ಸಾರಾಂಶ
ಆಮ್‌ಆದ್ಮಿ ಪಕ್ಷದ ದುರಾಡಳಿತದ ಕೊನೆಗೊಂಡಿದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.
ಬಳ್ಳಾರಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರು ಇಲ್ಲಿನ ಗಡಗಿಚನ್ನಪ್ಪ ವೃತ್ತದಲ್ಲಿ ಶನಿವಾರ ಸಂಜೆ ವಿಜಯೋತ್ಸವ ಆಚರಿಸಿದರು.
ಆಮ್‌ಆದ್ಮಿ ಪಕ್ಷದ ದುರಾಡಳಿತದ ಕೊನೆಗೊಂಡಿದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ ನೆಲೆಯಲ್ಲಿ ಕೈಗೊಳ್ಳುತ್ತಿರುವ ಕಾರ್ಯಗಳನ್ನು ಮೆಚ್ಚಿ ದೆಹಲಿಯ ಮತದಾರರು ಬಿಜೆಪಿಯನ್ನು ಕೈ ಹಿಡಿದಿದ್ದಾರೆ. ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲದೆ ಮುಖಭಂಗ ಅನುಭವಿಸಿದೆ. ದೇಶದಲ್ಲಿ ಅಭಿವೃದ್ಧಿ ಪರ್ವ ಮುಂದುವರಿಯಲಿದೆ. ಎಲ್ಲ ರಾಜ್ಯಗಳಲ್ಲಿ ಬಿಜೆಪಿಗೆ ಶಕ್ತಿ ಹೆಚ್ಚುತ್ತಿದೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಹಾಗೂ ಜನಮುಖಿ ಕೆಲಸಗಳನ್ನು ಗಮನಿಸುತ್ತಿರುವ ರಾಷ್ಟ್ರದ ಜನತೆ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದಾರೆ.ದೆಹಲಿಯಲ್ಲಿ ಆಮ್‌ಆದ್ಮಿ ಪಕ್ಷ ಮತ್ತೆ ಅಧಿಕಾರ ಹಿಡಿಯುವ ತವಕದಲ್ಲಿತ್ತು. ಈ ಬಾರಿ ಅಧಿಕಾರ ಚುಕ್ಕಾಣಿ ಹಿಡಿಯುವ ಮೂಲಕ ಹ್ಯಾಟ್ರಿಕ್ ಗೆಲುವಿನ ಉತ್ಸುಕದಲ್ಲಿತ್ತು. ಆದರೆ, ದೆಹಲಿಯ ಜನತೆ ಜನವಿರೋಧಿ ಆಪ್ ಸರ್ಕಾರಕ್ಕೆ ತಕ್ಕಪಾಠ ಕಲಿಸಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಹಿರಿಯ ಮುಖಂಡರಾದ ಡಾ.ಮಹಿಪಾಲ್, ಎಚ್.ಹನುಮಂತಪ್ಪ, ಕೆ.ಎಸ್.ದಿವಾಕರ್, ಮಾರುತಿಪ್ರಸಾದ್, ಶಿವಕುಮಾರ್ ಸೇರಿದಂತೆ ಪಕ್ಷದ ಜಿಲ್ಲಾ ಹಾಗೂ ತಾಲೂಕು ಸಮಿತಿಯ ಸದಸ್ಯರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಬಳ್ಳಾರಿಯ ಗಡಗಿಚನ್ನಪ್ಪ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಶನಿವಾರ ಸಂಜೆ ವಿಜಯೋತ್ಸವ ಆಚರಿಸಿದರು.