ಬೇಸಿಗೆ ಮುನ್ನವೇ ಶಿಗ್ಗಾಂವಿ ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ

| Published : Mar 14 2024, 02:05 AM IST

ಬೇಸಿಗೆ ಮುನ್ನವೇ ಶಿಗ್ಗಾಂವಿ ತಾಲೂಕಿನಲ್ಲಿ ಕುಡಿಯುವ ನೀರಿನ ಅಭಾವ
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆ ಆರಂಭದಲ್ಲೇ ಶಿಗ್ಗಾಂವಿ ತಾಲೂಕಿನಲ್ಲಿ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗಿದೆ. ತಾಲೂಕಿನ 21 ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಅಭಾವ ಉಂಟಾಗಿದೆ.

ಬಸವರಾಜ ಎಸ್. ಹಿರೇಮಠ

ಶಿಗ್ಗಾಂವಿ: ಬೇಸಿಗೆ ಆರಂಭವಾಗುವ ಮುನ್ನವೇ ತಾಲೂಕಿನಲ್ಲಿ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಗಳು ಹೆಚ್ಚಿವೆ. ಮುಂಗಾರು ಮತ್ತು ಹಿಂಗಾರು ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ತಾಲೂಕಿನಾದ್ಯಂತ ಅಂತರ್ಜಲ ಮಟ್ಟ ಕುಸಿದಿದೆ. ಕುಡಿಯುವ ನೀರಿಗೆ ಉಪಯೋಗಿಸುವ ಕೊಳವೆಬಾವಿಗಳಲ್ಲಿ ನೀರು ಬರುತ್ತಿಲ್ಲ. ತಾಲೂಕಿನ 21 ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಅಭಾವ ಉಂಟಾಗಿದೆ. ತಡಸ, ಹೊಸೂರು, ಕೋಣನಕೇರಿ, ಅಂದಲಗಿ, ಎನ್.ಎಂ. ತಡಸ, ಹಿರೇಬೆಂಡಿಗೇರಿ, ಹುಲಗೂರ, ವನಹಳ್ಳಿ ಸೇರಿದಂತೆ 52 ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಈ ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ಖಾಸಗಿ ಕೊಳವೆ ಬಾವಿಗಳನ್ನು ಬಳಸಿಕೊಂಡು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ತಿಂಗಳಾಂತ್ಯಕ್ಕೆ ಇಂತಹ ಗ್ರಾಮಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಈಗಾಗಲೇ ತಾಲೂಕಿನ ಹಿರೇಮಲ್ಲೂರ ಪ್ಲಾಟ್ ಗ್ರಾಮದಲ್ಲಿ ಖಾಸಗಿ ಕೊಳವೆ ಬಾವಿ ಬಳಸಿ ಪೈಪ್‌ಲೈನ್‌ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ.ನೀರು ಸರಬರಾಜು ಕುರಿತು ಈಗಾಗಲೇ ೨೭೧ ಖಾಸಗಿ ಕೊಳವೆಬಾವಿ ಮಾಲಿಕರಿಗೆ ಸೂಚಿಸಲಾಗಿದೆ. ಈ ಬಗ್ಗೆ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಚರ್ಚಿಸಿ, ಆ ಸಮಿತಿಯ ನಿರ್ದೇಶನದಂತೆ ಸಭೆ ಮಾಡಿ ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಅನೇಕ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಸವಾಲು ತಾಲೂಕು ಆಡಳಿತಕ್ಕೆ ಎದುರಾಗಲಿದೆ. ತಾಲೂಕಿನ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. ಈ ಮಧ್ಯೆ ನೀರು ಪೋಲಾಗುವುದನ್ನೂ ತಡೆಯುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಈ ಕುರಿತು ನೀರುಗಂಟಿಗಳಿಗೆ ಸೂಕ್ತ ನಿರ್ದೇಶನ ನೀಡುವ ಆವಶ್ಯಕತೆ ಇದೆ.ಜಾನುವಾರಿಗೆ ತೊಟ್ಟಿ: ತಾಲೂಕಿನಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಆದರೆ ಅವು ಸ್ವಚ್ಛವಾಗಿಲ್ಲ. ತೊಟ್ಟಿಗಳಿಗೆ ಸದ್ಯ ನೀರು ಪೂರೈಸುತ್ತಿಲ್ಲ. ತೊಟ್ಟಿಗಳನ್ನು ಸ್ವಚ್ಛಗೊಳಿಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕಿದೆ. ವಾಡಿಕೆಯಂತೆ ಮಳೆಗಾಲ ಪ್ರಾರಂಭವಾಗಲು ೨-೩ ತಿಂಗಳು ಬಾಕಿ ಇದ್ದು, ಮಧ್ಯಂತರದಲ್ಲಿ ಮಳೆ ಬಾರದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ. ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಹಾಗೂ ತಾಲೂಕು ಮತ್ತು ಸ್ಥಳೀಯ ಆಡಳಿತ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವ ಬದ್ಧತೆ ತೋರಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.ತಾಲೂಕಿನ ಅಂದಗಿ ಗ್ರಾಮದಲ್ಲಿ ಒಟ್ಟು ೭ ಕೊಳವೆಬಾವಿಗಳಿದ್ದು, ನಾಲ್ಕು ಕೊಳವೆಬಾವಿಗಳಿಂದ ಕುಡಿಯವ ನೀರಿನ ವ್ಯವಸ್ಥೆಯಿದೆ. ಅದರಲ್ಲಿ ಮೂರು ಕೊಳವೆಬಾವಿಗಳು ನೀರಿನ ಮಟ್ಟ ಕಡಿಮೆಯಾಗಿದೆ. ಒಂದೇ ಕೊಳವೆಬಾವಿಯಿಂದ ನೀರು ಪೂರೈಸಲಾಗುತ್ತಿದೆ. ಇದೀಗ ನಾಲ್ಕು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುವಂತಾಗಿದೆ.ಶಿಗ್ಗಾಂವಿ ತಾಲೂಕಿನಲ್ಲಿ ಒಟ್ಟು ೮೭ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅದರಲ್ಲಿ ೫ ಘಟಕಗಳು ಬೇರೆಡೆ ಸ್ಥಳಾಂತರ ಮಾಡಬೇಕಿದೆ. ಉಳಿದ ೫ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡುವ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ ಎಂದು ಜಿಪಂ ಎಇಇ ಸಿ.ಜಿ. ಜಿನಗಾ ಹೇಳುತ್ತಾರೆ. ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ನೀರಿನ ಅಭಾವ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ಡು, ಗ್ರಾಮಸ್ಥರು ನೀರಿನ ಮಿತ ಬಳಕೆಯ ಬಗ್ಗೆ ಗಮನಹರಿಸಬೇಕಾಗಿದೆ. ನಳಗಳ ಮೂಲಕ ನೀರು ಪೋಲಾಗದಂತೆ ಎಚ್ಚರ ವಹಿಸಬೇಕಾಗಿದೆ. ಇದಕ್ಕಾಗಿ ಪ್ರತಿ ಗ್ರಾಪಂ, ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಮಿತ ಬಳಕೆಯ ಕುರಿತು ತಿಳಿ ಹೇಳುವ ಕಾರ್ಯಕ್ರಮಗಳನ್ನು ಆಯೋಜಿಸುವ ಅನಿವಾರ್ಯತೆ ಇದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಪಿ. ಪಾಲಯ್ಯನಕೊಟೆ ಹೇಳುತ್ತಾರೆ.