ಸಾರಾಂಶ
-ಘೋಷಿತ ಅಭ್ಯರ್ಥಿ ಕೆ. ಬಸವರಾಜ ವಿರುದ್ಧ ಆಕ್ರೋಶ, ಬಿಜೆಪಿ ಕಚೇರಿ ಗ್ಲಾಸ್ ಪುಡಿ ಪುಡಿ
-ಸಂಸದ ಸಂಗಣ್ಣ ಕರಡಿ ಭೇಟಿಯಾಗಲು ಮನೆಗೆ ತೆರಳಿದ್ದ ಡಾಕ್ಟರ್-ಮಾತುಕತೆಗೂ ಅವಕಾಶ ನೀಡದೆ ಬೆಂಬಲಿಗರಿಂದ ಅಡ್ಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ತಪ್ಪಿದ್ದಕ್ಕೆ ಸಂಸದ ಸಂಗಣ್ಣ ಕರಡಿ ಮನೆ ಮತ್ತು ಬಿಜೆಪಿ ಕಚೇರಿಯಲ್ಲಿ ಹೈಡ್ರಾಮಾ ನಡೆದಿದ್ದು, ಬಿಜೆಪಿಯ ಕಚೇರಿಯಲ್ಲಿನ ಕಿಟಕಿ ಗ್ಲಾಸ್‌ನ್ನು ಸಂಗಣ್ಣ ಕರಡಿ ಬೆಂಬಲಿಗರು ಪುಡಿಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲಾ, ಭಾರತ ಮಾತೆಯ ಫೋಟೋವನ್ನು ಸಹ ಒಡೆದು ಹಾಕಿದ್ದಾರೆ.ಆಗಿದ್ದೇನು:
ಟಿಕೆಟ್ ಘೋಷಣೆಯಾಗಿರುವ ಡಾ. ಕೆ. ಬಸವರಾಜ ಶಾಸಕ ದೊಡ್ಡನಗೌಡ ಪಾಟೀಲ ಅವರೊಂದಿಗೆ ಸಂಸದ ಸಂಗಣ್ಣ ಕರಡಿ ಅವರನ್ನು ಭೇಟಿಯಾಗಿ, ಆಶೀರ್ವಾದ ಪಡೆಯಲು ಬಂದಿದ್ದರು. ಈ ವೇಳೆಯಲ್ಲಿ ಸಂಸದ ಸಂಗಣ್ಣ ಕರಡಿ ಅವರನ್ನು ಭೇಟಿ ಮಾಡಲು ಬಿಡದ ಕಾರ್ಯಕರ್ತರು ಗೋ ಬ್ಯಾಕ್ ಡಾ. ಬಸವರಾಜ ಎಂದು ಕಿಡಿಕಾರಿದರು.ಹಾಲಿ ಸಂಸದ ಸಂಗಣ್ಣ ಕರಡಿ ಮಾತು ಲೆಕ್ಕಿಸದೇ ಟಿಕೆಟ್ ಘೋಷಿತ ಡಾ. ಬಸವರಾಜ ಹಾಗೂ ದೊಡ್ಡನಗೌಡ ಅವರ ಮೇಲೆ ಮುಗಿಬಿದ್ದು ತರಾಟೆಗೆ ತೆಗೆದುಕೊಂಡರು. ಪಕ್ಷಕ್ಕೆ ದುಡಿಯಲಿಲ್ಲ, ಬಿಡಲಿಲ್ಲ, ದುಡ್ಡು ಕೊಟ್ಟು ಟಿಕೆಟ್ ತಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ವಿಧಿಯಿಲ್ಲದೇ ಸಂಸದ ಸಂಗಣ್ಣ ಕರಡಿ ಅವರೊಂದಿಗೆ ಮಾತುಕತೆ ಮಾಡಲು ಆಗದೆ ಇಬ್ಬರು ಪಕ್ಷದ ಕಚೇರಿಗೆ ತೆರಳಿದರು.
ಬಿಜೆಪಿ ಕಚೇರಿಯಲ್ಲಿ ಡಾ. ಬಸವರಾಜ, ಶಾಸಕ ದೊಡ್ಡನಗೌಡ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆಯಲ್ಲಿ ಅಲ್ಲಿಗೆ ಆಗಮಿಸಿದ ಸಂಸದ ಸಂಗಣ್ಣ ಕರಡಿ ಬೆಂಬಲಿಗರು ಒಳನುಗ್ಗಲು ಯತ್ನಿಸಿ, ಕದವನ್ನೇ ಒದ್ದರು. ತೆಗೆಯದಿದ್ದಾಗ ಕಿಟಕಿಯ ಗ್ಲಾಸ್‌ಗೆ ಕಲ್ಲೆಸೆದರು. ಭಾರತ ಮಾತೆಯ ಫೋಟೊವನ್ನು ಒಡೆದು ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.ಇವರನ್ನು ಸಮಧಾನ ಮಾಡಲು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ಹರಸಾಹಸ ಮಾಡಿದರೂ ಪ್ರಯೋಜನವಾಗಲಿಲ್ಲ. ಬಿಜೆಪಿ ಟಿಕೆಟ್ ಸೇಲ್ ಆಗಿದೆ ಎಂದೆಲ್ಲಾ ಕರಡಿ ಬೆಂಬಲಿಗರು ಕಿಡಿಕಾರಿದರು.
ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ನೀಡುವವರೆಗೂ ನಾವು ಬಿಡುವುದಿಲ್ಲ ಎಂದು ಕೂಗಾಡಿದರು.ಸಂಸದರ ಮನೆಯಲ್ಲಿ ಹೈಡ್ರಾಮಾ:
ಸಂಸದ ಸಂಗಣ್ಣ ಕರಡಿ ಅವರು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಅವರ ಪಕ್ಕದಲ್ಲಿಯೇ ಕುಳಿತಿದ್ದ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕರಿಗೆ ಸಂಸದ ಸಂಗಣ್ಣ ಕರಡಿ ಬೆಂಬಲಿಗರೊಬ್ಬರು ಎದ್ದು ಹೋಗುವಂತೆ ತಾಕೀತು ಮಾಡಿದರು.ಟಿಕೆಟ್ ಘೋಷಣೆಯಾಗಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸ್ವಾಗತ ಕೋರಿ ಇಲ್ಲಿ ಬಂದು ಕುಳಿತಿದ್ದಾರೆ. ನಿವ್ಯಾಕೆ ಇಲ್ಲಿ ಬಂದಿದ್ದೀರಿ, ಎದ್ದು ಹೋಗಿ ಎಂದು ತಾಕೀತು ಮಾಡಿದರು. ಇದರಿಂದ ಕೆಂಡಮಂಡಲವಾದ ವಿಪ ಸದಸ್ಯೆ ಹೇಮಲತಾ ನಾಯಕ, ಸರಿಯಾಗಿ ಮಾತನಾಡನಾಡು, ನಿನಗಿಂತಲೂ ಹೆಚ್ಚು ನನಗೆ ನೋವಾಗಿದೆ. ನೀನು ತೋರಿಸಿಕೊಳ್ಳುತ್ತಿಯಾ ನಾನು ತೋರಿಸಿಕೊಳ್ಳುತ್ತಿಲ್ಲ. ನೀನು ನಿನ್ನೆ ಮೊನ್ನೆ ಬಂದಿದ್ದಿಯಾ, ಜಾಸ್ತಿ ಮಾತನಾಡಿದರೇ ಬೂಟುಗಾಲಿನಿಂದ ಹೊಡೆಯುತ್ತೇನೆ ಎಂದು ಕಿಡಿಕಾರಿದರು. ಪಕ್ಕದಲ್ಲಿಯೇ ಇದ್ದ ಸಂಸದ ಸಂಗಣ್ಣ ಕರಡಿ ಅವರು ಕಾರ್ಯಕರ್ತರನ್ನು ಅತ್ತ ಕಳುಹಿಸಿ ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಅವರನ್ನು ಸಮಾಧಾನ ಮಾಡಿದರು.