ಸಾರಾಂಶ
ದೇಶದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಕಪ್ಪುಚುಕ್ಕೆಯಾಗಿ ಉಳಿದಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಈ ಹಿಂದೆ ದೇಶದಲ್ಲಿ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿದ್ದನ್ನು ಖಂಡಿಸಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಯುವ ಮೋರ್ಚಾದವರು ನಗರದ ಅಗ್ರಹಾರ ವೃತ್ತದಲ್ಲಿ ಗುರುವಾರ ಪೋಸ್ಟರ್ ಚಳವಳಿ ಹಮ್ಮಿಕೊಂಡಿದ್ದರು.ತುರ್ತು ಪರಿಸ್ಥಿತಿ ಹೇರುವ ಮೂಲಕ ಕಾಂಗ್ರೆಸ್ ಸಂವಿಧಾನಕ್ಕೆ ಮಾಡಿರುವ ಅಪಚಾರದ ಹೊಣೆಗಾರಿಕೆ ಹೊತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ವೇಳೆ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ದೇಶದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ಕಪ್ಪುಚುಕ್ಕೆಯಾಗಿ ಉಳಿದಿದೆ. ಜೊತೆಗೆ ಸ್ವಾತಂತ್ರ್ಯದಿಂದ ಈವರೆಗೂ ದೇಶದಲ್ಲಿ ಆಗಿರುವ ಎಲ್ಲಾ ಹಕ್ಕುಗಳ ಹರಣ ಕಾಂಗ್ರೆಸ್ ಅಧಿಕಾರಾವಧಿಯಲ್ಲಾಗಿದೆ. ಅದನ್ನು ಒಪ್ಪಿಕೊಳ್ಳದಿರುವುದು ಕಾಂಗ್ರೆಸ್ ಬಂಡತನವಾಗಿದೆ ಎಂದು ಕಿಡಿಕಾರಿದರು.ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಸರ್ಕಾರ ತನ್ನ ಸ್ವಾರ್ಥಕ್ಕಾಗಿ ಅಂದು ಸಂವಿಧಾನ ವಿರೋಧಿ ಕೃತ್ಯ ಮಾಡಿ, ಇಂದು ಸಂವಿಧಾನದ ಪಾಠವನ್ನು ನಮಗೆ ಮಾಡುತ್ತಿದೆ. ಕಾಂಗ್ರೆಸ್ ಇಬ್ಬಗೆಯ ನೀತಿ ಬಿಡಬೇಕು. ಕೂಡಲೇ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮುಂತಾದ ಕಾಂಗ್ರೆಸ್ ನಾಯಕರು ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು.
ಕೆ.ಆರ್. ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋಪಾಲ್ ರಾಜ್ ಅರಸ್, ಮುಖಂಡರಾದ ಕೆ.ಎಂ. ನಿಶಾಂತ್, ಜೋಗಿ ಮಂಜು, ರಾಕೇಶ್ ಗೌಡ, ವಿಶ್ವನಾಥ್, ಜಯರಾಮ್, ಬಾಲಕೃಷ್ಣ, ಶೈಲೇಂದ್ರ, ಸರ್ವಮಂಗಳ, ನಾಗರಾಜ್ ಬಿಲ್ಲಯ್ಯ, ವಿನಯ್ ಪಾಂಚಜನ್ಯ, ಪಾರ್ಥಸಾರತಿ, ಓಂ ಶ್ರೀನಿವಾಸ್, ಟಿವಿಎಸ್ ನಾಗರಾಜ್, ಪ್ರದೀಪ್, ಕೆ.ಜೆ. ರಮೇಶ್, ಉಮೇಶ್ ಕಾವೇರಿ, ಸೋಮಶೇಖರ್, ಸಂತೋಷ್, ಅನ್ನಪೂರ್ಣ, ಅಕ್ಷಯ್, ಮಧು, ನಿತೇಶ್, ಶ್ರೀಕಂಠ, ಕಿಶೋರ್, ಕೀರ್ತಿ, ಪ್ರತೀಕ್, ಪ್ರಶೀಕ್, ಚರಣ್, ವಿನೀತ್ ಮೊದಲಾದವರು ಇದ್ದರು.