ಸಾರಾಂಶ
ಬಳ್ಳಾರಿ: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಹಮ್ಮಿಕೊಂಡಿರುವ "ಮೈಸೂರು ಚಲೋ " ಹೋರಾಟದಲ್ಲಿ ಭಾಗವಹಿಸಲು ಬಳ್ಳಾರಿ ಜಿಲ್ಲೆಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ಶ್ರೀರಂಗಪಟ್ಟಣಕ್ಕೆ ತೆರಳಿದರು.
ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರ ಜಯಘೋಷಣೆಗಳ ಮೂಲಕ ಶ್ರೀರಂಗಪಟ್ಟಣದತ್ತ ಪ್ರಯಾಣ ಬೆಳೆಸಿದರು.ಗುರುವಾರ ಶ್ರೀರಂಗಪಟ್ಟಣದಿಂದ ಮೈಸೂರುವರೆಗೆ 20 ಕಿ.ಮೀ. ವ್ಯಾಪ್ತಿಯ ಮೈಸೂರು ಚಲೋ ಚಳವಳಿಯಲ್ಲಿ ಬಳ್ಳಾರಿ ವಿಭಾಗ ವ್ಯಾಪ್ತಿಯ ಬಳ್ಳಾರಿ, ವಿಜಯನಗರ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಪಕ್ಷದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ ಕನ್ನಡಪ್ರಭಕ್ಕೆ ತಿಳಿಸಿದರು.
ಬಳ್ಳಾರಿ ಜಿಲ್ಲೆಯಿಂದ ಸುಮಾರು 50ಕ್ಕೂ ಹೆಚ್ಚು ಖಾಸಗಿ ವಾಹನಗಳು, ದ್ವಿಚಕ್ರ ವಾಹನಗಳಲ್ಲಿ ಕಾರ್ಯಕರ್ತರು ಮೈಸೂರು ಕಡೆ ತೆರಳುತ್ತಿದ್ದೇವೆ. ಈಗಾಗಲೇ ವಿವಿಧ ಮೋರ್ಚಾಗಳ ಕಾರ್ಯಕರ್ತರು ತೆರಳಿದ್ದು, ಬುಧವಾರ ರಾತ್ರಿಯೂ ನೂರಾರು ಕಾರ್ಯಕರ್ತರು ವಾಹನಗಳ ಮೂಲಕ ಮೈಸೂರು ಚಲೋ ಹೋರಾಟಕ್ಕೆ ಆಗಮಿಸಲಿದ್ದಾರೆ. ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅನಿಲ್‌ಕುಮಾರ್ ತಿಳಿಸಿದರು.ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಗಣಪಾಲ್ ಐನಾಥ ರೆಡ್ಡಿ ಮಾತನಾಡಿ, ಪಕ್ಷದ ಸೂಚನೆಯಂತೆ ರೈತ ಮೋರ್ಚಾದ ಬಳ್ಳಾರಿ ಜಿಲ್ಲೆಯ ನೂರಾರು ಜನರು ಮೈಸೂರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಇಡೀ ರಾಜ್ಯದಲ್ಲಿ ಹೋರಾಟಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಜನವಿರೋಧಿ ಕಾಂಗ್ರೆಸ್‌ನ ದುರಾಡಳಿತ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಜಯ ಸಿಗಲಿದೆ ಎಂದು ಐನಾಥ ರೆಡ್ಡಿ ತಿಳಿಸಿದರು.
ರೈತ ಮೋರ್ಚಾದ ಶ್ರೀನಿವಾಸ ರೆಡ್ಡಿ, ರಾಮಚಂದ್ರಯ್ಯ, ಶಿವರುದ್ರಗೌಡ, ಬಸವರಾಜ್ ಪಾಟೀಲ್, ಹೊನ್ನಾರೆಡ್ಡಿ, ವೆಂಕಟೇಶ್ವರರೆಡ್ಡಿ, ಜಾಹಿ ಪ್ರಕಾಶ್ ರೆಡ್ಡಿ ದಮ್ಮೂರು, ಕೆ.ದಾಸರೆಡ್ಡಿ, ರಾಮನಗೌಡ, ಶಿವಕುಮಾರ್ ಸೇರಿದಂತೆ 50ಕ್ಕೂ ಹೆಚ್ಚು ಜನರು ಗಣಪಾಲ್ ಐನಾಥ ರೆಡ್ಡಿ ನೇತೃತ್ವದಲ್ಲಿ ಮೈಸೂರು ಕಡೆ ಪ್ರಯಾಣಿಸಿದರು.