ಗೋಕರ್ಣ: ಇಲ್ಲಿನ ಬಸ್‌ಸ್ಟ್ಯಾಂಡ್ ರಸ್ತೆಯಲ್ಲಿರುವ ಪ್ರಸಾದ ನಿಲಯ ಹತ್ತಿರ ಬಿಜೆಪಿ ಗೋಕರ್ಣ ಮಂಡಲದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಮತ್ತು ಮಂಡಲ ಕಾರ್ಯಕಾರಿಣಿ ಸಭೆ ನಡೆಯಿತು.
ಶಾಸಕ ದಿನಕರ ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಶುಭಕೋರಿ, ಪ್ರತಿಯೊಬ್ಬರೂ ಪಕ್ಷದ ಗೆಲವು, ಬೆಳವಣಿಗೆಗೆ ಶ್ರಮಿಸೋಣ ಎಂದು ಕರೆ ನೀಡಿದರು.ಬಳಿಕ ಮಾತನಾಡಿದ ಅವರು, ಬಿಜೆಪಿಗೆ ಹೆಚ್ಚಿನ ಮತ ನೀಡಿ ಬೆಂಬಲಿಸಿದರೂ ಈ ಭಾಗದ ಜನರು ಈ ಹಿಂದೆ ಪಕ್ಷಕ್ಕೆ ಸೇರುತ್ತಿರಲಿಲ್ಲ. ಆದರೆ ಈಗ ಪಕ್ಷಕ್ಕೆ ಮತದ ಜತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರ್ಪಡೆಗೊಂಡಿರುವುದು ಸಂತಸ ತಂದಿದೆ. ಇದು ಪಕ್ಷದ ನೆಲೆ ಮತ್ತಷ್ಟು ಭದ್ರಗೊಳಿಸಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಗುರುಪ್ರಸಾದ ಹೆಗಡೆ ಹರ್ತಿಬೈಲ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಂದ್ರ ನಾಯ್ಕ, ಕುಮಟಾ ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ನಿಕಟಪೂರ್ವ ಅಧ್ಯಕ್ಷ ಹೇಮಂತಕುಮಾರ್ ಗಾಂವಕರ, ಕುಮಾರ ಮಾರ್ಕಾಂಡೆ, ಡಾ. ಜಿ.ಜಿ. ಹೆಗಡೆ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಗ್ರಾಪಂ ಮಾಜಿ ಸದಸ್ಯ ರಮೇಶ ಪ್ರಸಾದ, ಜಯರಾಮ ಹೆಗಡೆ, ಜಿಲ್ಲಾ ಉಪಾಧ್ಯಕ್ಷ ನಾಗರಾಜ ನಾಯಕ ತೊರ್ಕೆ, ರಾಜ್ಯ ವ್ಯಾಪಾರ ಪ್ರಕೋಷ್ಟದ ಸದಸ್ಯ ಮಂಜುನಾಥ ಜನ್ನು, ಒಬಿಸಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಭಾಸ್ಕರ್ ಚಂದಾವರ ಭಾಗವಹಿಸಿದ್ದರು.ಕಾರ್ಯಕಾರಿಣಿ ಸಭೆ: ಬಿಜೆಪಿ ಜಿಲ್ಲಾಧ್ಯಕ್ಷರಾದ ಎನ್.ಎಸ್. ಹೆಗಡೆ ನೇತೃತ್ವದಲ್ಲಿ ಬಿಜೆಪಿ ಗೋಕರ್ಣ ಮಂಡಲ ಕಾರ್ಯಕಾರಿಣಿ ಸಭೆ ನಡೆಯಿತು. ಭಾರತಮಾತೆ, ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ದೀನ್ ದಯಾಳು ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಬಿಜೆಪಿ ಗೋಕರ್ಣ ಮಂಡಳದ ಅಧ್ಯಕ್ಷರಾಗಿ ಗಣೇಶ ಪಂಡಿತ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ ಡಿ. ಅಂಬಿಗ, ಮಹೇಶ ಕಮಲಾಕರ ನಾಯ್ಕ ಹಾಗೂ ಜಿಲ್ಲಾ ಹಿಂದುಳಿದ ಮೋರ್ಚಾ, ಎಸ್‌ಸಿ ಮೋರ್ಚಾ, ಅಲ್ಪ ಸಂಖ್ಯಾತ ಮೋರ್ಚಾ, ರೈತ ಮೋರ್ಚಾ ಸೇರಿದಂತೆ ವಿವಿಧ ವಿಭಾಗದ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು. ಅನುದಾನ ನಾನು ತಂದಿದ್ದೇನೆ: ಮುಖ್ಯಮಂತ್ರಿ ಇಲ್ಲಿಗೆ ಬಂದಾಗ ನಾನೇ ಮೂರು ಸೇತುವೆ ಶಂಕುಸ್ಥಾಪನೆ, ಉದ್ಘಾಟನೆ ಮಾಡಿದ್ದೇನೆ, ಬಿಜೆಪಿಯವರು ಸಹಕಾರ ನೀಡಿಲ್ಲ ಎಂದರು. ಆದರೆ ನಾನು ಇಲ್ಲಿ ಬಂದಾಗ ಅವರಿಗೆ ಅವಮಾನ ಮಾಡುವುದು ಸರಿಯಲ್ಲ ಎಂದು ಸುಮ್ಮನಿದ್ದೆ. ಆದರೆ ಈ ಮೂರು ಸೇತುವೆಗಳಿಗೆ ನಾನು ಹೆಚ್ಚಿನ ಹಣ ಮಂಜೂರಿಸಿದ್ದೇನೆ. ಅದರ ಬಗ್ಗೆ ದಾಖಲೆ ಸಹ ನೀಡಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಮುಖ್ಯಮಂತ್ರಿ ಇಲ್ಲಿಗೆ ಬಂದಾಗ ಕಾಂಗ್ರೆಸ್ ಮುಖಂಡರು, ನೀವೊಬ್ಬರೇ ಅಲ್ಲಿದ್ದೀರಿ, ನಮ್ಮ ಪಕ್ಷಕ್ಕೆ ಬನ್ನಿ ಎಂದಾಗ ನಾನು ಬಿಜೆಪಿ ಶಾಸಕ, ಒಬ್ಬನಿದ್ದರೂ ಧೈರ್ಯವಾಗಿ ನಿಲ್ಲುತ್ತೇನೆ ಎಂದಿದ್ದೇನೆ. ಆಗ ಮುಖ್ಯಮಂತ್ರಿ ನೀವು ಅಲ್ಲೆ ಇರಿ ಎಂದರು. ನಾನು ಎಂದೂ ಕಾಂಗ್ರೆಸ್ ಸೇರುತ್ತೇನೆ ಎಂದಿಲ್ಲ. ನಾನು ಮತ್ತು ನಮ್ಮ ಕುಟುಂಬ ಈ ಹಿಂದೆ ರಾಮಕೃಷ್ಣ ಹೆಗಡೆ ಅವರೊಂದಿಗೆ ಜನತಾ ಪಕ್ಷದಲ್ಲಿ ಇದ್ದವರು. ನಾ ಮತದಾನದ ಹಕ್ಕು ಬಂದಾಗಿನಿಂದ ಕಾಂಗ್ರೆಸ್‌ಗೆ ವೋಟ್ ಹಾಕಿಲ್ಲ ಎಂದರು.