- ಕೇಂದ್ರ ಮಾಜಿ ಸಚಿವ ಸಿದ್ದೇಶ್ವರ ವಿಶ್ವಾಸ । ಹರಿಹರದಲ್ಲಿ ಪಂ.ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ

- - -

ಕನ್ನಡಪ್ರಭ ವಾರ್ತೆ ಹರಿಹರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 12 ವರ್ಷಗಳ ಅವಧಿಯಲ್ಲಿ ದೇಶದ ಸಮಗ್ರ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಲಾಭದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ, ಬಿಜೆಪಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಿದಲ್ಲಿ, 2028ರ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂದು ಮಾಜಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಶಿವಮೊಗ್ಗ ರಸ್ತೆಯ ಎಚ್.ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಬಿಜೆಪಿ ಏರ್ಪಡಿಸಿದ್ದ ಪಂಡಿತ್‌ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದಲ್ಲಿ ಅವರು ಮಾತನಾಡಿದರು. ದೇಶದ ಅನ್ನದಾತರ, ಬಡವರ, ಹಿಂದುಳಿದವರ, ಅಲ್ಪ ಸಂಖ್ಯಾತರ, ನಿರುದ್ಯೋಗಿಗಳ ಹಾಗೂ ನಗರ- ಗ್ರಾಮಾಂತರ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ, 12 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದಲ್ಲಿ ಹಲವಾರು ಯೋಜನೆ, ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಭೇಟಿ ಪಡಾವೋ- ಭೇಟಿ ಬಚಾವೋ, ಉಜ್ವಲಾ, ಪಿ.ಎಂ,ಕಿಸಾನ್, ನಮ್ಮ ಭೂಮಿ ನಮ್ಮ ದಾರಿ ಯೋಜನೆ, ಮನೆಗೊಂದು ಶೌಚಾಲಯ ನಿರ್ಮಾಣ, ಮನೆಗಳ ಮೇಲೆ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳ ಅಳವಡಿಕೆ, ಚತುಷ್ಪಥ ಹೆದ್ದಾರಿ, ಜನೌಷಧಿ ಕೇಂದ್ರ, ಫಸಲ್ ಭೀಮಾ ಯೋಜನೆ, ಗ್ರಾಮ್ ಸಡಕ್ ರಸ್ತೆ ಅಭಿವೃದ್ಧಿ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ಸಮಗ್ರ ಅಭಿವೃದ್ಧಿ ಯೋಜನೆಗಳ ಕುರಿತು ಕ್ಷೇತ್ರದ ಮತದಾರರಿಗೆ ಅರಿವು ಮೂಡಿಸುವಲ್ಲಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಕುರಿತು ಅದ್ಯಯನ ಮಾಡಬೇಕೆಂದು ಅವರು ತಿಳಿಸಿದರು.


ಬಿಜೆಪಿ ಶಿವಮೊಗ್ಗ ವಿಭಾಗದ ಶಾರೀರಿಕ ಪ್ರಮುಖ ಪ್ರಕಾಶ ಅರಳಿ ಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಗರ ಬಿಜೆಪಿ ಅಧ್ಯಕ್ಷ ಅಜಿತ್ ಸಾವಂತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಐರಣಿ ಅಣ್ಣೇಶ, ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ, ನಗರಸಭೆ ಮಾಜಿ ಸದಸ್ಯರಾದ ಆಟೋ ಹನುಮಂತಪ್ಪ, ಅಶ್ವಿನಿ ಕೃಷ್ಣ, ಗ್ರಾಮಾಂತರ ಅಧ್ಯಕ್ಷ ಎಂ.ಪಿ. ಲಿಂಗರಾಜ ಹಿಂಡಸಘಟ್ಟ, ಸಿದ್ದೇಶ ಬೆಣ್ಣಿಹಳ್ಳಿ, ಕಾರ್ಯದರ್ಶಿಗಳಾದ ಮಂಜಾನಾಯ್ಕ, ತುಳಜಪ್ಪ ಭೂತೆ, ಸಂತೋಷ ಗುಡಿಮನಿ, ಅಣ್ಣಪ್ಪ ಲೋಕಿಕೆರೆ, ನಗರ ಮತ್ತು ಗ್ರಾಮಾಂತರ ಮಂಡಲ ಪದಾಧಿಕಾರಿಗಳು, ಬೂತ್ ಪ್ರಮುಖರು, ಶಕ್ತಿ ಕೇಂದ್ರ ಪ್ರಮುಖರು, ಮಹಾಶಕ್ತಿ ಕೇಂದ್ರ ಪ್ರಮುಖರು ಸೇರಿದಂತೆ, ಕಾರ್ಯಕರ್ತರು ಭಾಗವಹಿಸಿದ್ದರು.

ಸಮಾರಂಭದಲ್ಲಿ ಪ್ರಮೀಳಾ ನಲ್ಲೂರು ಹಾಗೂ ಸಂಗಡಿಗರು ವಂದೇ ಮಾತರಂ ಗೀತೆ ಹಾಡಿದರು. ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು.

- - -

(ಬಾಕ್ಸ್‌) * ಬಿಜೆಪಿ ನಿಷ್ಠಾವಂತ ದೇಶಭಕ್ತರ ಪಕ್ಷ: ಹರೀಶ್ ಹರಿಹರ ಕ್ಷೇತ್ರ ಶಾಸಕ ಬಿ.ಪಿ ಹರೀಶ್ ಮಾತನಾಡಿ, ಪ್ರಧಾನಿ ಮೋದಿಜಿ ನೇತೃತ್ವದ ಬಿಜೆಪಿ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾರಣ, ಭಾರತದ ಮೇಲೆ ದ್ವೇಷಭಾವನೆಯ ಕೆಂಗಣ್ಣಿನಿಂದ ನೋಡುತ್ತಿದ್ದ ಅನ್ಯ ದೇಶದವರೆಲ್ಲಾ ಇಂದು, ನಮ್ಮತ್ತ ತಿರುಗಿ ನೋಡುವಂತಾಗಿದೆ. ಅವರಿಂದಾಗಿ ಇಂದು ಭಾರತ ನೆಮ್ಮದಿಯ ತಾಣವಾಗಿದೆ. ಅಪ್ಪಟ ದೇಶಭಕ್ತರಾದ ಪಂ. ದೀನದಯಾಳ ಉಪಾಧ್ಯಾಯರಿಂದ 1951 ರಲ್ಲಿ ಸ್ಥಾಪಿತಗೊಂಡಿರುವ ಭಾರತೀಯ ಜನತಾ ಪಾರ್ಟಿ, ಅನೇಕ ನಿಷ್ಠಾವಂತ ದೇಶಭಕ್ತರ ಪಕ್ಷವಾಗಿದೆ ಎಂದರು. ಹಲವಾರು ವರ್ಷಗಳಿಂದ ತನ್ನ ನೆಲೆಯನ್ನೇ ಕಾಣದ ಬಿಜೆಪಿ ಇಂದು, ಪಶ್ಚಿಮ ಬಂಗಾಳ, ಬಿಹಾರದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅದಕ್ಕೆ ಬಿಜೆಪಿ ಎಲ್ಲ ಹಂತದ ಕಾರ್ಯಕರ್ತರ ಶ್ರಮವೇ ಮೂಲಕಾರಣ. ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಶಿ, ಶ್ಯಾಮ್‌ಪ್ರಕಾಶ ಮುಖರ್ಜಿ ಅವರು ದೇಶದ ಸಮಗ್ರ ಅಭಿವೃದ್ಧಿಗಾಗಿ ಬಹಳಷ್ಟು ಶ್ರಮಿಸಿದ್ದಾರೆ ಎಂದರು.

- - -

-30HRR.01:

ಹರಿಹರದ ಎಚ್.ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಪಂಡಿತ್‌ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನವನ್ನು ಹರಿಹರ ಕ್ಷೇತ್ರ ಶಾಸಕ ಬಿ.ಪಿ. ಹರೀಶ್ ಉದ್ಘಾಟಿಸಿದರು.