ಬಿಜೆಪಿ ಕಾರ್ಯಕರ್ತರು ಜಾತಿ ನೋಡಿ ಮತದಾನ ಮಾಡಲ್ಲ: ಪ್ರಮೋದ್ ಮಧ್ವರಾಜ್

| Published : Mar 30 2024, 12:45 AM IST

ಬಿಜೆಪಿ ಕಾರ್ಯಕರ್ತರು ಜಾತಿ ನೋಡಿ ಮತದಾನ ಮಾಡಲ್ಲ: ಪ್ರಮೋದ್ ಮಧ್ವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ನಾನು ಹಿಂದೆ ಕ್ರೀಡಾಸಚಿವನಾಗಿದ್ದವ, ನನಗೆ ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಎನ್ನುವುದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದೇನೆ. ಬಿಜೆಪಿ ನನ್ನನ್ನು ಗುರುತಿಸಿದೆ, ಅದಕ್ಕೆ ಉಡುಪಿ ಚಿಕ್ಕಮಗಳೂ ಕ್ಷೇತ್ರ ಚುನಾವಣಾ ಪ್ರಚಾರದ ಜವಾಬ್ದಾರಿ ನೀಡಿದೆ. ನನ್ನ ಕೊನೆಯ ಉಸಿರುವವರೆಗೆ ಬಿಜೆಪಿಯಲ್ಲಿಯೇ ಇರುತ್ತೇನೆ, ಕಾಂಗ್ರೆಸ್ ವಿರುದ್ಧ ಬಿಜೆಪಿಯನ್ನು ಗೆಲ್ಲಿಸಲು ಕೆಲಸ ಮಾಡುತ್ತೇನೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿಯ ಜಾತಿ ನೋಡಿ ಮತದಾನ ಮಾಡುವುದಿಲ್ಲ, ಅವರು ದೇಶ ಮತ್ತು ಹಿಂದುತ್ವಕ್ಕಾಗಿ ಮತ ಹಾಕುತ್ತಾರೆ. ಆದ್ದರಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಜಯ ಗ್ಯಾರಂಟಿ ಎಂದು ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಅವರು ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದೇಶಕ್ಕೆ ಮೋದಿ ಅನಿವಾರ್ಯ, 140 ಕೋಟಿ ಜನರಿಗೆ ಮೋದಿ ಬೇಕು. ಮೋದಿ ಅವರು ಬಿಜೆಪಿಗೆ 400 ಸೀಟು ಬೇಕು ಎಂದು ಕೇಳಿದ್ದಾರೆ, ಅದಕ್ಕೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಸೀಟನ್ನೂ ಕೊಡುಗೆಯಾಗಿ ನೀಡುತ್ತೇವೆ. ದೇಶದಲ್ಲಿಯೇ ಅತೀ ಹೆಚ್ಚು 5 ಲಕ್ಷ ಮತಗಳ ಅಂತರದಿಂದ ಕೋಟ ಅವರನ್ನು ಗೆಲ್ಲಿಸಬೇಕು ಎನ್ನುವ ಗುರಿ ಇಟ್ಟುಕೊಂಡಿದ್ದೇವೆ ಎಂದರು.

ಕೆಲಸ ಮಾಡುವ ಅಭ್ಯರ್ಥಿಯನ್ನು ನೋಡಿ ಮತ ಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳುತ್ತಿದ್ದಾರೆ, ಹಾಗಾದರೆ ಅವರಿಗೆ ಸಿಗುವ ಓಟುಗಳೂ ಸಿಗುವುದಿಲ್ಲ. ಅವರಿಗಿಂತ ಕೋಟ ಹೆಚ್ಚು ಕೆಲಸ ಮಾಡಿದ ಅನುಭವಿ ರಾಜಕಾರಣಿ. ಹೆಗ್ಡೆ ಮತ್ತು ಕೋಟ ಅವರ ಬಯೋಡಾಟಗಳನ್ನು ಅಕ್ಕಪಕ್ಕದಲ್ಲಿಟ್ಟಿರೇ ಕೋಟ ಅವರ ಬಯೋಡಾಟವೇ ಹೆಚ್ಚು ಉದ್ದವಾಗಿದೆ ಎಂದರು.

ಕಾಂಗ್ರೆಸ್‌ಗೆ ಅಷ್ಟೊಂದು ಹಿಂದಿ ಭಾಷೆಯ ಬಗ್ಗೆ ಪ್ರೀತಿ ಇದ್ದಿದ್ದರೇ ಎಲ್ಲ 28 ಕ್ಷೇತ್ರಗಳಲ್ಲಿ ಹಿಂದಿ ಪಂಡಿತರನ್ನೇ ನಿಲ್ಲಿಸಬೇಕಾಗಿತ್ತು, ಇನ್ನೂ ಕಣ್ಣು ತೆರೆಯದ ಹಸುಳೆಗಳನ್ನು ಯಾಕೆ ಚುನಾವಣೆಗೆ ನಿಲ್ಲಿಸಿದ್ದೀರಿ ಎಂದವರು ಪ್ರಶ್ನಿಸಿದರು.

ಹೆಗ್ಡೆ ಅವರು ಉಡುಪಿಯನ್ನು ಜಿಲ್ಲೆ ಮಾಡಿದ್ದು ತನ್ನ ಸಾಧನೆ ಅಂತಿದ್ದಾರೆ. ಅದೇ ಸಂದರ್ಭದಲ್ಲಿ ರಾಜ್ಯದಲ್ಲಿ ಮತ್ತೂ 5 ಹೊಸ ಜಿಲ್ಲೆಗಲಾಗಿದ್ದವು, ಅದು ಯಾರ ಸಾಧನೆ? ಜಿಲ್ಲೆ ತಾಲೂಕುಗಳ ರಚನೆ ಸಾಧನೆಯೇ ಅಲ್ಲ ಅಂತ ನಾನು ಭಾವಿಸುತ್ತೇನೆ ಎಂದರು.

ನಾನು ಹಿಂದೆ ಕ್ರೀಡಾಸಚಿವನಾಗಿದ್ದವ, ನನಗೆ ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಎನ್ನುವುದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದೇನೆ. ಬಿಜೆಪಿ ನನ್ನನ್ನು ಗುರುತಿಸಿದೆ, ಅದಕ್ಕೆ ಉಡುಪಿ ಚಿಕ್ಕಮಗಳೂ ಕ್ಷೇತ್ರ ಚುನಾವಣಾ ಪ್ರಚಾರದ ಜವಾಬ್ದಾರಿ ನೀಡಿದೆ. ನನ್ನ ಕೊನೆಯ ಉಸಿರುವವರೆಗೆ ಬಿಜೆಪಿಯಲ್ಲಿಯೇ ಇರುತ್ತೇನೆ, ಕಾಂಗ್ರೆಸ್ ವಿರುದ್ಧ ಬಿಜೆಪಿಯನ್ನು ಗೆಲ್ಲಿಸಲು ಕೆಲಸ ಮಾಡುತ್ತೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರರಾದ ವಿಜಯಕುಮಾರ್ ಉದ್ಯಾವರ ಮತ್ತು ಸತೀಶ್ ಶೆಟ್ಟಿ ಮುಟ್ಲುಪಾಡಿ, ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.