ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮೈತ್ರಿಯಲ್ಲಿ ಹಾಸನ ಲೋಕಸಭಾ ಕ್ಷೇತ್ರವು ಬಿಜೆಪಿಗೆ ಸಿಗಲಿದೆ ಎಂಬುವ ವಿಶ್ವಾಸವಿದ್ದು, ಇನ್ನು ಯತ್ನಾಳ್ ಹೇಳಿಕೆಯಿಂದ ನಮ್ಮ ಪಕ್ಷಕ್ಕೆ ಯಾವ ಡ್ಯಾಮೇಜ್ ಆಗುವುದಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ತಿಳಿಸಿದರು. ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದಲೂ ಮೂರ್ನಾಲ್ಕು ಜನ ಆಕಾಂಕ್ಷಿಗಳು ಇದ್ದಾರೆ. ಆದರೆ ಯಾರು ಗೆಲ್ತಾರೆ ಎನ್ನೋ ಸರ್ವೆ ಮೇಲೆ ಎಲ್ಲವೂ ನಿರ್ಧಾರ ಆಗಲಿದೆ. ಕೆಲ ಬಿಜೆಪಿ ಹಿರಿಯ ನಾಯಕರ ಅಸಮಾಧಾನ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಎಲ್ಲರೂ ಒಂದಾಗಿಯೇ ಚುನಾವಣೆ ಎದುರಿಸುತ್ತೇವೆ. ವಿ. ಸೋಮಣ್ಣ ಸೇರಿದಂತೆ ಎಲ್ಲರು ಒಂದಾಗಿ ಹೆಚ್ಚು ಕೆಲಸ ಮಾಡುತ್ತೇವೆ. ಯಾವ ಹಿರಿಯರಿಗೂ ಬೇಸರ ಆಗದಂತೆ ಕೆಲಸ ಆಗುತ್ತದೆ ಎಂದರು.ಸಂಸದ ಪ್ರಜ್ವಲ್ ವಿರುದ್ಧ ಅಕ್ರಮ ಭೂ ಪರಭಾರೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಯಾವುದೇ ವ್ಯಕ್ತಿಯ ವೈಯಕ್ತಿಕ ವಿಚಾರಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ರಾಜಕೀಯವಾಗಿ ಎಷ್ಟೇ ವಿರೋಧಿ ಆಗಿದ್ದರು ಕೂಡ ನಾನು ಇನ್ನೊಬ್ಬರ ಬಗ್ಗೆ ಮಾತನಾಡಲ್ಲ. ಅವರ ವೈಯಕ್ತಿಕ ವಿಚಾರ ಅವರಿಗೆ ಬಿಟ್ಟದ್ದು. ಇದರಲ್ಲಿ ರಾಜಕೀಯ ಬೆರೆಸಲ್ಲ ಎಂದು ದೋಸ್ತಿ ಪಕ್ಷದ ಸಂಸದನ ಬಗ್ಗೆ ಸಾಫ್ಟ್ ಕಾರ್ನರ್ ವ್ಯಕ್ತಪಡಿಸಿದರು.
ಕಾನೂನು ಇದೆ ಕಾನೂನು ಚೌಕಟ್ಟಿನಲ್ಲಿ ಏನು ಆಗಬೇಕೊ ಅದು ಆಗುತ್ತೆ. ನನ್ನ ವಿಚಾರಕ್ಕೆ ಯಾರಾದ್ರು ಮಾತಾಡಿದರೆ ಮಾತ್ರ ನಾನು ಮಾತಾಡಿದ್ದೇನೆ ಅಷ್ಟೇ. ನಾನಾಗೇ ಯಾವುದೇ ವಿಚಾರ ಹುಡುಕಿಕೊಂಡು ಹೋಗಿ ಮಾತಾಡಲ್ಲ. ಕಾನೂನಾತ್ಮಕವಾಗಿ ಯಾರಿಗಾದ್ರು ಅನ್ಯಾಯ ಆಗಿದ್ದರೆ ಅವರಿಗೆ ನ್ಯಾಯ ಒದಗಿಸಿಕೊಡಲು ಪಕ್ಷ ಕೆಲಸ ಮಾಡುತ್ತೇನೆ. ನಾನು ಯಾರ ಮೇಲೂ ಸಾಫ್ಟ್ ಕಾರ್ನರ್ ಹೊಂದಿಲ್ಲ. ನಾನು ಹಾರ್ಡ್ ಇರೋದಕ್ಕೆ ಪಕ್ಷ ನನಗೆ ಜವಾಬ್ದಾರಿ ಕೊಟ್ಟಿದೆ ಎಂದು ಉತ್ತರಿಸಿದರು.ಕಳೆದ ಆರು ವರ್ಷಗಳಲ್ಲಿ ಇದ್ದ ಆಡಳಿತ ವಿರೋಧಿ ಅಲೆ ಕೇವಲ ಆರು ತಿಂಗಳಲ್ಲಿ ಹತ್ತು ಪಟ್ಟು ಆಗಿದೆ. ಜನರಲ್ಲಿ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದೆ. ಯಾವುದೆ ಗ್ಯಾರಂಟಿ ಸಮರ್ಪಕವಾಗಿ ಜಾರಿ ಆಗುತ್ತಿಲ್ಲ. ಯಾವುದೇ ಮಾತುಗಳು ಸರ್ಕಾರ ನಡೆಸೋರ ಮಾತುಗಳಲ್ಲ. ರೈತರು ಬರಗಾಲ ಬರೊದನ್ನೆ ಕಾಯ್ತಾರೆ ಎನ್ನೋದು, ಸಿದ್ದರಾಮಯ್ಯ ಅವರು ದೇಶದ ಸಂಪತ್ತಲ್ಲಿ ನಿಮಗೆ ಪಾಲಿದೆ ಎನ್ನೋದು, ಆಡಳಿತ ನಡೆಸೋರು ಮಾತನಾಡಬಾರದ ಅನುಷ್ಠಾನ ಮಾಡಬೇಕು. ಆದರೇ ಅನುಷ್ಠಾನ ಮಾಡೊದನ್ನ ಬಿಟ್ಟು ಬೇರೆ ಎಲ್ಲಾ ಕೆಲಸ ಆಗುತ್ತಿದೆ. ಅಭಿವೃದ್ಧಿಗೆ ಒಂದೇ ಒಂದು ರುಪಾಯಿ ಬಿಡುಗಡೆ ಆಗಿಲ್ಲ.
ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಹಿಜಾಬ್ ವಿಚಾರವನ್ನು ಮುನ್ನೆಲೆಗೆ ಬಿಡ್ತಾರೆ. ಆಡಳಿತ ವೈಫಲ್ಯ ಮುಚ್ಚಲು ತಂತ್ರ ಉಪಯೋಗಿಸುತ್ತಿದ್ದಾರೆ. ಜನರು ಬುದ್ಧಿವಂತರಿದ್ದಾರೆ, ಇದಕ್ಕೆ ಮಹತ್ವ ಕೊಡದೆ ಇವರ ಬಗ್ಗೆ ತಿಳಿದುಕೊಳ್ತಾರೆ ಎಂದು ಕುಟುಕಿದರು.ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಲ್ಲಿ ರಾಜ್ಯದ ಯಾವ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೇ ಜೆಡಿಎಸ್ ಸಹಕಾರ ಬೇಕು. ಆಗೇ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಮಾಡಿದರೇ ಬಿಜೆಪಿ ಸಹಕಾರ ಬೇಕಾಗುತ್ತದೆ. ಹೆಚ್ಚು ಸೀಟು ಪಡೆಯಬೇಕು ಎಂದಾಗ ಗೆಲುವು ಮಾನದಂಡ ಆಗಿರುತ್ತದೆ. ದೇವೇಗೌಡರು ಹಿರಿಯರು ಇದ್ದಾರೆ. ಅವರ ಕ್ಷೇತ್ರಕ್ಕೆ ಪ್ರಜ್ವಲ್ ಎಂದು ಹೇಳಿದ್ದಾರೆ. ಎನ್.ಡಿ.ಎ. ಅಭ್ಯರ್ಥಿ ಪ್ರಜ್ವಲ್ ಎಂದು ಘೋಷಣೆ ಮಾಡಿರುವುದಿಲ್ಲ. ಹಿರಿಯರು ಮೋದಿಜಿ ಅವರನ್ನು ಕೂಡ ಭೇಟಿ ಮಾಡಿದ್ದು, ಯಾರ್ಯಾರಿಗೆ ಯಾವ ಕ್ಷೇತ್ರ ಎನ್ನುವುದು ತೀರ್ಮಾನ ಆಗಿರುವುದಿಲ್ಲ, ಶೀಘ್ರ ಆಗಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಬಿಜೆಪಿಗೆ ಗೆಲುವಿನ ಅವಕಾಶ ಹೆಚ್ಚು ಇದ್ದು, ನಮ್ಮ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚು ಇದ್ದು, ಅವರಲ್ಲಿ ಎ.ಟಿ. ರಾಮಸ್ವಾಮಿ, ಸಿದ್ದೇಶ್ ನಾಗೇಂದ್ರ, ಕಿರಣ್ ಸೇರಿದಂತೆ ಹಲವಾರು ಜನ ಸೂಕ್ತರಾದ ಅಭ್ಯರ್ಥಿಗಳಿದ್ದು, ಅದರಲ್ಲೂ ಭಾರತೀಯ ಜನತಾ ಪಾರ್ಟಿ ಹೊಸ ಅಭ್ಯರ್ಥಿಗಳ ಆಯ್ಕೆ ಮಾಡುವುದರಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿ ಅದರಲ್ಲಿ ಯಶಸ್ಸು ಕಂಡಿದ್ದೇವೆ. ನನಗಂತು ನಂಬಿಕೆ ಇದ್ದು, ಹಾಸನ ಲೋಕಸಭಾ ಕ್ಷೇತ್ರ ಬಿಜೆಪಿಗೆ ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಯತ್ನಾಲ್ ಕಾಮಿಡಿಯನ್: ಪದೇ ಪದೆ ಮಾಜಿ ಸಿಎಂ ಯಡಿಯೂರಪ್ಪ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಶಾಸಕ ಯತ್ನಾಳ್ ವಾಗ್ದಾಳಿ ನಡೆಸುತ್ತಿರುವ ವಿಚಾರ ಕುರಿತು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಯಾರೋ ಒಬ್ಬ ವ್ಯಕ್ತಿ ಮಾತನಾಡುವುದರಿಂದ ಪಕ್ಷಕ್ಕೆ ಹಿನ್ನಡೆ ಆಗುತ್ತೆ ಎನ್ನೋದು ಕಪೋಲಕಲ್ಪಿತ. ಅವರನ್ನ ಅವರು ಕೆಳಗೆ ಇಳಿಸಿಕೊಳ್ತಾರೆ ವಿನಃ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ. ಲಕ್ಷಾಂತರ ಕಾರ್ಯಕರ್ತರ ಪರಿಶ್ರಮದಿಂದ ಪಕ್ಷ ಬೆಳೆದಿದ್ದು, ಯತ್ನಾಳ್ ಅಂತವರು ಒಬ್ಬರು ಮಾತನಾಡೋದ್ರಿಂದ ಪಕ್ಷಕ್ಕೆ ಹಿನ್ನಡೆ ಅಂತಾ ಅನ್ನಿಸೊದಿಲ್ಲ. ಅವರ ಮಾತನ್ನ ಜನ ಮನರಂಜನೆಯಾಗಿ ತಗೊಂಡಿದಾರೆ. ಎಷ್ಟು ದಿನ ಮನರಂಜನೆ ಕೊಡ್ತಾರೆ ಎನ್ನೋದು ಪ್ರಶ್ನೆ? ಅವರ ವಿಚಾರವಾಗಿ ಹೆಚ್ಚು ತಲೆ ಕೆಡಿಸಿಕೊಳ್ಳೊ ಅಗತ್ಯ ಇಲ್ಲ. ರಾಷ್ಟ್ರೀಯ ನಾಯಕರು ಅವರ ಬಗ್ಗೆ ಯೋಚನೆ ಮಾಡ್ತಾರೆ. ಅವರಿಗೆ ಪ್ರಾಮುಖ್ಯತೆ ಕೊಟ್ಟಷ್ಟು ಅವರು ಜಾಸ್ತಿ ಮಾತಾಡುತ್ತಾರೆ ಎಂದು ಯತ್ನಾಳ್ ರನ್ನ ಕಾಮಿಡಿಯನ್ ಎಂದು ಜರಿದರು. ಕಾಮಿಡಿ ಶೋನಲ್ಲಿ ಹೆಚ್ಚು ಚಪ್ಪಾಳೆ ಕೊಟ್ಟಂತೆ ಹೆಚ್ಚು ಮಾತಾಡುವಂತೆ ಇದು. ಅವರಿಗೆ ಅವಶ್ಯಕತೆಗಿಂತ ಜಾಸ್ತಿ ಮಹತ್ವ ಕೊಟ್ಟೇ ಹೀಗಾಗಿದೆ ಎಂದು ಕಿಡಿಕಾರಿದರು.
ಅವರ ಬಗ್ಗೆ ಹೆಚ್ಚು ಮಾತನಾಡೊ ಅವಶ್ಯಕತೆ ಇಲ್ಲ ಎಂದರು. ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಅವದಿಯಲ್ಲಿ ೪೦ ಸಾವಿರ ಕೋಟಿ ಅಕ್ರಮ ಎಂಬ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದರು. ಆ ವೇಳೆಯಲ್ಲಿ ಒಟ್ಟು ಹಣ ಬಳಸಿದ್ದೇ ೨ರಿಂದ ೩ ಸಾವಿರ ಕೋಟಿ. ನಾಲಗೆಗು ಮೆದುಳಿಗು ಕನೆಕ್ಟಿವಿಟಿ ಇದ್ದು, ಮಾತಾಡಿದರೆ ಅಂಕಿ ಅಂಶ ಕರೆಕ್ಟಾಗಿ ಇರುತ್ತೆ. ನಾಲಗೆಗು ಮೆದುಳಿಗು ಕನೆಕ್ಟ್ ಇಲ್ಲಾ ಅಂದ್ರೆ ಅನೇಕ ನಂಬರ್ ಬರುತ್ತೆ. ಹಾಗಾಗಿ ಈ ವಿಚಾರಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದು ಟಾಂಗ್ ನೀಡಿದರು.ಇದೆ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಇತರರು ಉಪಸ್ಥಿತರಿದ್ದರು.