ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್
ಕೆಜಿಎಫ್ ತಾಲೂಕಿನ ಕದಿರಗಾನ ಕುಪ್ಪದ ಬಳಿ ಎಪಿಎಂಸಿ ಮಾರುಕಟ್ಟೆಯ ೨೫ ಎಕರೆ ಜಾಗದಲ್ಲಿ ದೊರೆತ ಕಪ್ಪು ಕಲ್ಲಿನ ಬ್ಲಾಕ್‌ಗಳ ಹರಾಜು ಒಟ್ಟು ೫.೯೦ ಲಕ್ಷಕ್ಕೆ ಮಾರಾಟ ಮಾಡಲಾಗಿದ್ದು, ಹರಾಜು ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಕೋಲಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಎಪಿಎಂಸಿ ಮಾರುಕಟ್ಟೆಯ ಸ್ಥಳದಲ್ಲಿ ದೊರೆತ ೫೮೫.೪೬ ಮೆಟ್ರಿಕ್ ಟನ್‌ಗಳ ಕಪ್ಪು ಕಲ್ಲಿನ ಹರಾಜನ್ನು ಉಪವಿಭಾಗಧಿಕಾರಿ ವೆಂಕಟಲಕ್ಷ್ಮೀ ಸಮ್ಮಖದಲ್ಲಿ ಗುರುವಾರ ಬೆಳಗ್ಗೆ ೧೧ ಗಂಟೆಗೆ ಹರಾಜು ನಡೆಸಿದರು.
ಒಂದು ಮೆಟ್ರಿಕ್ ಟನ್ ಕಪ್ಪು ಕಲ್ಲಿನ ಬೆಲೆ ೧೦೨೦ ರು.ಗಳಂತೆ ದಶರಥರೆಡ್ಡಿ ಎಂಬುವರ ಪಾಲಾಗಿದೆ. ಹರಾಜಿನಲ್ಲಿ ಪಾಲ್ಗೊಂಡಿದ್ದ ನಾಲ್ವರಲ್ಲಿ ಮೂವರು ಶಾಸಕಿ ರೂಪಕಲಾಶಶಿಧರ್ ಅವರ ಅಪ್ತರು ಎನ್ನಲಾಗಿದೆ.
ಕಡಿಮೆ ಬಿಡ್‌ಗೆ ಕಪ್ಪುಕಲ್ಲು ಹರಾಜು?ಒಟ್ಟು ೫೬ ಬ್ಲಾಕ್ ಕಲ್ಲಿನ ತೂಕವು ೫೮೫.೪೬ ಮೆಟ್ರಿಕ್ ಟನ್‌ಗಳಾಗಿದ್ದು, ಒಂದು ಮೆಟ್ರಿಕ್ ಟನ್ ಕಲ್ಲಿನ ಬೆಲೆ ತೆರಿಗೆ ಸೇರಿದಂತೆ ೧೬೨೦ ರೂಪಾಯಿಗಳಿಗೆ ಹರಾಜಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹರಾಜು ಮಾಡಿದ್ದಾರೆ. ತುಂಬಾ ಕಡಿಮೆ ದರಕ್ಕೆ ಹರಾಜು ಮಾಡಲಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ.
ಕೆಜಿಎಫ್ ತಾಲೂಕಿನ ಎಪಿಎಂಸಿ ಮಾರುಕಟ್ಟೆಗೆ ನಿಗದಿ ಮಾಡಿದ್ದ ೨೫ ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂ.ಗಳ ಬೆಲೆ ಬಾಳುವ ಕಪ್ಪು ಕಲ್ಲು ಅಕ್ರಮ ಸಾಗಣಿಕೆ ಕುರಿತು ‘ಕನ್ನಡಪ್ರಭ’ ವಿಸಕೃತ ವರದಿ ಪ್ರಕಟಿಸಿತ್ತು.
ಇದರ ಬೆನ್ನಲೇ ಪ್ರಕರಣ ಕುರಿತು ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ದಯಾನಂದ್ ಲೋಕಾಯುಕ್ತರಿಗೆ ದೂರು ನೀಡಿ ಲಕ್ಷಾಂತರ ರೂ.ಗಳ ಬೆಲೆ ಬಾಳುವ ಕಪ್ಪು ಕಲ್ಲುನ್ನು ಸಂರಕ್ಷಣೆ ಮಾಡಬೇಕೆಂದು ಕೋರಿದ್ದರು.