ಬಿಜೆಪಿ ಮತ ಕಳ್ಳತನ, ಕಾಂಗ್ರೆಸ್ ಮತ ಖರೀದಿ : ಕೃಷ್ಣಮೂರ್ತಿ

| Published : Sep 30 2025, 12:00 AM IST

ಸಾರಾಂಶ

ಚಿಕ್ಕಮಗಳೂರು, ದೇಶದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕಾಗಿ ಮತ ಕಳ್ಳತನದಲ್ಲಿ ತೊಡಗಿದರೆ, ಕಾಂಗ್ರೆಸ್ ಪಕ್ಷ ಆಡಳಿತಾವಧಿಯಲ್ಲಿ ಮತಗಳನ್ನು ಖರೀದಿಸಿ ಅಧಿಕಾರ ಗಿಟ್ಟಿಸಿಕೊಂಡು ಬಹುಸಂಖ್ಯಾ ತ ಸಮುದಾಯಕ್ಕೆ ದ್ರೋಹವೆಸಗಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಆರೋಪಿಸಿದರು.

- ಎರಡು ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು । ಜಿಲ್ಲಾ ಸಮಿತಿ ಸಮೀಕ್ಷಾ ಸಭಾ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ದೇಶದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕಾಗಿ ಮತ ಕಳ್ಳತನದಲ್ಲಿ ತೊಡಗಿದರೆ, ಕಾಂಗ್ರೆಸ್ ಪಕ್ಷ ಆಡಳಿತಾವಧಿಯಲ್ಲಿ ಮತಗಳನ್ನು ಖರೀದಿಸಿ ಅಧಿಕಾರ ಗಿಟ್ಟಿಸಿಕೊಂಡು ಬಹುಸಂಖ್ಯಾ ತ ಸಮುದಾಯಕ್ಕೆ ದ್ರೋಹವೆಸಗಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಆರೋಪಿಸಿದರು.ನಗರದ ಡಾ. ಬಿ.ಆರ್.ಅಂಭೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದಿಂದ ಆಯೋಜಿಸಿದ್ಧ ಜಿಲ್ಲಾ ಸಮಿತಿ ಸಮೀಕ್ಷಾ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಸಂವಿಧಾನದ ಆಶಯಕ್ಕೆ ವಿರುದ್ಧ ದೇಶವನ್ನಾಳಿದ ಎರಡು ರಾಷ್ಟ್ರೀಯ ಪಕ್ಷಗಳು ಮತ ಖರೀದಿ ಮತ್ತು ಮತಗಳ್ಳತನ ನಡೆಸಿ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದ್ದು ಇವೆರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಈ ವಿರುದ್ಧ ನ್ಯಾಯಾಧೀಶರು ತನಿಖೆ ನಡೆಸಿ ಸಂಬಂಧಿಸಿದ ರಾಜಕೀಯ ಮುಖಂಡರು, ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಕೇಂದ್ರ ಸರ್ಕಾರ ಹಲವಾರು ವರ್ಷಗಳಿಂದ ಭೂಮಿ ಉಳುಮೆ ಮಾಡಿಕೊಂಡಿರುವ ರೈತನಿಗೆ ಸೂಕ್ತ ದಾಖಲಾಗಿ ಒದಗಿಸಿ ದರೆ ಭೂಮಿ ವಿತರಿಸಲು ಮೀನಾಮೇಷ ಎಣಿಸುತ್ತಿದೆ. ಅದೇ ಅಂಬಾನಿ, ಅದಾನಿಗಳಂಥ ದೊಡ್ಡ ದೊಡ್ಡ ಉದ್ಯಮಿಗಳಿಗೆ ಪುಕ್ಕಟ್ಟೆಯಾಗಿ ಸಾವಿರಾರು ಎಕರೆ ಭೂಪ್ರದೇಶ ನೀಡಿ, ಬಡ ಜನರಿಗೆ ಮೋಸ ಮಾಡುತ್ತಿವೆ ಎಂದು ಆರೋಪಿಸಿದರು.ಸತತ 11 ವರ್ಷಗಳಿಂದ ಪ್ರಧಾನಿಯಾದ ಮೋದಿ ಶೂನ್ಯ ಸಾಧನೆ ಮಾಡಿದ್ದಾರೆ. ಅವರ ಅವಧಿಯಲ್ಲಿ ರೈತರ ಆದಾಯ ದ್ವಿಗುಣವಾಗಿಲ್ಲ. ಆತ್ಮಹತ್ಯೆ ಸಂಖ್ಯೆ ಹೆಚ್ಚಳ, ಇಂದಿಗೂ ರಸಗೊಬ್ಬರಕ್ಕಾಗಿ ರೈತರ ಪರದಾಟ, ಬಡವರಿಗೆ ಸ್ವಂತ ಮನೆ, ಗ್ಯಾಸ್ ಸೌಲಭ್ಯ ನೀಡುತ್ತೇವೆಂದು ಹೇಳಿ ಅರ್ಜಿ ಸಲ್ಲಿಸಿದರೂ ನಿವೇಶನ ನೀಡಿಲ್ಲ. ಕೇವಲ ಬಾಯಿ ಮಾತಲ್ಲಿ ಅಭಿವೃದ್ಧಿ ಎಂದು ಘೋಷಿಸುತ್ತಿದ್ದಾರೆ ಎಂದರು. ದೇಶದ ಶೇ. 66 ರಷ್ಟು ಯುವ ಜನತೆಗೆ ಕೇಂದ್ರ ಸರ್ಕಾರ ಉದ್ಯೋಗ ಕಲ್ಪಿಸದೇ ವಿಫಲತೆ ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರ ಸಂಬಂಧ ಕ್ಷೀಣಿಸುತ್ತಿರುವ ಕಾರಣ ಅಮೇರಿಕಾ ಭಾರತದ ಮೇಲೆ ಅತಿಹೆಚ್ಚು ತೆರಿಗೆ ವಿಧಿಸಿದೆ ಜೊತೆಗೆ ರುಪಾಯಿ ಮೌಲ್ಯ ಕುಸಿದಿದೆ. ಇದರಿಂದ ದೇಶದ ಅರ್ಥವ್ಯ ವಸ್ಥೆ ಮೇಲೆ ಬಹಳಷ್ಟು ಅಪಾಯ ತಂದೊಡ್ಡಿದೆ ಎಂದು ಎಚ್ಚರಿಸಿದರು.

ಸದ್ಯದಲ್ಲೇ ಬಿಹಾರ ರಾಜ್ಯದ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಿಎಸ್‌ಟಿ ಇಳಿಸಿ ಜನ ಸಾಮಾನ್ಯರ ಉದ್ದಾರ ಮಾಡಿದ್ದೇವೆ ಎಂದು ಹೇಳುತ್ತಿದೆ. ಆದರೆ ಮೊದಲು ಜಿಎಸ್‌ಟಿ ವಿಪರೀತ ಏರಿಸಿ, ಈಗ ಸ್ವಲ್ಪಮಟ್ಟಿನ ಇಳಿಕೆಗೊಳಿಸಿ ಸಾಧನೆಯೆಂಬಂತೆ ಬಿಂಬಿಸಿಕೊಂಡು ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರ ಮಾಡುತ್ತಿದೆ ಎಂದು ದೂರಿದರು.ಉಚಿತ ಬಸ್‌: ರಾಜ್ಯದ ಜನರು ಉಚಿತ ಬಸ್, ವಿದ್ಯುತ್ ಸೌಲಭ್ಯ ಕಲ್ಪಿಸಿ ಎಂದು ಕೇಳಿರಲಿಲ್ಲ. ಅಧಿಕಾರಕ್ಕಾಗಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಜನರಿಂದ ಹಣ ಕಸಿದು, ಜನರಿಗೆ ನೀಡುವ ಪದ್ಧತಿ ಕಾಂಗ್ರೆಸ್ ಮಾಡುತ್ತಿದೆ. ಬದಲಾಗಿ ಬಡ ವರ್ಗದ ಜನರಿಗೆ ಉಚಿತ ಆರೋಗ್ಯ, ಶಿಕ್ಷಣ ಸೌಲಭ್ಯ ಹಾಗೂ ಯುವಕರಿಗೆ ಉದ್ಯೋಗ ಕಲ್ಪಿಸಿದರೆ ಸ್ವಾವಲಂಬಿ ಜೀವನಕ್ಕೆ ದಾರಿಯಾಗುತ್ತಿತ್ತು ಎಂದು ಹೇಳಿದರು.

ದೇಶ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುವ ಎರಡು ಪಕ್ಷಗಳು ಅಂಬೇಡ್ಕರ್ ಆಶಯಕ್ಕೆ ಕೊಡಲಿಪೆಟ್ಟು ಹಾಕಿದ್ದು ಬಹು ಸಂಖ್ಯಾತರು ಜಾಗೃತರಾಗಬೇಕು. ಮುಂದಿನ ಎಲ್ಲಾ ಚುನಾವಣೆಗಳಲ್ಲಿ ರಾಷ್ಟ್ರದ ಮೂರನೇ ಅತಿದೊಡ್ಡ ಪಕ್ಷ ಹಾಗೂ ಅಂಬೇಡ್ಕರ್ ಆಶಯ ಅಳವಡಿಸಿಕೊಂಡಿರುವ ಬಿಎಸ್ಪಿ ಯನ್ನು ಬಲಪಡಿಸುವ ಮೂಲಕ ಮುಖ್ಯಮಂತ್ರಿ, ಪ್ರಧಾನಿಗಳಾಗಿಸಲು ಎಂದರು.

ಬಿಎಸ್ಪಿ ರಾಜ್ಯ ಉಸ್ತುವಾರಿ ದಿನೇಶ್ ಗೌತಮ್ ಮಾತನಾಡಿ, ಅಂಬೇಡ್ಕರ್ ನೀಡಿದಂತಹ ಮತದಾನ ಹಕ್ಕು ಪವಿತ್ರ ವಾದದು. ದೇಶದಲ್ಲಿ ಉದ್ಯಮಿಗಳು, ಸಿರಿವಂತರಿದ್ದು ಆಳ್ವಿಕೆ ನಡೆಸಲು ಹಣದಿಂದ ಸಾಧ್ಯವಿಲ್ಲ. ಮತದಾನ ಬ್ರಹ್ಮಸ್ತ್ರ. ಹೀಗಾಗಿ ಮುಂದಿನ ಚುನಾವಣೆಗಳಲ್ಲಿ ಅಂಬೇಡ್ಕರ್, ಕಾನ್ಸಿರಾಮ್‌ ಚಿಂತನೆಯುಳ್ಳ ಬಿಎಸ್ಪಿ ಪರವಾಗಿ ಮತಯಾಚಿಸಬೇಕು ಎಂದು ಮನವಿ ಮಾಡಿದರು.

ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಜಿಲ್ಲೆಯ ಪ್ರತಿ ಪಂಚಾಯಿತಿ, ಬೂತ್, ತಾಲೂಕು, ಜಿಪಂ ಮಟ್ಟದಿಂದ ಪದಾಧಿಕಾರಿಗಳನ್ನು ಕರೆಸಿ ಪಕ್ಷದ ನಿಲುವನ್ನು ಮನದಟ್ಟು ಮಾಡಿ ಬೂತ್‌ಮಟ್ಟದಿಂದಲೇ ಪಕ್ಷ ಸಂಘಟಿಸುವ ಮೂಲಕ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ವಿಜಯ ಸಾಧಿಸಬೇಕು ಚಿಂತನೆ ನಡೆಸಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಸ್ಪಿ ಜಿಲ್ಲಾಧ್ಯಕ್ಷ ಪಿ.ಪರಮೇಶ್ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕೀರ್‌ ಹುಸೇನ್, ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್, ಕಾರ್ಯದರ್ಶಿ ಕೆ.ಬಿ.ಸುಧಾ, ಮುಖಂಡರಾದ ವೇಲಾಯುಧನ್, ಗಂಗಾಧರ್, ಶಂಕರ್, ಕೆ.ಎಂ.ಗೋಪಾಲ್, ಮಂಜಯ್ಯ, ಬಾಬು, ಆನಂದ್, ತಂಬನ್, ಪುಟ್ಟಸ್ವಾಮಿ, ಕಿರಣ್‌ಕುಮಾರ್ ಇದ್ದರು

29 ಕೆಸಿಕೆಎಂ 4ಚಿಕ್ಕಮಗಳೂರಿನ ಡಾ. ಬಿ.ಆರ್.ಅಂಭೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದಿಂದ ಆಯೋಜಿಸಿದ್ಧ ಜಿಲ್ಲಾ ಸಮಿತಿ ಸಮೀಕ್ಷಾ ಸಭಾ ಕಾರ್ಯಕ್ರಮವನ್ನು ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಉದ್ಘಾಟಿಸಿದರು.