ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೂಡಾ ವತಿಯಿಂದ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳನ್ನು ಅಭಿವೃದ್ಧಿಸುವ ಹಾಗೂ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು.ನಗರದ ಎಲ್‍ಬಿಎಸ್ ನಗರದ ಬೂಸ್ಟರ್ ಪಂಪ್‍ಹೌಸ್ ಹತ್ತಿರದ ಉದ್ಯಾನವನದಲ್ಲಿ ಸೂಡಾ ಬಡಾವಣೆ ಮತ್ತು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಗರದ ವಿವಿಧ ಬಡಾವಣೆಗಳ ಜಂಕ್ಷನ್ ಅಭಿವೃದ್ಧಿ, ರಸ್ತೆಗಳ ನಾಮಫಲಕ, ಉದ್ಯಾನವನ ಅಭಿವೃದ್ಧಿ, ಸೇವಾ ರಸ್ತೆಗಳ ಅಭಿವೃದ್ಧಿ, ಕಾಂಕ್ರೀಟ್ ಬಾಕ್ಸ್ ಚರಂಡಿ ನಿರ್ಮಾಣ ಸೇರಿದಂತೆ ₹1702 ಲಕ್ಷ ಮೊತ್ತದ 34 ಕಾಮಗಾರಿಗಳಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿದ್ದೇನೆ ಎಂದು ತಿಳಿಸಿದರು.ನಗರಾಭಿವೃದ್ಧಿ ಕುರಿತು ಸಾಕಷ್ಟು ಆಸಕ್ತಿ ಇದ್ದರೂ ಕೆಲವೊಮ್ಮೆ ಕಾನೂನು ತೊಡಕು, ಅನುದಾನದ ಸಮಸ್ಯೆಯಿಂದ ಹಿನ್ನಡೆಯಾಗುತ್ತದೆ. ಆದರೆ ಇದೀಗ ನಗರದ ವಿವಿಧೆಡೆ ಒಟ್ಟು ₹1702 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಉತ್ತಮವಾಗಿ, ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲು ಸೂಚಿಸಿದ್ದೇನೆ.
ಕಳೆದ 14 ವರ್ಷಗಳಿಂದ ಸೂಡಾ ನಿವೇಶನ ಹಂಚಿಕೆಯಾಗಿಲ್ಲ. ನಗರದ 10 ಕಿಮೀ ವ್ಯಾಪ್ತಿಯಲ್ಲಿ ನಿವೇಶನ ಲಭ್ಯವಿಲ್ಲ. ಅದರಾಚೆ ರೈತರೊಂದಿಗೆ ಮಾತನಾಡಿ, ನಿವೇಶನ ಸಿದ್ಧಪಡಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.ಈಗಾಗಲೇ ಅಪಾರ್ಟ್‍ಮೆಂಟ್ ಯೋಜನೆ ಆರಂಭಿಸಲಾಗಿದೆ. ಊರುಗಡೂರು ಮತ್ತು ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಯೋಜನೆ ಆರಂಭಿಸಲಾಗುತ್ತಿದೆ. ಊರುಗಡೂರಿನಲ್ಲಿ ಸುಮಾರು 500ಕ್ಕೂ ಹೆಚ್ಚು ನಿವೇಶನವನ್ನು ಹಂಚಿಕೆ ಮಾಡಲು ಜೂನ್ ಮಾಹೆಯಲ್ಲಿ ಅರ್ಜಿ ಕರೆಯಲಾಗುವುದು. ಬಡಾವಣೆ ನಿವಾಸಿಗಳ ಆದಷ್ಟು ಬೇಡಿಕೆಗಳನ್ನು ಪೂರೈಸಲು ಪ್ರಯತ್ನಿಸುತ್ತೇನೆ. ಸೂಡಾ ಯೋಜನೆಗಳು ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಬೇಕು ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಸೂಡಾ ಅಧ್ಯಕ್ಷರು ತಮ್ಮ ಮೊದಲ ಸಭೆಯಲ್ಲೇ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಕ್ರಮ ಕೈಗೊಂಡಿದ್ದಾರೆ. ನಾಳೆಯಿಂದಲೇ 34 ಕಾಮಗಾರಿಗಳ ಕೆಲಸ ಆರಂಭವಾಗಬೇಕು. ಗುಣಮಟ್ಟದೊಂದಿಗೆ ಕೆಲಸ ನಿರ್ವಹಣೆ ಮಾಡಬೇಕು. ನೀತಿ ಸಂಹಿತೆ ಜಾರಿಯಾಗುವುದರೊಳಗೆ ಕೆಲಸ ಆರಂಭವಾಗಬೇಕು. ನಗರಾಭಿವೃದ್ಧಿ ವಿಷಯದಲ್ಲಿ ಎಂದಿಗೂ ರಾಜಕಾರಣ ಅಡ್ಡಿ ಬಾರದ ಹಾಗೆ, ಶಿವಮೊಗ್ಗದಲ್ಲಿ ಕೆಲಸಗಳು ನಡೆಯುತ್ತಾ ಬಂದಿದೆ ಎಂದರು.ಕಾರ್ಯಕ್ರಮದಲ್ಲಿ ಸೂಡಾ ಮಾಜಿ ಅಧ್ಯಕ್ಷ ನಾಗರಾಜ್, ಪಾಲಿಕೆ ಮಾಜಿ ಸದಸ್ಯ ವಿಶ್ವಾಸ್, ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಸೂಡಾ ಎಇಇ ಬಸವರಾಜಪ್ಪ, ಎಲ್‍ಬಿಎಸ್ ನಗರ ನಿವಾಸಿಗಳ ಸಂಘದ ಪಂಚಪ್ಪ, ನಿವಾಸಿಗಳು, ಅಧಿಕಾರಿಗಳು ಹಾಜರಿದ್ದರು.
- - - -14ಎಸ್‌ಎಂಜಿಕೆಪಿ03:ಶಿವಮೊಗ್ಗ ಎಲ್‍ಬಿಎಸ್ ನಗರದ ಬೂಸ್ಟರ್ ಪಂಪ್‍ಹೌಸ್ ಹತ್ತಿರದ ಉದ್ಯಾನ ವನದಲ್ಲಿ ಸೂಡಾ ಬಡಾವಣೆ ಮತ್ತು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ 2023- 24ನೇ ಸಾಲಿನಲ್ಲಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುರುವಾರ ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಗುದ್ದಲಿ ಪೂಜೆ ನೆರವೇರಿಸಿದರು.