ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ವಿಧಾನಸಭಾ ಕ್ಷೇತ್ರದ ದೇವಸ್ಥಾನ, ಮಠಗಳು ಸಮುದಾಯ ಭವನಗಳ ನಿರ್ಮಾಣಕ್ಕೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದೇನೆ, ಮುಂದೆಯೂ ಎಲ್ಲಾ ಸಮಾಜದವರಿಗೂ ಸಹಕಾರ ನೀಡುತ್ತೇನೆ ಎಂದು ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡ ನಿಶಾಂತ್ ತಿಳಿಸಿದರು.ಹನೂರು ತಾಲೂಕಿನ ಅಲಗುಮೂಲೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಸಪ್ಪೆ ಮಲ್ಲೇಶ್ವರ ಸ್ವಾಮಿ ದೇವಾಲಯದ ಸಂಪ್ರೋಕ್ಷಣೆ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಪುರಾತನ ಸಪ್ಪೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನವನ್ನು ಸಂಪ್ರೋಕ್ಷಣೆ ಮಾಡಲು ಗ್ರಾಮಸ್ಥರೆಲ್ಲರೂ ತೀರ್ಮಾನ ಮಾಡಿ ಹಲವು ದಾನಿಗಳ ಸಹಾಯದಿಂದ ಅಭಿವೃದ್ಧಿ ಪಡಿಸಿದ್ದಾರೆ. ಈ ದೇವಾಲಯಕ್ಕೂ ₹12 ಲಕ್ಷ ನೀಡಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇದೇ ನಿಟ್ಟಿನಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಮಠಗಳಿಗೆ ಅನುದಾನ ನೀಡಿದ್ದೇನೆ. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಅಂಗವಿಕಲ ವಿದ್ಯಾರ್ಥಿಗಳಿಗೆ ಸಲಕರಣೆಗಳು ಹೈನುಗಾರಿಕೆ ಮಾಡುವವರಿಗೆ ಹಸುಗಳನ್ನು ನೀಡಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿದ್ದೇನೆ. ಹನೂರು ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ನನ್ನದೇ ಆದ ಕನಸು ಇಟ್ಟುಕೊಂಡಿದ್ದೇನೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಮತದಾರರು ಅವಕಾಶ ಮಾಡಿಕೊಟ್ಟರೆ ಖಂಡಿತವಾಗಿಯೂ ಅಭಿವೃದ್ಧಿ ಮಾಡುತ್ತೇನೆ ಎಂದರು.
ಅಲಗುಮೂಲೆ ಗ್ರಾಮಸ್ಥರು ಮಾತನಾಡಿ, ಯುವ ಮುಖಂಡ ನಿಶಾಂತ್ ಸಪ್ಪೆ ಮಲ್ಲೇಶ್ವರ ಸ್ವಾಮಿ ದೇವಾಲಯಕ್ಕೆ ಸಂಪ್ರೋಕ್ಷಣೆ ಮಾಡಲು ಹೆಚ್ಚಿನ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಪರವಾಗಿದ್ದು ಯುವ ನಾಯಕರಾಗಿ ಬೆಳೆಯುತ್ತಿರುವ ನಿಶಾಂತ್ ಅವರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.ಗ್ರಾಮಸ್ಥರಿಂದ ಸನ್ಮಾನ: ದೇವಾಲಯಕ್ಕೆ ಭೇಟಿ ನೀಡಿದ ಯುವ ಮುಖಂಡ ನಿಶಾಂತ್ ಅವರನ್ನು ಅಲಗುಮೂಲೆ ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ನಿಶಾಂತ್ ಬೆಂಬಲಿಗರು ಉಪಸ್ಥಿತರಿದ್ದರು.