ಸಾರಾಂಶ
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳ ಘಟಿಕೋತ್ಸವ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ. ಹಾಗಾಗಿ ಸೆ.೧೩ರಂದು ನಡೆಯಲಿರುವ ಮಂಡ್ಯ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ರಾಜ್ಯಪಾಲರ ವಿರುದ್ಧ ಕಪ್ಪುಬಟ್ಟೆ ಪ್ರದರ್ಶಿಸಲಾಗುವುದು.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯಪಾಲರು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆಯುತ್ತಿರುವ ಪಿತೂರಿಯ ಭಾಗವಾಗಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಸೆ.೧೩ರಂದು ಕಪ್ಪುಪಟ್ಟಿ ಪ್ರದರ್ಶನ ಚಳವಳಿ ಹಮ್ಮಿಕೊಂಡಿರುವುದಾಗಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸುಂಡಹಳ್ಳಿ ಮಂಜುನಾಥ್ ಹೇಳಿದರು.ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳ ಘಟಿಕೋತ್ಸವ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ. ಹಾಗಾಗಿ ಸೆ.೧೩ರಂದು ನಡೆಯಲಿರುವ ಮಂಡ್ಯ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ರಾಜ್ಯಪಾಲರ ವಿರುದ್ಧ ಕಪ್ಪುಬಟ್ಟೆ ಪ್ರದರ್ಶಿಸಿ ರಾಜ್ಯಪಾಲರನ್ನು ತೊಲಗಿಸಿ, ಕರ್ನಾಟಕ ಸಂರಕ್ಷಿಸಿ ಹೋರಾಟ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಾಗ ಸಂವಿಧಾನದ ಮೂಲತತ್ವಗಳು, ಪ್ರಜಾಪ್ರಭುತ್ವದ ಆಶಯಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ಕೋಮುವಾದಿ ಮತ್ತು ಜಾತಿರಾಜಕಾರಣ ಮಾಡುತ್ತಿರುವ ಬಿಜೆಪಿ-ಜೆಡಿಎಸ್ ಜೊತೆ ಸೇರಿ ರಾಜಭವನವನ್ನು ಎರಡೂ ಪಕ್ಷಗಳ ಕಚೇರಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.ಕರ್ನಾಟಕ ಲೋಕಾಯುಕ್ತ, ಎಸ್‌ಐಟಿ ಇನ್ನಿತರ ತನಿಖಾ ಸಂಸ್ಥೆಗಳು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ಪ್ರಮುಖ ಪ್ರಕರಣಗಳ ಕುರಿತು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿಕೆ ಸಲ್ಲಿಸಿ ವರ್ಷಗಳಾದರೂ ರಾಜ್ಯಪಾಲರು ಆ ಕೋರಿಕೆಗಳನ್ನು ಕಸದ ಬುಟ್ಟಿಗೆ ಎಸೆದು ಪಕ್ಷಪಾತ ಮಾಡಿದ್ದಾರೆ ಎಂದು ಟೀಕಿಸಿದರು.
ಗೋಷ್ಠಿಯಲ್ಲಿ ಕೆ.ಎಚ್.ನಾಗರಾಜು, ಸಿ.ಎಂ.ದ್ಯಾವಪ್ಪಪ, ವಿಜಯಲಕ್ಷ್ಮಿ, ಎಂ.ಎಸ್.ಮಂಜಣ್ಣ, ಡಿ.ರಮೇಶ್, ಬಿ.ಲಿಂಗಯ್ಯ ಇತರರಿದ್ದರು.