ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು: ಚಿಕ್ಕಮಗಳೂರಲ್ಲಿ ವಿಜಯೋತ್ಸವ

| Published : Feb 09 2025, 01:18 AM IST

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು: ಚಿಕ್ಕಮಗಳೂರಲ್ಲಿ ವಿಜಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಶನಿವಾರ ನಗರದಲ್ಲಿ ಸಂಭ್ರಮಾಚರಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಕಟೌಟ್‌ಗಳೊಂದಿಗೆ ಮೆರವಣಿಗೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಶನಿವಾರ ನಗರದಲ್ಲಿ ಸಂಭ್ರಮಾಚರಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಕಟೌಟ್‌ಗಳೊಂದಿಗೆ ಮೆರವಣಿಗೆ ನಡೆಸಿದ ಮುಖಂಡರು, ಕಾರ್ಯಕರ್ತರು ಆಜಾದ್ ಪಾರ್ಕ್ ಮೈದಾನದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ನರೇಂದ್ರ ಮೋದಿ ಹಾಗೂ ಮುಖಂಡರ ಪರ ಘೋಷಣೆಗಳನ್ನು ಕೂಗಿ ವಿಜಯೋತ್ಸವ ಆಚರಿಸಿದರು.

ಕಾರ್ಕಳ ಶಾಸಕ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಉಸ್ತುವಾರಿ ವಿ.ಸುನಿಲ್ ಕುಮಾರ್ ವಿಜಯೋತ್ಸವದಲ್ಲಿ ಮಾತನಾಡಿ, ದೆಹಲಿ ಚುನಾವಣೆ ಗೆಲುವು ಕರ್ನಾಟಕದಲ್ಲೂ ಎಲ್ಲಾ ಕಾರ್ಯಕರ್ತರಲ್ಲೂ ಹೊಸ ವಿಶ್ವಾಸ, ಅತೀವ ಸಂತೋಷ ತಂದಿದೆ ಎಂದರು.

ದೇಶದ ಎಲ್ಲ ರಾಜ್ಯದಲ್ಲಿ ದಿಕ್ಕಾಪಾಲಾಗುತ್ತಿರುವ ಕಾಂಗ್ರೆಸ್ ದೆಹಲಿಯಲ್ಲಿ ಸತತ ಮೂರನೇ ಬಾರಿ ಶೂನ್ಯ ಸಂಪಾದನೆ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸನ್ನು ಇದೇ ವೇಳೆ ಅಭಿನಂದಿಸುತ್ತೇವೆ ಎಂದು ಛೇಡಿಸಿದ ಸುನೀಲ್ ಕುಮಾರ್, ದೇಶದ ಏಕತೆ, ಅಖಂಡತೆ, ಪ್ರಜಾಪ್ರಭುತ್ವದ ವಿರುದ್ಧ ನಿರಂತರ ದಾಳಿ ನಡೆಸಿ ಭ್ರಷ್ಟಾಚಾರವನ್ನೇ ಆಡಳಿತ ಮಂತ್ರ ಮಾಡಿಕೊಂಡಿದ್ದ ಅರವಿಂದ ಕೇಜ್ರಿವಾಲ್ ಅವರಿಗೂ ಭಾರೀ ಮುಖಭಂಗವಾಗಿದೆ ಎಂದರು.

ದೇಶದ ರಾಜಧಾನಿ ದಹಲಿಯಲ್ಲಿ ಮುಂದಿನ 5 ವರ್ಷ ಡಬ್ಬಲ್ ಇಂಜಿನ್ ಸರ್ಕಾರ ಒಂದು ವಿಶ್ವಾಸದ ಆಡಳಿತ ಕೊಡಲಿದೆ. ನರೇಂದ್ರ ಮೋದಿ ಅವರ ಆಡಳಿತ ಹಾಗೂ ಅವರ ಜನಪ್ರಿಯತೆಗೆ ದೆಹಲಿ ಜನರು ಬಹಳ ದೊಡ್ಡ ಪ್ರಮಾಣದ ಬೆಂಬಲ ಕೊಟ್ಟಿದ್ದಾರೆ ಎಂದರು.

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರ ಹೋರಾಟವನ್ನು ದುರುಪಯೋಗಪಡಿಸಿಕೊಂಡು ದೆಹಲಿ ಮತ್ತು ದೇಶದ ಜನರಿಗೆ ನಿತ್ಯ ನಿರಂತರ ಸುಳ್ಳುಗಳನ್ನು ಹೇಳುತ್ತಾ 10 ವರ್ಷಗಳ ಕಾಲ ನಡೆಸಿದ ಅಧಿಕಾರ ಇಂದು ಅಂತ್ಯವಾಗಿದೆ. ದೆಹಲಿ ವಿಜಯ ಯಾತ್ರೆ ಕರ್ನಾಟಕದಲ್ಲೂ ಮುಂದುವರಿಯಲಿದೆ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ, ದೆಹಲಿಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಮೂಲಕ ಆಮ್ ಆದ್ಮಿಯ ಕೇಜ್ರಿವಾಲ್ ಅವರ ದುಷ್ಟ ಆಡಳಿತ ಕೊನೆಗೊಳಿಸಿದೆ ಎಂದರು.

ದೇಶದ ಜನರಿಗೆ ದೆಹಲಿ ಜನರು ಸ್ಪಷ್ಟ ಸಂದೇಶ ನೀಡಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಆಡಳಿತದಲ್ಲಿರುವ ಬೆರಳೆಣಿಕೆ ರಾಜ್ಯಗಳನ್ನೂ ಆ ಪಕ್ಷ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ದೇಶದ ಉದ್ದಗಲಕ್ಕೂ ಮತದಾರರು ಜಾಗರೂಕರಾಗಿ ಹಕ್ಕು ಚಲಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ನಾಯಕರು, ವರಿಷ್ಠರು, ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು, ಮತದಾರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಈ ವೇಳೆ ಪಕ್ಷದ ಹಿರಿಯ ಮುಖಂಡರಾದ ಕೋಟೆ ರಂಗನಾಥ್, ಸಿ.ಆರ್.ಪ್ರೇಂ ಕುಮಾರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಿಂತ ಅನಿಲ್ ಕುಮಾರ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ನಗರಾಧ್ಯಕ್ಷ ಪುಷ್ಪರಾಜ್, ರಾಜ್ಯ ಪ್ರತಿನಿಧಿ ಕೆ.ಪಿ.ವೆಂಕಟೇಶ್, ಜಿಲ್ಲಾ ಉಪಾಧ್ಯಕ್ಷ ಕವೀಶ್, ಮುಖಂಡರಾದ ನಾರಾಯಣಗೌಡ, ಪುಟ್ಟೇಗೌಡ ಇತರರು ಭಾಗವಹಿಸಿದ್ದರು.

8ಸಿಕೆಎಂ1.

ಚಿಕ್ಕಮಗಳೂರು ನಗರದಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ವಿಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಸಂಭ್ರಮ ಆಚರಿಸಿದರು.