ಕನ್ನಡಪ್ರಭ ವಾರ್ತೆ ಗೋಕಾಕ2028ರಲ್ಲಿ ರಾಜ್ಯದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಗೋಕಾಕ

2028ರಲ್ಲಿ ರಾಜ್ಯದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.ಶುಕ್ರವಾರ ಸಂಜೆ ಇಲ್ಲಿನ ಹೊರ ವಲಯದ ಗೋಕಾಕ ಸಪ್ಲಾಯರ್ಸ್ ಸಭಾ ಭವನದಲ್ಲಿ ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡ ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಎರಡನೇ ದಿನದ ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜನರ ಆಶೀರ್ವಾದದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದು ಸರ್ಕಾರ ರಚಿಸಲಿದೆ. ಶ್ಯಾಂ ಪ್ರಸಾದ ಮುಖರ್ಜಿ ಮತ್ತು ದೀನ ದಯಾಳ ಉಪಾಧ್ಯಾಯ ಅವರು ಹುಟ್ಟು ಹಾಕಿದ್ದ ಜನಸಂಘವು ಮುಂದೆ ಭಾರತೀಯ ಜನತಾ ಪಾರ್ಟಿಯಾಗಿ ಬದಲಾಯಿತು. ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಡಾ.ಮುರಳಿ ಮನೋಹರ ಜೋಷಿ ಅವರು 80ರ ದಶಕದಲ್ಲಿ ಪಕ್ಷವನ್ನು ಮುನ್ನೆಡೆಸಿದರು. 2014 ರಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಮೂರನೇ ಅವಧಿಗೆ ದೇಶವನ್ನು ಮುನ್ನಡೆಸುವ ಅವಕಾಶ ಪ್ರಾಪ್ತಿಯಾಯಿತು. ದೇಶದ ಕೋಟ್ಯಾಂತರ ಕಾರ್ಯಕರ್ತರ ತ್ಯಾಗ, ಶ್ರಮದ ಫಲವಾಗಿ ಅಧಿಕಾರಕ್ಕೆ ಬಂದಿರುವ ನಮ್ಮ ಪಕ್ಷ ’ಸಬ್ ಕಾ ಸಾಥ್, ಸಬ್ ಕಾ ವಿಕಾಸ’ ಎಂಬ ಧ್ಯೇಯದೊಂದಿಗೆ ಎಲ್ಲ ವರ್ಗಗಳ ಹಿತಕ್ಕಾಗಿ ಕೆಲಸ ಮಾಡುತ್ತಿದೆ. ಪ್ರಧಾನಿಯವರ ದೂರದೃಷ್ಟಿಯಿಂದ ನಮ್ಮ ಭಾರತವನ್ನು ಜಾಗತಿಕ ಮಟ್ಟದಲ್ಲಿ ಕೊಂಡ್ಯೊಯ್ಯುವ ಕೆಲಸವನ್ನು ಪ್ರಧಾನಿಗಳು ಮಾಡುತ್ತಿದ್ದಾರೆ. ದೇಶದ ಮೂಲೆ-ಮೂಲೆಗಳಲ್ಲೂ ಕಮಲದ ಬಾವುಟ ಹಾರಾಡುತ್ತಿದೆ ಎಂದು ಹೇಳಿದರು.ಕೇಂದ್ರ ಸರ್ಕಾರದ ಅವಧಿಯಲ್ಲಿ ನಡೆದಿರುವ ಅನೇಕ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ಕೆಲಸ ಕಾರ್ಯಕರ್ತರದ್ದಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕಿದ್ದ ಸಂದರ್ಭದಲ್ಲಿ ಜಾರಿಗೊಂಡ ಹಲವು ಮಹತ್ತರ ಜನೋಪಯೋಗಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿ ಹೇಳುವ ಕೆಲಸವಾಗಬೇಕಿದೆ. ಮುಂಬರುವ ಗ್ರಾಪಂ, ತಾಪಂ, ಜಿಪಂ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಕಳಿಸಲು ಕಾರ್ಯಕರ್ತರು ಶ್ರಮಿಸಬೇಕು. ಬಿಜೆಪಿ ಜತೆ ಜೆಡಿಎಸ್ ಪಕ್ಷವು ಮೈತ್ರಿಯಾಗಿದ್ದರಿಂದ ನಮ್ಮ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.ಅಧ್ಯಕ್ಷತೆಯನ್ನು ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ ವಹಿಸಿದ್ದರು. ಬೆಳಗಾವಿ ವಿಭಾಗೀಯ ಪ್ರಭಾರಿ, ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸುಭಾಸ ಪಾಟೀಲ, ರಾಷ್ಟ್ರೀಯ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ಅರಭಾವಿ ಬಿಎಲ್‌ಎ-1 ಪ್ರಭಾರಿ ಗೋವಿಂದ ಕೊಪ್ಪದ, ನಿತೀನ ಚೌಗುಲೆ, ವೀರಭದ್ರಯ್ಯ ಪೂಜೇರಿ, ಪರಸಪ್ಪ ಬಬಲಿ, ಪ್ರಮೋದ ನುಗ್ಗಾನಟ್ಟಿ ವೇದಿಕೆಯಲ್ಲಿದ್ದರು.