ಸಂಡೂರಲ್ಲಿ ಬಿಜೆಪಿ ಬಾವುಟ ಹಾರಲಿದೆ: ಬಿ. ಶ್ರೀರಾಮುಲು

| Published : Oct 30 2024, 12:36 AM IST

ಸಾರಾಂಶ

ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಈ ಬಾರಿ ಬದಲಾವಣೆ ನಿಶ್ಚಿತ ಹಾಗೂ ಬಿಜೆಪಿ ಬಾವುಟ ಹಾರುವುದು ಖಚಿತ ಎಂದು ಮಾಜಿ ಮಂತ್ರಿ ಬಿ. ಶ್ರೀರಾಮುಲು ಹೇಳಿದರು.

ಸಂಡೂರು: ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಈ ಬಾರಿ ಬದಲಾವಣೆ ನಿಶ್ಚಿತ ಹಾಗೂ ಬಿಜೆಪಿ ಬಾವುಟ ಹಾರುವುದು ಖಚಿತ ಎಂದು ಮಾಜಿ ಮಂತ್ರಿ ಬಿ. ಶ್ರೀರಾಮುಲು ಹೇಳಿದರು.

ಮಂಗಳವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತ ಪರ ಭರ್ಜರಿಯಾಗಿ ಪ್ರಚಾರ ನಡೆಸಿ, ಮತಯಾಚಿಸಿದರು.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ವಾಲ್ಮೀಕಿ ನಿಗಮದ ₹೧೮೭ ಕೋಟಿ ಹಣವನ್ನು ಲೂಟಿ ಮಾಡಲಾಗಿದೆ. ಜನತೆ ಇದನ್ನು ಪ್ರಶ್ನಿಸಬೇಕು. ನಿಗಮದ ಹಣವನ್ನು ಸಮಾಜದ ಒಳಿತಿಗಾಗಿ ಖರ್ಚು ಮಾಡಿದ್ದರೆ ಬಡವರಿಗೆ ಅನುಕೂಲವಾಗುತ್ತಿತ್ತು. ಕ್ಷೇತ್ರದ ಅಭಿವೃದ್ಧಿಗಾಗಿ ಜನತೆ ಈ ಬಾರಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಬೆಂಬಲಿಸಿ, ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿ ಬಂಗಾರು ಹನುಮಂತು ಮಾತನಾಡಿ, ಕ್ಷೇತ್ರದ ಜನತೆ ಹಲವು ವರ್ಷಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುತ್ತ ಬಂದಿದ್ದಾರೆ. ಕ್ಷೇತ್ರ ಅಭಿವೃದ್ಧಿಯಾಗಿಲ್ಲ. ಎಲ್ಲ ಗ್ರಾಮಗಳಲ್ಲಿ ಮೂಲಸೌಕರ್ಯಗಳ ಕೊರತೆ ಕಂಡು ಬರುತ್ತಿದೆ. ಬಿಜೆಪಿ ಅಭ್ಯರ್ಥಿಯಾದ ನಾನು ಸಂಡೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇನೆ. ಆದ್ದರಿಂದ, ಈ ಬಾರಿಯ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ, ಜನರ ಸೇವೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

ಶಾಸಕ ಗಾಲಿ ಜನಾರ್ದನರೆಡ್ಡಿ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ದಿವಾಕರ ಅವರು ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತು ಅವರ ಪರವಾಗಿ ಪ್ರಚಾರ ಮಾಡಿ ಮತ ಯಾಚಿಸಿದರು. ಪಕ್ಷದ ಮುಖಂಡರು ತಾಲೂಕಿನ ಆರ್. ಮಲ್ಲಾಪುರ, ಯು. ರಾಜಾಪುರ, ಉಬ್ಬಲಗುಂಡಿ, ಮಾಳಾಪುರ, ಬನ್ನಿಹಟ್ಟಿ, ಗಂಗಲಾಪುರ, ನಾಗಲಾಪುರ, ತಾಳೂರು, ಜೋಗ, ವಡ್ಡು, ಎಸ್. ಬಸಾಪುರ ಹಾಗೂ ಕುರೆಕುಪ್ಪ ಗ್ರಾಮಗಳಲ್ಲಿ ಪ್ರಚಾರ ಕಾರ್ಯಕೈಗೊಂಡರು.

ಮಾಜಿ ಶಾಸಕ ತಿಪ್ಪೇಸ್ವಾಮಿ, ರಾಮಚಂದ್ರರೆಡ್ಡಿ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎನ್. ಸೋಮಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ಮುಖಂಡರಾದ ಎಂ. ಸುರೇಶ್, ಎಂ. ಈಶಪ್ಪ, ಹೊನ್ನೂರಸ್ವಾಮಿ, ಎಚ್. ವೀರೇಶ್, ಜಂಬಯ್ಯ, ನಿಂಗಮ್ಮ ನಾಗಯ್ಯ, ಆಂಜನೇಯ, ಎಸ್. ಆಂಜನೇಯ, ಎನ್. ತಿಪ್ಪೇಸ್ವಾಮಿ, ಚಂದ್ರಸ್ವಾಮಿ, ಎಂ. ವಿಜಯಕುಮಾರ, ಸಿದ್ದಲಿಂಗ, ಬಸವರಾಜ ಉಪಸ್ಥಿತರಿದ್ದರು.