ಬಿಜೆಪಿಯವರದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ: ಸಚಿವ ಡಿ. ಸುಧಾಕರ

| Published : Jul 15 2024, 01:46 AM IST

ಸಾರಾಂಶ

ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲದ ಕಾರಣಕ್ಕೆ ಈ ರೀತಿಯ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮುಡಾದಲ್ಲಿ ಆಗಿದೆ ಎನ್ನಲಾದ ಹಗರಣ ಬಿಜೆಪಿ ಆಡಳಿತದ ಅವಧಿಯಲ್ಲಿಯದು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಬಿಜೆಪಿ ನಾಯಕರು ಮಾಡುತ್ತಿರುವ ಮುಡಾ ಹಗರಣದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರಾಜ್ಯದ ಜನತೆಗೆ ಸ್ಪಷ್ಟಪಡಿಸಿದ್ದಾರೆ. ಆದರೂ ಬಿಜೆಪಿಯವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಡಿ. ಸುಧಾಕರ ಆರೋಪಿಸಿದರು.

ನಗರದಲ್ಲಿ ಭಾನುವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಳಂಕ ರಹಿತವಾಗಿ ಅಧಿಕಾರ ನಡೆಸಿಕೊಂಡು ಬಂದಿರುವುದು ಅವರ ಆಡಳಿತದ ಇತಿಹಾಸದಿಂದ ಸ್ಪಷ್ಟವಾಗುತ್ತದೆ. ಯಾವುದೋ ಒಂದು ಜಾಗದ ವಿಚಾರದಲ್ಲಿ ಅವರು ಭ್ರಷ್ಟಾಚಾರ ಮಾಡಲು ಸಾಧ್ಯವೇ ಇಲ್ಲ ಎಂದರು.

ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲದ ಕಾರಣಕ್ಕೆ ಈ ರೀತಿಯ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮುಡಾದಲ್ಲಿ ಆಗಿದೆ ಎನ್ನಲಾದ ಹಗರಣ ಬಿಜೆಪಿ ಆಡಳಿತದ ಅವಧಿಯಲ್ಲಿಯದು. ಅದರಲ್ಲಿನ ಭ್ರಷ್ಟಾಚಾರವನ್ನು ಹೋಗಲಾಡಿಸುವುದಾಗಿ ಮುಖ್ಯಮಂತ್ರಿಗಳೇ ತಿಳಿಸಿದ್ದಾರೆ. ಅದರಂತೆ ಸ್ವಚ್ಛ ಆಡಳಿತ ನೀಡಲಿದ್ದಾರೆ ಎಂದರು.

ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಅದರ ಮಧ್ಯೆಯೇ ಇಡಿ ಸಹ ಎಂಟ್ರಿ ಆಗಿದೆ. ಇದು ಬ್ಯಾಂಕ್ ಹಾಗೂ ಕಾರ್ಪೊರೇಷನ್‌ಗೆ ಸಂಬಂಧಿಸಿದ ಹಗರಣವಾಗಿದೆ. ವಾಲ್ಮೀಕಿ ಹಗರಣ ನಾಗೇಂದ್ರ ಅವರ ಗಮನಕ್ಕೆ ಬಂದಿರಲಿಲ್ಲ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಎರಡು ತನಿಖಾ ತಂಡದಿಂದ ತನಿಖೆ ನಡೆಯುತ್ತಿದ್ದು, ಅದರ ಬಗ್ಗೆ ನಾನು ಹೆಚ್ಚಿಗೆ ಏನನ್ನು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.