ಗದಗ: ಪ್ರತಿಭಟನೆ ವೇಳೆ ಪ್ರತಿಕೃತಿ ದಹನಕ್ಕೆ ಟೈರ್‌ಗೆ ಬೆಂಕಿ ಹಚ್ಚುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತನ ಪ್ಯಾಂಟ್‌ಗೆ ಬೆಂಕಿ ತಗುಲಿದ ಘಟನೆ ಭಾನುವಾರ ಇಲ್ಲಿ ನಡೆಯಿತು.

80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಸಂದರ್ಭದಲ್ಲಿ ವಂದೇ ಮಾತರಂ ಗೀತೆಗೆ ಅಗೌರವ ತೋರಲಾಗಿದೆ ಎಂದು ಆರೋಪಿಸಿ ಗಾಂಧಿ ಕುಟುಂಬ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಭಾನುವಾರ‌ ಸಂಜೆ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವೇಳೆ ಈ ಘಟನೆ ನಡೆದಿದೆ.

ಸ್ಥಳದಲ್ಲಿದ್ದ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರು ಬೆಂಕಿ ನಂದಿಸಿದರು. ಘಟನೆಯಿಂದ ಕೆಲಕಾಲ ಪ್ರತಿಭಟನಾ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದ್ದರೂ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಬಳಿಕ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿ, ರಾಷ್ಟ್ರಗೀತೆಗಳು ಹಾಗೂ ದೇಶಭಕ್ತಿಗೀತೆಗಳಿಗೆ ಗೌರವ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ವೇಳೆ ಸೋನಿಯಾ ಗಾಂಧಿ ಅವರ ಪ್ರತಿಕೃತಿ ದಹಿಸಿ, ವಂದೇ ಮಾತರಂ ಗೀತೆಗೆ ಅಗೌರವ ತೋರಿಸಿರುವುದನ್ನು ಖಂಡಿಸಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಕೆಲವು ಬಿಜೆಪಿ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಲು ಮುಂದಾದರು. ಇದರಿಂದ ಗಾಂಧಿ ವೃತ್ತದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಯುವ ಘಟಕದ ಅಧ್ಯಕ್ಷ ಸಂತೋಷ ಅಕ್ಕಿ, ಪ್ರಶಾಂತ ನಾಯ್ಕರ, ಎಂ.ಎಂ. ಹಿರೇಮಠ, ಶ್ರೀಪತಿ ಉಡುಪಿ, ನಗರಸಭೆ ಸದಸ್ಯರಾದ ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಮುತ್ತು ಮುಶಿಗೇರಿ, ಕಿಶನ್ ಮೇರವಾಡೆ, ಮಂಜುನಾಥ ಮುಳಗುಂದ, ರಜತ್ ಭೀಮಕರ ಹಾಜರಿದ್ದರು.


ವಂದೇ ಮಾತರಂ ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಿದ ಮಹತ್ವದ ಗೀತೆಯಾಗಿದ್ದು, ಅಂತಹ ಗೀತೆಗೆ ಅಗೌರವ ತೋರಿಸುವ ಯಾವುದೇ ರೀತಿಯ ನಡೆ ಖಂಡನೀಯ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ ಹೇಳಿದರು.