಗೆ ಮತ ನೀಡುವಂತೆ ಹೇಳುತ್ತಿದ್ದಾರೆ, ಯಾಕೆ ಸಂವಿಧಾನವನ್ನು ಬದಲಾಯಿಸುವುದಕ್ಕೆ ಬಿಜೆಪಿಗೆ ಮತ ನೀಡಬೇಕೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಹೆಬ್ಬಾಳ್ಕರ್ ಆಗ್ರಹಿಸಿದರು.