ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ದೇಶಕ್ಕೆ ನರೇಂದ್ರ ಮೋದಿ ಅವರನ್ನು ಮೂರನೆ ಬಾರಿಗೆ ಪ್ರಧಾನಿಯನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ, ಬೀದರ್‌ನಿಂದ ನನಗೆ ಮತ್ತೊಮ್ಮೆ ಗೆಲ್ಲಿಸಿಕೊಂಡು ಬಂದು, ಈ ಲೋಕಸಭಾ ಕ್ಷೇತ್ರದ ಜನತೆಯ ಸೇವೆ ಮಾಡಲು ಅವಕಾಶ ನೀಡಬೇಕೆಂದು ಬಿಜೆಪಿ ಟಿಕೆಟ್ ಘೋಷಿತ ಹಾಗೂ ಹಾಲಿ ಸಂಸದ ಭಗವಂತ ಖೂಬಾ ಮನವಿ ಮಾಡಿಕೊಂಡರು.ಬೀದರ್ ಲೋಕಸಭಾ ಕ್ಷೇತ್ರದಿಂದ 3ನೇ ಬಾರಿಗೆ ಬಿಜೆಪಿ ಟಿಕೆಟ್ ಪಡೆದುಕೊಂಡು ಭಗವಂತ ಖೂಬಾ ಬೀದರ್‌ಗೆ ಆಗಮಿಸಿದ ಬೆನ್ನಲೆ ಪಕ್ಷದ ಕಾರ್ಯಕರ್ತರಿಂದ ಅಭೂತಪೂರ್ವ ಸ್ವಾಗತ ಕೋರಲಾಯಿತು. ನಂತರ ಪಕ್ಷದ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪಕ್ಷದ ಜಿಲ್ಲಾಧ್ಯಕ್ಷರಾದ ಸೊಮನಾಥ ಪಾಟೀಲ್ ಮಾತನಾಡಿ, ಸಂಸದರ ಅಭಿವೃದ್ಧಿ ಕಾರ್ಯಗಳ ಕುರಿತು ವಿಸ್ತಾರವಾಗಿ ತಿಳಿಸಿ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದರು.ಹೈದ್ರಾಬಾದ್ ಮೂಲಕ ಬೀದರ್‌ಗೆ ಬರುವಾಗ ಜಿಲ್ಲೆಯ ಪಕ್ಷದ ಕಾರ್ಯಕರ್ತರು, ವಿವಿಧ ಸಮಾಜದ ಮುಖಂಡರು ಹೈದ್ರಾಬಾದ್ ವಿಮಾನ ನಿಲ್ದಾಣ, ಜಹೀರಾಬಾದ ಬ್ರಿಡ್ಜ್ ಹಾಗೂ ಬೀದರ್ -ತೆಲಂಗಾಣದ ಗಡಿಯಲ್ಲಿ ಸಂತೋಷದಿಂದ ಸ್ವಾಗತಿಸಿಕೊಂಡರು ಹಾಗೂ ಅಬ್ ಕಿ ಬಾರ್ ಚಾರ್ ಸೌ ಪಾರ್, ಬೀದರ್ ಮೇ ಅಬ್ ಕಿ ಬಾರ್ ದೋ ಲಾಖ್ ಪಾರ್ ಎಂದು ಘೋಷಣೆಗಳು ಹಾಕಿದರು.
ದೇವರ ಹಾಗೂ ತಾಯಿ ಸಮಾಧಿಯ ದರ್ಶನ ಪಡೆದ ಖೂಬಾ: ಭಗವಂತ ಖೂಬಾ ಅವರು ಗಡಿಯಲ್ಲಿರುವ ರೆಜಂತಲ್ ಸಿದ್ಧಿ ವಿನಾಯಕನ ದರ್ಶನ, ನಗರದ ಕೋಟಿ ಪಾಪನಾಶ ಲಿಂಗ ದೇವರ ದರ್ಶನ, ಔರಾದ್ ಪಟ್ಟಣದ ಅಮರೇಶ್ವರ ದರ್ಶನ ಮತ್ತು ಸಂಸದರ ತಾಯಿ ಸ್ವ. ಮಹಾದೇವಿ ಗುರುಬಸಪ್ಪ ಖೂಬಾ ಅವರ ಸಮಾಧಿಯ ದರ್ಶನ ಪಡೆದುಕೊಂಡರು.ಕಾರ್ಯಕರ್ತರಿಂದ ಹರಕೆ ಈಡೇರಿಕೆ: ನಗರದ ಕಾರ್ಯಕರ್ತ ಕಮಲಾಕರ ಹೇಗಡೆ ಮತ್ತು ಭಾಲ್ಕಿಯ ಸಂಜೀವ ಶಿಂಧೆ ಎನ್ನುವ ಕಾರ್ಯಕರ್ತರು ಮೂರನೆ ಬಾರಿಗೆ ಭಗವಂತ ಖೂಬಾಗೆ ಟಿಕೆಟ್ ಸಿಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡು 100 ತೆಂಗಿನಕಾಯಿಗಳು ಒಡೆಯುವುದಾಗಿ ಬೇಡಿಕೊಂಡಿದ್ದರು. ಅದರಂತೆ ಕಮಲಾಕರ್ ಹೇಗಡೆ ಕೋಟಿ ಪಾಪನಾಶ ಲಿಂಗ ದೇವಸ್ಥಾನದಲ್ಲಿ ಹಾಗೂ ಸಂಜೀವ ಶಿಂಧೆ ಭಾಲ್ಕಿಯ ಭಾಲ್ಕೇಶ್ವರ ದೇವಸ್ಥಾನದಲ್ಲಿ 101 ತೆಂಗಿನಕಾಯಿ ಒಡೆದು ದೇವರ ಹರಕೆ ತಿರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಕುಂಬಾರ, ಪಿರಪ್ಪ ಯರನಳ್ಳಿ, ಕಿರಣ ಪಾಟೀಲ್ ಹಕ್ಯಾಳ, ಶಶಿಧರ ಹೊಸಳ್ಳಿ, ರಾಕೇಶ ಪಾಟೀಲ್, ರಾಜಶೇಖರ ನಾಗಮೂರ್ತಿ, ವಿಜು ಪಾಟೀಲ್ ಗಾದಗಿ ಮುಂತಾದವರು ಉಪಸ್ಥಿತರಿದ್ದರು.