ಸಿಎಂಗೆ ಕಪ್ಪು ಬಾವುಟ ಪ್ರದರ್ಶನ, ಮುತ್ತಿಗೆ ಹಾಕಲು ನಿರ್ಧಾರ

| Published : Oct 06 2025, 01:01 AM IST

ಸಿಎಂಗೆ ಕಪ್ಪು ಬಾವುಟ ಪ್ರದರ್ಶನ, ಮುತ್ತಿಗೆ ಹಾಕಲು ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ನಿರಂತರ ನಡೆಯುತ್ತಿರುವ ಮಹಾಲಿಂಗಪುರ ತಾಲೂಕು ಹೋರಾಟಕ್ಕೆ ಸರಿಯಾಗಿ ಸ್ಪಂದಿಸದಿರುವ ರಾಜ್ಯ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಅ.೧೩ರಂದು ಬಂಡಿಗಣಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶನ ಮತ್ತು ಮುತ್ತಿಗೆ ಹಾಕಲು ನಿರ್ಧರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ನಿರಂತರ ನಡೆಯುತ್ತಿರುವ ಮಹಾಲಿಂಗಪುರ ತಾಲೂಕು ಹೋರಾಟಕ್ಕೆ ಸರಿಯಾಗಿ ಸ್ಪಂದಿಸದಿರುವ ರಾಜ್ಯ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಅ.೧೩ರಂದು ಬಂಡಿಗಣಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶನ ಮತ್ತು ಮುತ್ತಿಗೆ ಹಾಕಲು ನಿರ್ಧರಿಸಲಾಯಿತು.

ಸ್ಥಳೀಯ ನೀಲಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ನಡೆದ ತಾಲೂಕು ಹೋರಾಟಗಾರರ ಸಭೆ ಉದ್ದೇಶಿಸಿ ಮಾತನಾಡಿದ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ನಮ್ಮ ಹೋರಾಟ ತಾಲೂಕಾಗುವವರೆಗೆ ನಿಲ್ಲದು. ತಾಲೂಕು ಹೋರಾಟಕ್ಕೆ ಇಲ್ಲಿಯವರೆಗೆ ಸರ್ಕಾರ ಸರಿಯಾದ ಮನ್ನನ್ನೇ ಕೊಟ್ಟಿಲ್ಲ ಮುಧೋಳ ತಾಲೂಕಿನ ಭಾಗವಾದ ನಮ್ಮ ಮಹಾಲಿಂಗಪುರ ನಾವು ಮುಧೋಳ ತಾಲೂಕಿನಲ್ಲೇ ಇದ್ದು, ಈಗಲೂ ಮುಧೋಳ ತಾಲೂಕಿನಲ್ಲೇ ನಾವು ತಾಲೂಕು ಕೇಳುತ್ತಿದ್ದೇವೆ ಹೊರತು, ಜಮಖಂಡಿ ತಾಲೂಕಿಗೆ ನಮಗೆ ಯಾವುದೇ ಸಂಬಂಧವಿಲ್ಲ. ಇದನ್ನು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಅರ್ಥ ಮಾಡಿಕೊಂಡು ನಮ್ಮ ಸುಧಿರ್ಘ ಹೋರಾಟಕ್ಕೆ ಬೆಲೆ ಕೊಟ್ಟು ತಕ್ಷಣ ಮಹಾಲಿಂಗಪುರವನ್ನು ತಾಲೂಕು ಘೋಷಣೆ ಮಾಡಬೇಕು ಎಂದು ಹೇಳಿದರು.

ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಹೋರಾಟ ನಿರಂತರವಾಗಿ ಗೆಲುವು ಸಿಗುವವರೆಗೆ ನಡೆಯಬೇಕು. ಯಾರೇ ಏನೇ ಹೇಳಿದರೂ ನಮ್ಮ ನಡೆ ಗೆಲುವಿನ ಕಡೆ ಇರಬೇಕು. ಹೋರಾಟದಲ್ಲಿ ಏಳು ಬಿಳು ಸರ್ವೇ ಸಾಮಾನ್ಯ. ತಾಳ್ಮೆಯಿಂದ ಹೋರಾಟ ಮಾಡಿದರೆ ಗೆದ್ದೇ ಗೆಲ್ಲುತ್ತೆವೆ. ಗೆಲುವುಗಾಗಿ ಎಂಥ ಕಠಿಣ ನಿರ್ಧಾರ ತೆಗೆದುಕೊಳ್ಳಲು ನಾವು ಸಿದ್ದರಾಗಬೇಕು ಎಂದು ಹೇಳಿದರು.

ರಾಜ್ಯ ಹಸಿರು ಸೇನೆ ಮತ್ತು ರೈತ ಸಂಘದ ಮುಖಂಡರಾದ ಗಂಗಾಧರ ಮೇಟಿ, ಆಮ್ ಆದ್ಮಿ ಪಕ್ಷದ ಮುಖಂಡ ಅರ್ಜುನ ಹಲಗಿಗೌಡರ,ನೇಕಾರ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರ್ಕಿ ಮತ್ತು ಪರಪ್ಪ ಬ್ಯಾಕೋಡ ಮಾತನಾಡಿದರು. ಮುಖಂಡರಾದ ಚನ್ನು ದೇಸಾಯಿ, ಮಹಾದೇವ ಮಾರಾಪುರ, ಹಣಮಂತ ಜಮಾದಾರ, ಸಿದ್ದು ಶಿರೋಳ,ನಿಂಗಪ್ಪ ಬಾಳಿಕಾಯಿ, ರಫೀಕ್ ಮಾಲಾದಾರ. ಮಾರುತಿ ಕರೋಶಿ, ದುಂಡಪ್ಪ ಇಟ್ನಾಳ, ಭೀಮಶಿ ನಾಯಕ, ಲಕ್ಷ್ಮಣ ಕಿಲ್ಲಾರಿ, ಮಹಾಲಿಂಗಪ್ಪ ಅವರಾದಿ, ಬಸಪ್ಪ ಮೇತ್ರಿ, ಭೀಮಪ್ಪ ನಾಯಕ, ಅರುಣ ಬಡಿಗೇರ, ಹಣಮಂತ ದೇಸಾಯಿ, ದುಂಡಪ್ಪ ಚನ್ನಾಳ, ಮಹಾಲಿಂಗ ನಾಯಿಕ, ಹಣಮಂತ ವಗ್ಗರ, ಸದಾಶಿವ ಬರಗಿ, ರಾಜೇಂದ್ರ ಮಿರ್ಜಿ ಸೇರಿದಂತೆ ಹಲವರು ಇದ್ದರು.