ದೀಪಾವಳಿ ಅಮಾವಾಸ್ಯೆ ದಿನ ರಾತ್ರಿ ವೇಳೆ ದಲಿತ ಸಮುದಾಯಕ್ಕೆ ಸೇರಿದ ಐವರ ಮೇಲೆ ಹಾಗೂ ಟ್ರ್ಯಾಕ್ಟರ್‌ ಮತ್ತು ಬೈಕ್‌ಗಳ ಪೋಟೋ ಇಟ್ಟು, ಕಪ್ಪು ಬಟ್ಟೆಯಲ್ಲಿ ಗೊಂಬೆ ಮಾಡಿದ್ದು, ಗಜಗ, ಜಾಜಿಕಾಯಿ, ನಿಂಬೆಹಣ್ಣನ್ನು ಕಂಬಳಿ ಮೇಲೆ ಇಟ್ಟು ವಾಮಾಚಾರ ಮಾಡಿದ್ದಾರೆ.

ಕನಕಗಿರಿ: ಐವರ ದಲಿತ ವ್ಯಕ್ತಿಗಳ ಮೇಲೆ ವಾಮಾಚಾರ ಮಾಡಿರುವ ಘಟನೆ ತಾಲೂಕಿನ ಕಲಿಕೇರಿ ಗ್ರಾಮದ ಸ್ಮಶಾನದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ದೀಪಾವಳಿ ಅಮಾವಾಸ್ಯೆ ದಿನ ರಾತ್ರಿ ವೇಳೆ ದಲಿತ ಸಮುದಾಯಕ್ಕೆ ಸೇರಿದ ಐವರ ಮೇಲೆ ಹಾಗೂ ಟ್ರ್ಯಾಕ್ಟರ್‌ ಮತ್ತು ಬೈಕ್‌ಗಳ ಪೋಟೋ ಇಟ್ಟು, ಕಪ್ಪು ಬಟ್ಟೆಯಲ್ಲಿ ಗೊಂಬೆ ಮಾಡಿದ್ದು, ಗಜಗ, ಜಾಜಿಕಾಯಿ, ನಿಂಬೆಹಣ್ಣನ್ನು ಕಂಬಳಿ ಮೇಲೆ ಇಟ್ಟು ವಾಮಾಚಾರ ಮಾಡಿದ್ದಾರೆ.

ಈ ವಾಮಾಚಾರವನ್ನು ಗ್ರಾಮದವರು ಯಾರೂ ನೋಡಿರಲಿಲ್ಲ. ಎರಡ್ಮೂರು ದಿನಗಳ ನಂತರ ಕುರಿಗಾಹಿಯೊಬ್ಬ ನೋಡಿ ಗ್ರಾಮಸ್ಥರಿಗೆ ತಿಳಿಸಿದ್ದಾನೆ. ವಿಷಯ ತಿಳಿದ ಹಿರಿಯರು ಸ್ಮಶಾನಕ್ಕೆ ತೆರಳಿ ನೋಡಿದಾಗ ಬದುಕಿದ್ದ ಐವರ ಪೋಟೋಗಳಿಗೆ ಕಪ್ಪುಬಣ್ಣದ ಗೊಂಬೆ ಕಟ್ಟಿದ್ದು, ಅರಿಶಿಣ, ಕುಂಕುಮ ಸೇರಿದಂತೆ ನಾನಾ ವನಸ್ಪತಿಗಳನ್ನು ಬಳಸಿ ವಾಮಚಾರ ಮಾಡಿರುವುದು ಕಂಡುಬಂದಿದೆ. ಗ್ರಾಮಸ್ಥರು ಪೊಲೀಸರ ಗಮನಕ್ಕೆ ತಂದಿದ್ದಾರೆ.

ನ. ೧೪ರಂದು ಪೊಲೀಸರು ವಾಮಚಾರ ಮಾಡಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಲಿಕೇರಿ ಗ್ರಾಮದ ನಾಲ್ವರು ಹಾಗೂ ಕುಷ್ಟಗಿ ತಾಲೂಕಿನ ಮೇಣೆದಾಳ ಗ್ರಾಮದ ಓರ್ವ ವ್ಯಕ್ತಿ ಸೇರಿ ಒಟ್ಟು ಐವರ ಮೇಲೆ ವಾಮಚಾರ ನಡೆದಿರುವುದು ದೃಢಪಡಿಸಿಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸುತ್ತೇವೆ ಎಂದು ಪಿಐ ಶಿವರಾಜ ಇಂಗಳೆ ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ. ಬೆಚ್ಚಿ ಬಿದ್ದ ಕಲಿಕೇರಿ ಗ್ರಾಮಸ್ಥರು!

ಬದುಕಿದ್ದವರ ಮೇಲೆ ಸ್ಮಶಾನದಲ್ಲಿ ಭಯಾನಕ ರೀತಿಯಲ್ಲಿ ವಾಮಾಚಾರ ನಡೆದಿರುವ ಫೋಟೋ, ವಿಡಿಯೋಗಳು ವೈರಲ್ ಆಗಿದ್ದು, ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಇತ್ತ ಚಿಕ್ಕಮಕ್ಕಳು ಸಂಜೆ ಕತ್ತಲಾಗುತ್ತಲೇ ಮನೆಯಿಂದ ಹೊರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ವಾಮಚಾರವೆಂಬುದು ಸುಳ್ಳು. ಇನ್ನೊಬ್ಬರ ಏಳ್ಗೆಯನ್ನು ಸಹಿಸದ ಕೆಲ ದುಷ್ಕರ್ಮಿಗಳು ಈ ರೀತಿ ಮಾಡಿರುತ್ತಾರೆ. ಇದಕ್ಕೆ ಯಾರೂ ತಲೆಕೆಡಿಸಿಕೊಳ್ಳಬಾರದು ಎಂದು ಗ್ರಾಮದ ಹಿರಿಯರು ಯುವಕರಿಗೆ ಧೈರ್ಯ ತುಂಬುತ್ತಿದ್ದಾರೆ.