ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿಗಾಗಿ ಆಗ್ರಹಿಸಿ ಬಿಜೆಪಿಯಿಂದ ಮಂಗಳವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಹೋಮ ನಡೆಸಿ ಸರ್ಕಾರದ ವಿರುದ್ಧ ವಿನೂತನ ಪ್ರತಿಭಟನೆ । ಖಾಲಿ ಕೊಡ ಹಿಡಿದು ಬೀದಿಗಿಳಿದ ಮಹಿಳೆಯರು

ಕನ್ನಡಪ್ರಭ ವಾರ್ತೆ ಗದಗ

ಗದಗ-ಬೆಟಗೇರಿ ಅವಳಿ ನಗರದ ಕುಡಿಯುವ ನೀರಿಗಾಗಿ ಆಗ್ರಹಿಸಿ ಬಿಜೆಪಿಯಿಂದ ಮಂಗಳವಾರ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಟಾಂಗ್ ಕೂಟದಿಂದ ಮಹಾತ್ಮಾ ಗಾಂಧಿ ವೃತ್ತದವರೆಗೆ ಪಾದಯಾತ್ರೆ ನಡೆಸಿ, ನೂರಾರು ಮಹಿಳೆಯರು ಖಾಲಿ ಕೊಡ ಹಿಡಿದು ನೀರು ಕೊಡಿ, ಇಲ್ಲವಾದರೆ ಉತ್ತರ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಟಾಂಗ್ ಕೂಟದಲ್ಲೇ ಹೋಮ ನಡೆಸಿ, ಹೋಮದಲ್ಲಿ ಶಾಸಕ ಎಚ್‌.ಕೆ. ಪಾಟೀಲರ ಭಾವಚಿತ್ರ ದಹಿಸಿ, ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮೆರವಣಿಗೆ ಮೂಲಕ ಗಾಂಧಿ ವೃತ್ತದಲ್ಲಿ ರಸ್ತೆ ತಡೆದು ನಗರಸಭೆಗೆ ಮುತ್ತಿಗೆ ಹಾಕಲು ಕಾರ್ಯಕರ್ತರು ಯತ್ನಿಸಿದರು.

ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿ, ಬೇಸಿಗೆ ಮುನ್ನವೇ ನೀರಿನ ಸಮಸ್ಯೆ ಉಲ್ಬಣವಾಗಿದ್ದು, ಅವಳಿ ನಗರದ ಜನತೆ ಪರದಾಟ ನಡೆಸುವಂತಾಗಿದೆ. ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಖಾಲಿ ಕೊಡಗಳೇ ಗದಗ ನಗರದ ನೀರಿನ ಸಮಸ್ಯೆಗೆ ಸಾಕ್ಷಿ. ಜನರ ಮೂಲಭೂತ ಅಗತ್ಯವಾದ ಕುಡಿಯುವ ನೀರಿನಲ್ಲೂ ನಿರ್ಲಕ್ಷ್ಯ ಯಾಕೆ...? ನೀರು ಪೂರೈಕೆಗೆ ಶಾಶ್ವತ ಪರಿಹಾರಕ್ಕೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಹಲವು ವರ್ಷಗಳಿಂದ ನಗರದಲ್ಲಿ ಕುಡಿಯುವ ನೀರಿಗಾಗಿ ಹೋರಾಟಗಳು ನಡೆತಾ ಇವೆ. ಆದರೆ ಈವರೆಗೂ ನಗರಕ್ಕೆ ಸಮರ್ಪಕ ನೀರು ಒದಗಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ಕ್ಷೇತ್ರದ ಶಾಸಕರು ವಿಫಲರಾಗಿದ್ದಾರೆ. ನಮಗೆ ಯಾವುದೇ ಭಾಗ್ಯ ಕೊಡುವುದು ಬೇಡ, ನಮಗೆ ನೀರಿನ ಭಾಗ್ಯ ಮಾತ್ರ ಕೊಡಿ ಎಂಬ ನಿಟ್ಟಿನಲ್ಲಿ ಬಿಜೆಪಿ ಹೋರಾಟ ನಡೆಸುತ್ತಿದೆ. ನೀರಿಗಾಗಿ ಪರದಾಡುವ ಮಹಿಳೆಯರು, ಸಾರ್ವಜನಿಕರು ಹೋರಾಟದಲ್ಲಿ ಭಾಗಿಯಾಗಿರುವುದೇ ಸಾಕ್ಷಿ. ಜಿಲ್ಲಾಡಳಿತ, ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಒಂದು ನೀರು ಕೊಡದೇ ಇರುವ ಸರ್ಕಾರ, ಇನ್ನ ಏನ್‌ ಕೊಡವುದಕ್ಕೆ ಸಾಧ್ಯ ಎನ್ನುವುದು ನಮ್ಮ ಪ್ರಶ್ನೆ...? ಮಾತು ಎತ್ತಿದರೆ ಆ ಗ್ಯಾರಂಟಿ, ಈ ಗ್ಯಾರಂಟಿ ಕೊಡುತ್ತೇವೆ ಎಂದು ಹೇಳುವ ಸರ್ಕಾರ, ಗ್ಯಾರಂಟಿ ಕೊಡಿ ಅದಕ್ಕೆ ನಮ್ಮ ವಿರೋಧವಿಲ್ಲ, ಗ್ಯಾರಂಟಿ ಜತೆಗೆ ಕುಡಿಯುವುದಕ್ಕೆ ನೀರನ್ನ ಕೊಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಮಾಜಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ವಿಜಯಕುಮಾರ ಗಡ್ಡಿ, ರವಿಕಾಂತ ಅಂಗಡಿ ಸೇರಿ ಪಕ್ಷದ ಹಿರಿಯರು, ಪ್ರಮುಖರು ಹಾಗೂ ನೂರಾರು ಕಾರ್ಯಕರ್ತರು ಇದ್ದರು.ಫಲಕಗಳ ಪ್ರದರ್ಶಿಸಿ ಆಕ್ರೋಶ

ಗದಗ ನಗರದ ಜನತೆಗೆ ಕುಡಿಯುವ ನೀರು ಕೊಡಿ. ಶಾಸಕರೇ ನೀರು ಕೊಡಿ, ಇಲ್ಲಾ ರಾಜೀನಾಮೆ ಕೊಡಿ, ಮತ ಕೇಳಲು ಬರ್ತಾರ, ನೀರು ಕೊಡಲ್ಲ, ಗದಗ-ಬೆಟಗೇರಿಗೆ ನೀರು ಕೊಡಿ, ಇಲ್ಲ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ, ಗದಗದ ದಾಹಕ್ಕೆ ಪರಿಹಾರ ಕೊಡಿ, ಇಲ್ಲವೇ ರಾಜಕೀಯಕ್ಕೆ ವಿದಾಯ ಹೇಳಿ ಎಂಬ ಇತ್ಯಾದಿ ಘೋಷಣೆಗಳುಳ್ಳ ಫಲಕಗಳನ್ನ ಪ್ರದರ್ಶಿಸಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.