ಬಿಜೆಪಿ ನಾಯಕರ ಮೇಲೆ ಬೆಂಗಳೂರಿನಲ್ಲಿ ಮೊಟ್ಟೆ ತೂರಿದ ಪ್ರಕರಣ ಖಂಡಿಸಿ ಶುಕ್ರವಾರ ಚಿತ್ರದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ನುಗ್ಗುವ ವಿಪಲ ಯತ್ನ ನಡೆಸಿದರು. ಪೊಲೀಸರ ಸಕಾಲಿಕ ಮಧ್ಯ ಪ್ರವೇಶದಿಂದಾಗಿ ಯಾವುದೇ ರೀತಿಯ ಅವಘಡಗಳು ಸಂಭವಿಸಲಿಲ್ಲ.
ಕನ್ನಡಪ್ರಭ ವಾರ್ತೆ ಚಿತ್ರದುರ್ಗಬಿಜೆಪಿ ನಾಯಕರ ಮೇಲೆ ಬೆಂಗಳೂರಿನಲ್ಲಿ ಮೊಟ್ಟೆ ತೂರಿದ ಪ್ರಕರಣ ಖಂಡಿಸಿ ಶುಕ್ರವಾರ ಚಿತ್ರದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ನುಗ್ಗುವ ವಿಪಲ ಯತ್ನ ನಡೆಸಿದರು. ಪೊಲೀಸರ ಸಕಾಲಿಕ ಮಧ್ಯ ಪ್ರವೇಶದಿಂದಾಗಿ ಯಾವುದೇ ರೀತಿಯ ಅವಘಡಗಳು ಸಂಭವಿಸಲಿಲ್ಲ.ನಗರದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ನಂತರ ಮೆರವಣಿಗೆಯಲ್ಲಿ ಸಾಗಿ ಅಂಬೇಡ್ಕರ್ ಪ್ರತಿಮೆ ಸುತ್ತು ಹಾಕಿ ನಂತರ ನೇರವಾಗಿ ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದರು. ಇದರಿಂದಾಗಿ ಕೆಲಕಾಲ ಪೊಲೀಸರು ಹಾಗೂ ಕಾರ್ಯಕರ್ತರು ನಡುವೆ ಮಾತಿನ ಚಕಮಕಿ ನಡೆಯಿತು. ಏತನ್ಮಧ್ಯೆ, ಮಹಿಳಾ ಕಾರ್ಯಕರ್ತೆಯೋರ್ವರು ಪೊಲೀಸ್ ಭದ್ರ ಕೋಟೆ ಭೇದಿಸಿಕೊಂಡು ಹೋಗಲು ಯತ್ನಿಸಿದಾಗಿ ಮಹಿಳಾ ಪೊಲೀಸರು ತಡೆದರು. ಈ ವೇಳೆ ಆಯ ತಪ್ಪಿ ಇಬ್ಬರೂ ಕೆಳಗೆ ಬಿದ್ದು ರಸ್ತೆ ಮೇಲೆ ಹೊರಳಾಡಿದ ಪ್ರಸಂಗ ಜರುಗಿತು.ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ದೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲಿರುವುದು ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ. ಆದರೆ ಬಿಜೆಪಿ ಹಾಗೂ ಎನ್‍ಡಿಎ ಮೈತ್ರಿಕೂಟ 22 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ. ಕರ್ನಾಟಕದಲ್ಲಿ ವಿರೋಧ ಪಕ್ಷದ ಶಾಸಕರಿಗೆ ಅವಮಾನ ಮಾಡಿದರೆ, ಬಿಜೆಪಿಗೂ 22 ರಾಜ್ಯಗಳಲ್ಲಿ ತಕ್ಕ ಉತ್ತರ ನೀಡುವ ಶಕ್ತಿಯಿದೆ ಎಂಬುದ ಕಾಂಗ್ರೆಸ್ ನಾಯಕರು ಮರೆಯಬಾರದೆಂದರು.
ನೀಚ ಕೃತ್ಯ: ಎರಡು ದಿನಗಳ ಹಿಂದೆ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರ ನೇತೃತ್ವದಲ್ಲಿ ಬೆಂಗಳೂರಿನ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾಗ, ಶಾಸಕ ಬಿ.ಪಿ. ಹರೀಶ್, ಕೆ.ಸಿ ರಾಮಮೂರ್ತಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರ ಮೇಲೆ ಮೊಟ್ಟೆ ಎಸೆಯುವ ಮೂಲಕ ಹಲ್ಲೆ ನಡೆಸಲಾಗಿದೆ. ಕಾಂಗ್ರೆಸ್ ಪ್ರಚೋದಿತ ವ್ಯಕ್ತಿಗಳು ಇಂತಹ ನೀಚ ಕೃತ್ಯಎಸಗಿದ್ದಾರೆಂದು ದೂರಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದು ವಿರೋಧ ಪಕ್ಷದ ಹಕ್ಕಾಗಿದೆ. ಇದನ್ನು ತಡೆಯಲು ಅಥವಾ ಬೆದರಿಸಲು ಯಾರಿಗೂ ಅಧಿಕಾರವಿಲ್ಲ ಎಂದರು.ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳನ್ನು ಕೊತ್ವಾಲ್ ಶಿಷ್ಯಂದಿರು ಎಂದು ಲೇವಡಿ ಮಾಡಿದ ವಿವ ಸದಸ್ಯ ನವೀನ್, ಇವತ್ತು ರಾಜ್ಯದಲ್ಲಿ ಶಾಂತಿ ಕದಡಿ ರೌಡಿ ರಾಜ್ಯವನ್ನಾಗಿ ಪರಿವರ್ತಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಹೋರಾಟಕ್ಕೆ ತಿಂಗಳುಗಟ್ಟಲೆ ತಲೆಮರೆಸಿಕೊಂಡಿದ್ದ ರಾಹುಲ್ ಗಾಂಧಿ ಏಕಾಏಕಿ ಆಗಮಿಸಿ, ತಾನೇ ಹೋರಾಟದ ರೂವಾರಿ ಎಂಬಂತೆ ಪ್ರದರ್ಶಿಸಿಕೊಂಡಿದ್ದಾರೆ. ಪ್ರಧಾನಮಂತ್ರಿಗಳ ನಿವಾಸದ ಮುಂದೆಯೂ ಧರಣಿ ನಡೆಸಿ, ಆಡಳಿತದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವುದು ತರವಲ್ಲದ ನಡವಳಿಕೆಯಾಗಿದೆ ಎಂದರು. ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು ಕಳೆದ 13 ವರ್ಷಗಳಲ್ಲಿ ಯಾವುದೇ ವಿರೋಧ ಪಕ್ಷದ ಹೋರಾಟವನ್ನು ಹತ್ತಿಕ್ಕುವ ಅಥವಾ ಅವರ ಸಂಸದರು-ಶಾಸಕರನ್ನು ತುಳಿಯುವ ಕೆಲಸ ಮಾಡಿಲ್ಲ. ದೇಶವಿರೋಧಿ ಶಕ್ತಿಗಳ ಜೊತೆಗೂಡಿ ಕಾಂಗ್ರೆಸ್ ಅರಾಜಕತೆ ಸೃಷ್ಟಿಸುತ್ತಿದೆ. ಬಿಜೆಪಿ ನಾಯಕರ ಮೇಲೆ ನಡೆಸಿದ ಹಲ್ಲೆ ಖಂಡಿಸಿ ರಾಜ್ಯದಲ್ಲಿ ನಡೆಸುತ್ತಿರುವ ಪ್ರಜಾಸತ್ತಾತ್ಮಕ ಹೋರಾಟಕ್ಕೆ ತಡೆ ನೀಡಿದರೆ ಬೀದಿಗಿಳಿದು ಸೂಕ್ತ ಉತ್ತರ ನೀಡುವುದಾಗಿ ಕೆ.ಎಸ್.ನವೀನ್ ಎಚ್ಚರಿಕೆ ನೀಡಿದರು.ಬಿಜೆಪಿ ಮುಖಂಡರಾದ ವೆಂಕಟೇಶ್ ಯಾದವ್, ಡಾ.ಪಿ.ಎಂ. ಮಂಜುನಾಥ್, ಶೈಲಜಾ ರೆಡ್ಡಿ, ಕಾರ್ಯದರ್ಶಿ ರೇಖಾ, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ದಗ್ಗೆ ಶಿವಪ್ರಕಾಶ್, ಭಾರ್ಗವಿ ದ್ರಾವಿಡ್, ಯಶವಂತ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.