ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಯಡಿ ಜಾಕ್‌ವೆಲ್‌ನ ಟ್ರಾನ್ಸ್‌ಫಾರ್ಮರ್‌ (ಟಿಸಿ) ದುರಸ್ತಿ ಹಾಗೂ ಯೋಜನೆಯ ನಿರ್ವಹಣೆ ವಿಚಾರದಲ್ಲಿ ಬಿಜೆಪಿ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತ. ರೈತರ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗದಂತೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿರುಗೇಟು ನೀಡಿದರು.

ಬ್ಯಾಡಗಿ: ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಯಡಿ ಜಾಕ್‌ವೆಲ್‌ನ ಟ್ರಾನ್ಸ್‌ಫಾರ್ಮರ್‌ (ಟಿಸಿ) ದುರಸ್ತಿ ಹಾಗೂ ಯೋಜನೆಯ ನಿರ್ವಹಣೆ ವಿಚಾರದಲ್ಲಿ ಬಿಜೆಪಿ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತ. ರೈತರ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗದಂತೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿರುಗೇಟು ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನಿನ್ನೆಯಷ್ಟೇ ಸರ್ಕಾರದ ವಿರುದ್ಧ ಮಾಡಿದ್ದ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆ ಈ ಭಾಗದ ರೈತರ ಬದುಕಿಗೆ ಜೀವನಾಡಿ, ಯೋಜನೆಯ ದುರಸ್ತಿ ಮತ್ತು ನಿರ್ವಹಣೆ ಕುರಿತು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದೆ ಎಂದರು.

ಟಿಸಿ ಹಾಳಾಗಿರುವುದರಿಂದ ನೀರಾವರಿಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರೈತರಿಗೆ ತೊಂದರೆಯಾಗದಂತೆ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

₹49.50 ಲಕ್ಷ ಅನುದಾನ ಬಿಡುಗಡೆ: ಟಿಸಿ ದುರಸ್ತಿಗೆ ಅಗತ್ಯವಿರುವ ₹49.50 ಲಕ್ಷ ಅನುದಾನ ಸರ್ಕಾರ ಈಗಾಗಲೇ ಬಿಡುಗಡೆಗೊಳಿಸಿದೆ. ಮುಂಗಾರು ಆರಂಭವಾದ ಬಳಿಕ 33 ಕೆವಿ ಸಾಮರ್ಥ್ಯದ ಟಿಸಿಯಲ್ಲಿ ತಾಂತ್ರಿಕ ದೋಷ ಉಂಟಾಗಿರುವುದಾಗಿ ನೀರಾವರಿ ಇಲಾಖೆ ಮಾಹಿತಿ ನೀಡಿದೆ. ಸಾಮಾನ್ಯವಾಗಿ ದುರಸ್ತಿಗೆ ಸುಮಾರು 3 ತಿಂಗಳು ಬೇಕಾಗುತ್ತದೆ. ಆದರೆ ರೈತರ ಹಿತದೃಷ್ಟಿಯಿಂದ ತುರ್ತುಗತಿಯಲ್ಲಿ ಕಾಮಗಾರಿ ಕೈಗೊಂಡಿದ್ದು, ಒಂದೂವರೆ ತಿಂಗಳೊಳಗೆ ದುರಸ್ತಿ ಪೂರ್ಣಗೊಳಿಸಿ ಆ. 2ರೊಳಗೆ ಯೋಜನೆ ಪುನರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸ್ವಚ್ಛತೆಗೆ ಸೂಚನೆ: ಯೋಜನೆ ವ್ಯಾಪ್ತಿಯ ಕಾಲುವೆಗಳ ಹೂಳು ತೆರವು ಹಾಗೂ ಸ್ವಚ್ಛತಾ ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಳೆಗಾಲದಲ್ಲಿಯೂ ರೈತರಿಗೆ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ಅನಗತ್ಯ ಆರೋಪ: ಸರ್ಕಾರ ರೈತರ ಪರವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದನ್ನು ಸಹಿಸಲಾಗದೆ ಅನಗತ್ಯ ಆರೋಪಗಳನ್ನು ಮಾಡಲಾಗುತ್ತಿದೆ. ಪ್ರತಿಭಟಿಸುವುದಾಗಿ ಬೆದರಿಕೆ ಹಾಕುವ ಬದಲು ರೈತರ ಸಮಸ್ಯೆ ಪರಿಹಾರಕ್ಕೆ ಸಹಕಾರ ನೀಡಿದರೆ ಹೆಚ್ಚು ಉಪಯುಕ್ತ, ತಾಂತ್ರಿಕ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮಾತನಾಡುವುದು ವಿರೋಧ ಪಕ್ಷದ ಜವಾಬ್ದಾರಿ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.