ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ನನಗೆ ಇವಿಎಂ ಮೇಲೆ ಇನ್ನೂ ನಂಬಿಕೆ ಇಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಇವಿಎಂ ಬಳಕೆಯಲ್ಲಿ ಮೋಸ ಮಾಡಲಿಕ್ಕೆ ಅವಕಾಶ ಸಿಕ್ಕಿರಲಿಕ್ಕಿಲ್ಲ. ಮಾಡಿದ್ದರೆ ಸಿಕ್ಕಿಬೀಳ್ತೇವೆ ಅಂತ ಮಾಡಿಲ್ಲ. ನಾವು ಕರ್ನಾಟಕದಲ್ಲಿ 185ರಿಂದ 190 ಗೆಲ್ಲಬಹುದಿತ್ತು. ಆದರೆ 135 ಸ್ಥಾನದಲ್ಲಿದ್ದೇವೆ. ಇವಿಎಂ ಮೋಸಕ್ಕೆ ಜನ ಒಂದಿಲ್ಲ ಒಂದು ದಿನ ರೊಚ್ಚಿಗೇಳ್ತಾರೆ ಎಂದು ಕಿಡಿಕಾರಿದರು.
ಮಹಾರಾಷ್ಟ್ರದಲ್ಲಿ 34 ಲಕ್ಷ ಮತದಾರರು ಹೆಚ್ಚಾಗಿದ್ದಾರೆ. ಇದರ ಬಗ್ಗೆ ತನಿಖೆ ಆಗುತ್ತಿದೆ. ಬೇಕಿದ್ದರೆ ಬ್ಯಾಲೆಟ್ ಪೇಪರ್ ಚುನಾವಣೆ ನಡೆಸಲಿ ಎಂದು ಸಚಿವ ತಂಗಡಗಿ ಬಿಜೆಪಿಗೆ ಸವಾಲು ಹಾಕಿದರು.ವಾಲ್ಮಿಕಿ ರಾಮ ಬೇರೆ, ಅಯೋಧ್ಯೆ ರಾಮ ಬೇರೆ ಅನ್ನುವ ಸಚಿವ ಮಹದೇವಪ್ಪ ಹೇಳಿಕೆಗೆ, ರಾಮ ಒಬ್ಬನೇ, ಆದರೆ ರಾಮನನ್ನು ಸೃಷ್ಟಿ ಮಾಡಿದ್ದು ವಾಲ್ಮಿಕಿ. ಬಿಜೆಪಿಯವರು ಕೆಲ ದೇವರನ್ನು ಗುತ್ತಿಗೆ ಪಡೆದವರಂತೆ ಮಾಡುತ್ತಿದ್ದಾರೆ. ಅವರು ಅಭಿವೃದ್ಧಿ ಬಗ್ಗೆ ಎಲ್ಲೂ ಮಾತನಾಡುವುದಿಲ್ಲ. ನಾವು ರಾಮನ ಭಕ್ತರಿದ್ದೇವೆ, ಆಂಜನೇಯನ ಭಕ್ತರಿದ್ದೇವೆ ಎಂದು ಮಾತನಾಡುತ್ತಾರೆ. ಎಷ್ಟು ದಿನ ಈ ಬಿಜೆಪಿಯವರು ಜನರ ಮೇಲೆ ಧರ್ಮದ ಪ್ರಯೋಗ ಮಾಡುತ್ತಾರೆ? ಆದರೆ ಬಿಜೆಪಿಯವರಿಗೆ ಇವಿಎಂ ಸಾಥ್ ನೀಡುತ್ತದೆ. ನಾವು ದೇವರನ್ನು ನಂಬುತ್ತೇವೆ ಎಂದರು.
ಡಿಸಿಎಂ ಕುಂಭಮೇಳ:ನಾನೂ ದೈವ ಭಕ್ತ, ಪ್ರಯಾಗರಾಜ್‌ಗೆ ಹೋಗಲು ಆಗಿಲ್ಲ. ಡಿಸಿಎಂ ಹೋಗಿದ್ದರಲ್ಲಿ ತಪ್ಪಿಲ್ಲ. ಸಾಧ್ಯವಾದರೆ ನಾನು ಹೋಗುತ್ತೇನೆ. ದೇವರ ಮೇಲೆ ನನಗೆ ನಂಬಿಕೆ ಇದೆ ಎಂದು ಸಚಿವ ತಂಗಡಗಿ ಹೇಳಿದರು.
ಶುಭವಾಗಲಿ ಪದ ತಪ್ಪು ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕನ್ನಡ ಭಾಷೆಯಲ್ಲಿ ಯಾರು ಪರಿಪಕ್ವರಿದ್ದಾರೆ? ಬರೆಯುವಾಗ ಒತ್ತು, ದೀರ್ಘ ಹೆಚ್ಚು ಕಡಿಮೆಯಾಗಿರುತ್ತೆ. ಕನ್ನಡ ಭಾಷೆ ಬಗ್ಗೆ ನನಗೆ ಬಹಳ ಗೌರವವಿದೆ. ನಡೆಯುವವನೇ ಎಡವುತ್ತಾನೆ. ಬೆಡ್ ಮೇಲೆ ಇರೋನು ಎಡುವೋಕೆ ಆಗುತ್ತಾ? ಎಂದರು.ಎಸ್ಸಿ-ಎಸ್ಟಿ ಸಮಾವೇಶ ಮಾಡೋಕೆ ನಮ್ಮಲ್ಲೇನು ಸಮಸ್ಯೆ ಇಲ್ಲ. ಹೈಕಮಾಂಡ್ ಬೇಡ ಅಂತ ಹೇಳಿಲ್ಲ. ನಾವು ಎಲ್ಲರೂ ಕೂತು ಮಾತನಾಡುತ್ತೇವೆ. ಬಿಜೆಪಿಯಲ್ಲಿ 36 ಗುಂಪು ಇದ್ದು, ಈಗ 18 ಗುಂಪುಗಳಾಗಿವೆ ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸೂಗೂರು ದೇವದಾಸಿಯರ ಜಾಗ ತೆಗೆದುಕೊಂಡಿರುವ ಆರೋಪಕ್ಕೆ, ಈ ಪ್ರಕರಣ ರಾಯಚೂರಿನಲ್ಲಿದೆ. ನಾನು ರಾಯಚೂರು ಡಿಸಿಗೆ ಮಾತನಾಡಿ ಮಾಹಿತಿ ಪಡೆದಿದ್ದೇನೆ. ಈಗ ನನ್ನ ಮೇಲೆ ಆರೋಪ ಮಾಡಿದ್ದಾರೆ. ಕನಕಗಿರಿಯಲ್ಲಿ ಮೂರು ಬಾರಿ ಗೆದ್ದಿದ್ದೇನೆ. ಜನ ನನಗೆ ಸರ್ಟಿಫಿಕೇಟ್ ನೀಡಿದ್ದಾರೆ. ಅವಶ್ಯ ಬಿದ್ದರೆ ನಾನು ಸರ್ಟಿಫಿಕೇಟ್ ನೀಡುತ್ತೇನೆ ಎಂದರು.ಕನಕಗಿರಿಯಲ್ಲಿ ಕಳಪೆ ಆಹಾರ ಧಾನ್ಯ ನೀಡುವ ಕುರಿತು ಮುಂದೆ ನಾನು ಶಾಲೆಗೆ ಭೇಟಿ ನೀಡುತ್ತೇನೆ. ಗುಣಮಟ್ಟದ ಆಹಾರಧಾನ್ಯ ನೀಡಲು ಕ್ರಮ ಕೈಗೊಳ್ಳುವುದಾಗಿ ಸಚಿವ ತಂಗಡಗಿ ಭರವಸೆ ನೀಡಿದರು.