ಸಾರಾಂಶ
ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಅಧಿಕೃತ ಭಾಷೆಯ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಎಲ್ಲ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡದ ಭಾಷೆ ಬಳಕೆ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.
ಕನ್ನಡಪ್ರಭ ವಾರ್ತೆ ಮಣಿಪಾಲಸರ್ಕಾರದ ಆದೇಶದನ್ವಯ ಸ್ಥಳೀಯ ಪ್ರಾಧಿಕಾರ, ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡದ ಭಾಷೆ ಬಳಕೆ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.ಅವರು ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನ್ನಡ ಅಧಿಕೃತ ಭಾಷೆಯ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಮತ್ತು ತಿದ್ದುಪಡಿ ವಿಧೇಯಕ ಅನುಸಾರ ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ಉದ್ಯಮ, ಟ್ರಸ್ಟ್, ಸಮಾಲೋಚನಾ ಕೇಂದ್ರ, ಆಸ್ಪತ್ರೆ, ಪ್ರಯೋಗಾಲಯ, ಮಳಿಗೆ, ಬ್ಯಾಂಕ್, ಕೈಗಾರಿಕೆ, ಶಿಕ್ಷಣ ಸಂಸ್ಥೆ, ಹೋಟೆಲ್ ಹಾಗೂ ಎಲ್ಲ ಖಾಸಗಿ ಸಂಸ್ಥೆ, ಮನರಂಜನಾ ಕೇಂದ್ರ, ಹೋಟೆಲ್ ಒಳಗೊಂಡಂತೆ ಇತರೆ ಸಂಸ್ಥೆಗಳು ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ.60ರಷ್ಟು ಪ್ರಮಾಣದಲ್ಲಿ ಪ್ರದರ್ಶಿಸಬೇಕು. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.ರಸ್ತೆಗಳು ಮತ್ತು ಬಡಾವಣೆ, ಪ್ರದೇಶಗಳ ನಾಮಫಲಕಗಳ ಮೇಲೆ ನಿಯಮಾನ್ವಯ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂದರು.ನಿಯಮಾನುಸಾರ ನಾಮಫಲಕ ಅಳವಡಿಸದೇ ಇರುವವರಿಗೆ 7 ದಿನ ಕಾಲಾವಕಾಶ ನೀಡಿ, ಸೂಕ್ತ ತಿಳುವಳಿಕೆ ನೀಡಿ, ಕಾಲಮಿತಿಯೊಳಗೆ ಕನ್ನಡ ನಾಮಫಲಕ ಅಳವಡಿಕೆಗೆ ಸೂಚನೆ ನೀಡಲಾಗುತ್ತದೆ. ಮತ್ತೂ ನಿಯಮವನ್ನು ಉಲ್ಲಂಘಿಸಿದರೆ ಮೊದಲನೆ ಬಾರಿ 5000 ರು. ದಂಡ, ಎರಡನೇ ಬಾರಿ 10,000 ಹಾಗೂ ನಂತರದ 20,000 ರು. ದಂಡದೊಂದಿಗೆ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ ಎಂದರು.
ಸಭೆಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್, ಕನ್ನಡ ಪೌರಯುಕ್ತ ರಾಯಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.