ಬಿಜೆಪಿಗೆ ಈ ಬಾರಿ 25 ಸ್ಥಾನಗಳು ಬರಲ್ಲ: ಕೆ.ಎಸ್‌.ಈಶ್ವರಪ್ಪ

| Published : Mar 29 2024, 12:56 AM IST / Updated: Mar 29 2024, 03:12 PM IST

ಸಾರಾಂಶ

ರಾಜ್ಯದಲ್ಲಿ ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 25 ಸ್ಥಾನಗಳು ಬಂದಿದ್ದವು. ಈ ಬಾರಿ ಹೇಳಿಕೊಳ್ಳುವಷ್ಟು ಸ್ಥಾನಗಳು ಬರಲ್ಲ. ಎಷ್ಟು ಸೀಟು ಗೆಲ್ಲುತ್ತೋ ಗೊತ್ತಿಲ್ಲ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯದಲ್ಲಿ ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 25 ಸ್ಥಾನಗಳು ಬಂದಿದ್ದವು. ಈ ಬಾರಿ ಹೇಳಿಕೊಳ್ಳುವಷ್ಟು ಸ್ಥಾನಗಳು ಬರಲ್ಲ. ಎಷ್ಟು ಸೀಟು ಗೆಲ್ಲುತ್ತೋ ಗೊತ್ತಿಲ್ಲ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಇಲ್ಲಿನ ಮಲ್ಲೇಶ್ವರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, ಬಿಜೆಪಿ‌ ನನ್ನ ತಾಯಿ. ಯಾವ್ಯಾವ ಪಕ್ಷಕ್ಕೊ ಹೋಗಿ‌ ಬಂದೋರು‌ ಇವತ್ತು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಅವರಿಗೆ ಡಮ್ಮಿ ಅಭ್ಯರ್ಥಿ ಹಾಕಿಸಿಕೊಂಡು ಬಂದು ಗೆದ್ದು ಅಭ್ಯಾಸ. ಅವರು ಲಿಂಗಾಯತ ನಾಯಕರು ಮತ್ತು ಹಿಂದುಳಿದ ನಾಯಕರನ್ನು ತುಳಿದು ಮಗನನ್ನು ಗೆಲ್ಲಿಸಿಕೊಂಡು‌ ಬರುತ್ತಿದ್ದಾರೆ. 

ಅದು ಈ‌ ಚುನಾವಣೆಯಲ್ಲಿ ಅಂತ್ಯವಾಗಬೇಕು. ಕಾಂಗ್ರೆಸ್‌ ಗೆ ಈಡಿಗರು, ಯಡಿಯೂರಪ್ಪರಿಗೆ ಲಿಂಗಾಯತರು ಇದ್ದಾರೆ ಎಂದು ಬೀಗುತ್ತಿದ್ದಾರೆ. ಆದರೆ, ನನ್ನ ಪರ ಎಲ್ಲ ಹಿಂದುಗಳು ಇದ್ದಾರೆ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಅವರು ಭರವಸೆಯಲ್ಲೇ ಏನೂ ಬೇಕಾದರೂ ಮಾಡುತ್ತಾರೆ. ಈಗಲೂ ಇವರನ್ನು ನಂಬಲು ಸಾಧ್ಯವೇ ಇಲ್ಲ. ಇವರು ಹೇಳುವ ನೂರು ಸುಳ್ಳಿನಿಂದ ಅನುಭವಿಸಿ ಸಾಕಾಗಿ ಇವತ್ತು ಅವರ ವಿರುದ್ಧ ತಿರುಗಿ ಬಿದ್ದಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಬಾರಿಯಂತೆ ಈ ಬಾರಿ ಬಿಜೆಪಿಗೆ ಹೆಚ್ಚು ಸೀಟು ಬರಬೇಕು. ಈ ಮೂಲಕ ಮೋದಿಯನ್ನು ಮತ್ತೆ ಪ್ರಧಾನಿಯಾಗಿ ಮಾಡಬೇಕು. 27 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಬೇಕು ಎಂಬ ಅಪೇಕ್ಷೆ ಇದೆ. 

ಜೊತೆಗೆ ಶಿವಮೊಗ್ಗದಲ್ಲಿ ಪಕ್ಷೇತರನಾಗಿ ನಾನು ಗೆಲ್ಲುತ್ತೇನೆ. ಎಲ್ಲ ಕ್ಷೇತ್ರದಲ್ಲೂ ಕಾರ್ಯಕರ್ತರು ನಿರೀಕ್ಷೆಗೂ ಮೀರಿ ಬೆಂಬಲ ನೀಡುತ್ತಿದ್ದಾರೆ. ಬೈಂದೂರಿನಲ್ಲಿ ಕಾರ್ಯಕರ್ತರು ಮೂರೇ ದಿನದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಹೆಚ್ಚು ಲೀಡ್ ಕೊಡುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು.

ಸ್ವಾಮೀಜಿಗಳಿಗೆ ಬೆದರಿಕೆ ಯಾವ ನ್ಯಾಯ: ನಾನು ಮಠ ಮಂದಿರಗಳಿಂದ ಚುನಾವಣೆ ಪ್ರಚಾರ ಶುರು ಮಾಡಿ ಎಲ್ಲ ಸ್ವಾಮೀಜಿಗಳ ಆಶೀರ್ವಾದ ಪಡೆದು ಬಂದಿದ್ದೆ. ಮಾರನೇ ದಿ‌ನವೇ ಸ್ವಾಮೀಜಿಗಳ ಕಣ್ಣಲ್ಲಿ ನೀರು ಹಾಕಿಸಿದ್ದಾರೆ. 

ನನಗೆ ಮಾತ್ರ ಆಶೀರ್ವಾದ ಮಾಡಿ, ಬೇರೆಯವರಿಗೆ ಬೇಡ ಎಂದು ಸ್ವಾಮೀಜಿಗಳಿಗೆ ಬೆದರಿಕೆ ಹಾಕುವುದು ಯಾವ ನ್ಯಾಯ. ಯಾವ ಸಮಾಜದವರೂ ನನ್ನ ಜಾತಿ‌ ನೋಡಿ ಬೆಂಬಲವನ್ನು ಕೊಡುತ್ತಿಲ್ಲ. ಬದಲಾಗಿ ಮನೆ ಮಗನ ರೀತಿ‌ ನನನ್ನು ನೋಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಕಾರ್ಯಕ್ರಮದಲ್ಲಿ ವಕೀಲ ಅಶೋಕ್‌ ಭಟ್, ಶಿವಮೊಗ್ಗ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟೇಶ್, ಮಹಾಲಿಂಗಶಾಸ್ತ್ರಿ, ಭದ್ರಾವತಿಯ ಮಹೇಶ್‌ ಕುಮಾರ್, ಅಂಗನವಾಡಿ ಕಾರ್ಯಕರ್ತೆಯರ ಮುಖಂಡೆ ಶಾರದಮ್ಮ , ವೀರಶೈವ ಪ್ರಮುಖರಾದ ರುದ್ರೇಶ್, ಜಗದೀಶಪ್ಪ, ಶಿಕಾರಿಪುರದ ರುದ್ರೇಗೌಡ, ಹೆಚ್.ಎಸ್. ಬೂದಪ್ಪ, ಗಂಗಾಧರ್, ತೇಜು ಮಾತನಾಡಿದರು. ಇ. ವಿಶ್ವಾಸ್‌, ಕೆ.ಇ.ಕಾಂತೇಶ್, ಛಲವಾದಿ ಸಮಾಜದ ಅಧ್ಯಕ್ಷ ಸುರೇಶ್, ಭೂಪಾಲ್, ಗನ್ನಿ ಶಂಕರ್ ಮತ್ತಿತರರಿದ್ದರು. ಈ ಸಂದರ್ಭದಲ್ಲಿ ಛಲವಾದಿ, ಜಂಗಮ, ವೀರಶೈವ, ವಿಷ್ಣುಸಮಾಜ, ಬ್ರಾಹ್ಮಣ ಸಮಾಜ, ಜೈನ ಸಮಾಜ, ಉಪ್ಪಾರ ಸಮಾಜ, ತಮಿಳು ಸಮಾಜ ಮುಖಂಡರು ಈಶ್ವರಪ್ಪರನ್ನು ಅಭಿನಂದಿಸಿದರು.

ಎಲ್ಲ ಸಮಾಜದ ಬೆಂಬಲವಿದೆ: ಶಿವಮೊಗ್ಗ ನಗರದಲ್ಲಿ ಎಲ್ಲ ಸಮಾಜಕ್ಕೂ‌ ನಾನು ಕೆಲಸ‌ ಮಾಡಿಕೊಟ್ಟಿದ್ದೇನೆ. ಇದನ್ನು ಎಲ್ಲ ಸಮಾಜದ ಮುಖಂಡರೇ ಹೇಳುತ್ತಿದ್ದಾರೆ. 

ಜನರ ಹೃದಯದಲ್ಲಿ ನಾನು ಕೇಸರಿ ವ್ಯಕ್ತಿಯಾಗಿ ಉಳಿದಿರುವುದು ನನ್ನ ಪುಣ್ಯ. ಪಕ್ಷ ಜಾತಿ ಭೇದ ಮರೆತು ನನಗೆ ಬೆಂಬಲ ಕೊಡುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಚಿಹ್ನೆ ಮಾತ್ರ ಬಾಕಿ ಇದೆ‌. 

ಏ.19ರಂದು ಚಿಹ್ನೆಯೂ ಸಿಗಲಿದೆ. ಏ.12ರಂದು ನಾಮಪತ್ರ ಸಲ್ಲಿಕೆ ಮಾಡಲಾಗುತ್ತಿದೆ. ಯಾರೂ ಸಮಯ ಹಾಳು ಮಾಡಬೇಡಿ, ಬೂತು ಮಟ್ಟದಲ್ಲಿ ಸಂಘಟನೆ ಮಾಡಿ.

ಕೆ.ಎಸ್‌. ಈಶ್ವರಪ್ಪ, ಮಾಜಿ ಸಚಿವಚುನಾವಣಾ ಕಚೇರಿ ಉದ್ಘಾಟನೆ

ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮಲ್ಲೇಶ್ವರ ನಗರದಲ್ಲಿರುವ ನಿವಾಸದಲ್ಲಿಯೇ ಲೋಕಸಭಾ ಚುನಾವಣಾ ಕಾರ್ಯಾಲಯ ಸ್ಥಾಪಿಸಲಾಗಿದ್ದು, ಕಾರ್ಯಾಲಯವನ್ನು ಗುರುವಾರ ಐದು ಮಂದಿ ಮುತ್ತೈದೆಯರು ಉದ್ಘಾಟಿಸಿದರು. 

ಕಾರ್ಯಾಲಯ ಉದ್ಘಾಟನೆ ಅಂಗವಾಗಿ ಬೆಳಗ್ಗೆ ಋತ್ವಿಜರಿಂದ ಸಹಸ್ರ ಮೋದಕ ಗಣಪತಿ ಹೋಮ ನೆರವೇರಿಸಲಾಯಿತು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮುತ್ತೈದೆಯರ ಮೂಲಕ ತಮ್ಮ ಕಚೇರಿಯನ್ನು ಈಶ್ವರಪ್ಪನವರು ಉದ್ಘಾಟಿಸಿದರು. ಕಾರ್ಯಾಲಯದ ಬ್ಯಾನರ್‌ನಲ್ಲಿ ಈಶ್ವರಪ್ಪ ಪೋಟೋ ಜೊತೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವೂ ಹಾಕಲಾಗಿತ್ತು.