ಬಿಜೆಪಿಗರ ಜನಾಕ್ರೋಶ ಯಾತ್ರೆ ಮೋದಿ ವಿರುದ್ಧ: ಸಂತೋಷ ಲಾಡ್‌

| Published : Apr 08 2025, 12:36 AM IST

ಸಾರಾಂಶ

ಚೀನಾ ನಮ್ಮ ದೇಶದೊಳಗೆ 175 ಕಿಮೀ ಒಳಗೆ ಬಂದಿದೆ. 600ಕ್ಕೂ ಹೆಚ್ಚು ಹಳ್ಳಿಗಳನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ದೇಶದ ಜನತೆಗೆ ಗೊತ್ತಾಗಬಾರದು ಎಂದು ವಕ್ಫ್ ಚರ್ಚೆ ಮುಂದೆ ತಂದಿದ್ದಾರೆ ಎಂದು ಸಚಿವ ಸಂತೋಷ ಲಾಡ್‌ ಹೇಳಿದರು.

ಧಾರವಾಡ: ರಾಜ್ಯದಲ್ಲಿ ನಡೆಯುತ್ತಿರುವ ಜನಾಕ್ರೋಶ ಯಾತ್ರೆಯು ಮೋದಿ ವಿರುದ್ಧವೇ ಹೊರತು ಕಾಂಗ್ರೆಸ್ ವಿರುದ್ಧ ಅಲ್ಲ ಎಂದು ಸಚಿವ ಸಂತೋಷ ಲಾಡ್‌ ಲೇವಡಿ ಮಾಡಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಬೆಲೆ ಏರಿಕೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಕಾರಣ. ವಿಪರ್ಯಾಸ ಎಂದರೆ, ಬಿಜೆಪಿಯವರು ತಮ್ಮ ಪ್ರಧಾನಿಗಳ ವಿರುದ್ಧವೇ ಬೆಲೆ ಏರಿಕೆ ವಿರೋಧಿಸಿ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ ಎಂದರು.

ಕರ್ನಾಟಕದಲ್ಲಿ ಬೆಲೆ ಏರಿಕೆ ಎನ್ನುತ್ತಿದ್ದು, ಬಿಜೆಪಿ ಅವಧಿಯಲ್ಲಿಯೂ ಬೆಲೆ ಏರಿಕೆ ಆಗಿದೆ. ಶೇಕಡಾವಾರು ಬೆಲೆ ಏರಿಕೆ ಬಗ್ಗೆ ಮಾತನಾಡಲಿ. ಮಾಧ್ಯಮ ಪ್ರಚಾರಕ್ಕಾಗಿ ಈ ಹೋರಾಟ ಮಾಡುತ್ತಿದ್ದಾರೆ. ಗುಜರಾತ್ ಜಾಮ್ ನಗರದಲ್ಲಿ ವಿಮಾನ ಕ್ರಾಷ್ ಆಗಿದೆ. 70 ವರ್ಷದ ವಿಮಾನ ಇದಾಗಿದ್ದು, ಸಿದ್ಧಾರ್ಥ ಎಂಬ ಯುವಕ ಮೃತಪಟ್ಟಿದ್ದಾನೆ. ಆದರೆ ಈ ಬಗ್ಗೆ ಎಲ್ಲಿಯೂ ಚರ್ಚೆ ಆಗುತ್ತಿಲ್ಲ. ಇಂಥವುಗಳನ್ನು ಮುಚ್ಚಿ ಹಾಕಲು ವಕ್ಫ್ ಚರ್ಚೆ ಮುನ್ನೆಲೆಗೆ ಬರುತ್ತದೆ ಎಂದರು.

ಗಡಿ ಗೊಂದಲ ಮುಚ್ಚಲು ವಕ್ಫ್‌: ವಕ್ಫ್ ತಿದ್ದುಪಡಿ ಬಿಲ್ ಚರ್ಚೆ ವಿಚಾರವಾಗಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ ಸಚಿವ ಲಾಡ್‌, ಚೀನಾ ನಮ್ಮ ದೇಶದ ಗಡಿಯೊಳಗೆ ಬಂದಿದೆ. ಅದನ್ನು ಮುಚ್ಚಿ ಹಾಕಲು ವಕ್ಫ್ ವಿಚಾರ ಮುಂದೆ ತಂದಿದ್ದಾರೆ. ಚೀನಾ ನಮ್ಮ ದೇಶದೊಳಗೆ 175 ಕಿಮೀ ಒಳಗೆ ಬಂದಿದೆ. 600ಕ್ಕೂ ಹೆಚ್ಚು ಹಳ್ಳಿಗಳನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ದೇಶದ ಜನತೆಗೆ ಗೊತ್ತಾಗಬಾರದು ಎಂದು ವಕ್ಫ್ ಚರ್ಚೆ ಮುಂದೆ ತಂದಿದ್ದಾರೆ. ಬಡತನ, ನಿರುದ್ಯೋಗ ವಿಷಯದಲ್ಲಿ ಚರ್ಚೆ ಆಗಬಾರದು ಎಂಬ ಉದ್ದೇಶ ಬಿಜೆಪಿಗಿದೆ. ಅಲ್ಪಸಂಖ್ಯಾತರಿಗೆ ಅವರದ್ದೇಯಾದ ವ್ಯವಸ್ಥೆ, ಕಾನೂನುಗಳಿವೆ. ಗೊತ್ತಿದ್ದರೂ ವಕ್ಫ್ ಬಿಲ್‌ ತಿದ್ದುಪಡಿ ಮಾಡಿದ್ದಾರೆ ಎಂದರು. ಬೇಸರ ಎಂದರೆ, ಮಾಧ್ಯಮಗಳು ಸಹ ಬಿಜೆಪಿ ಹೇಳಿರುವುದನ್ನೇ ಹೇಳುತ್ತವೆ ಎಂದರು.

ಮೋದಿ ಹೆಸರು ಹೇಳಿ ಲಾಡ್‌ ದೊಡ್ಡವರಾಗುವರೇ?:

ಹಾಲು, ಪೆಟ್ರೊಲ್, ಡೀಸೆಲ್‌ ದರ ಏರಿಸಿದವರು ಪ್ರಧಾನಿಗಳೇ ಅಥವಾ ರಾಜ್ಯ ಕಾಂಗ್ರೆಸ್‌ ಸರ್ಕಾರವೇ? ಎಂದು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಸಚಿವ ಸಂತೋಷ ಲಾಡ್‌ ಅವರಿಗೆ ತಿರುಗೇಟು ನೀಡಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ಬೆಲೆ ಏರಕೆಯಿಂದ ರೋಸಿ ಹೋಗಿದ್ದಾರೆ. ಹೀಗಾಗಿ ಜನಕ್ರೋಶ ಯಾತ್ರೆ ಮಾಡುತ್ತಿದ್ದೇವೆ. ಉಸ್ತುವಾರಿ ಸಂತೋಷ ಲಾಡ್‌ ಅವರಿಗೆ ತಮ್ಮ ಕ್ಷೇತ್ರ ಮತ್ತು ಜಿಲ್ಲೆ ಕಾಣುತ್ತಿಲ್ಲ. ಅಧಿಕಾರಕ್ಕೆ ಬಂದಾಗಿನಿಂದ ಜಿಲ್ಲೆಗೆ ಒಂದು ರುಪಾಯಿ ಅನುದಾನ ತಂದಿಲ್ಲ. ವಿದ್ಯುತ್ ಸೇರಿ ಎಲ್ಲ ವಸ್ತುಗಳ ದರ ಏರಿಸಿದ್ದು ಕಾಂಗ್ರೆಸ್. ಪ್ರತಿ ಮಾತಿಗೂ ಮೋದಿ ಹೆಸರು ಬಳಸಿಕೊಳ್ಳುತ್ತಾರೆ. ಲಾಡ್‌ ಅವರು ಮೋದಿ ಹೆಸರು ಹೇಳಿದರೆ ದೊಡ್ಡವನಾಗುತ್ತೇನೆಂದು ಅಂದುಕೊಂಡಿದ್ದಾರೆ. ಅವರಿಗೆ ಶೋಭೆ ತರುವುದಿಲ್ಲ. ಧಾರವಾಡಕ್ಕೆ ತಾವು ಏನು ಮಾಡಿದ್ದೀರಿ ಎಂದು ಜನರು ಕೇಳುತ್ತಿದ್ದಾರೆ ಎಂದ ಬೆಲ್ಲದ, ಮಹಾನಗರ ಪಾಲಿಕೆ ನೌಕರರ ಸಂಬಳ ₹25 ಕೋಟಿ ಬರಬೇಕಿದೆ. ಏಕೆ ಬರುತ್ತಿಲ್ಲ? ₹120 ಕೋಟಿ ರಾಜ್ಯ ಸರ್ಕಾರದಿಂದ ಪಾಲಿಕೆ ಅನುದಾನ ಬರಬೇಕಿದೆ. ಅದನ್ನು ಕೊಡಿಸುವ ಕೆಲಸ ಮಾಡಲಿ ಎಂದರು.