ಹೊಸಪೇಟೆ: ನಗರದಿಂದ ಬಳ್ಳಾರಿಗೆ ಹಾದು ಹೋಗುವ ಮಾರ್ಗದಲ್ಲಿ ಧರ್ಮಸಾಗರ ಬರುತ್ತದೆ. ಈ ಗ್ರಾಮವು ಐತಿಹಾಸಿಕ ತಾಣವಷ್ಟೇ ಅಲ್ಲ. ಆದಿಮಾನವನು ವಾಸವಾದ ಕುರುಹುಗಳು ಕಾಣಸಿಗುತ್ತವೆ. ಪಾಪಿನಾಯಕನಹಳ್ಳಿ ಗ್ರಾಮದ ಬಳಿಯಲ್ಲೇ ಧರ್ಮಸಾಗರ ಗ್ರಾಮವಿದೆ. ಪಾಪಿನಾಯಕನ ಹಳ್ಳಿಯನ್ನು ವಿಜಯನಗರ ಕಾಲಾವಧಿಯಲ್ಲಿ ’ಪಾಪನಾಯಕ’ ಎಂಬ ಪಾಳೆಯಗಾರ ಆಳ್ವಿಕೆ ಮಾಡುತ್ತಿದ್ದನೆಂದು ಆ ಗ್ರಾಮದ ಚಾವಡಿಯ ಬಳಿ ಮತ್ತು ಗ್ರಾಮದ ಹೊರವಲಯದ ಅಂಕಾಲಮ್ಮ ದೇಗುಲದಲ್ಲಿಯ ಕಂಬಕ್ಕೆ ಬರೆಸಿದ ಶಿಲಾಶಾಸನದಿಂದ ತಿಳಿದುಬರುತ್ತದೆ.
ಆ ಗ್ರಾಮದ ಸಮೀಪ ಬೈಲುವದ್ದಿಗೆರೆ ಗ್ರಾಮದ ಅಂಜನೇಯ ದೇಗುಲದ ಬಳಿ ಇದ್ದ ಗ್ರಾನೈಟ್ ಕಲ್ಲಿನಲ್ಲಿ ಬರೆಸಿದ ಶಿಲಾಶಾಸನವು ವಿಜಯನಗರ ಸಾಮ್ರಾಜ್ಯದ ಇಮ್ಮಡಿದೇವರಾಯನ ಕಾಲದ್ದಾಗಿದೆ. ಇದರಲ್ಲಿ ಇಮ್ಮಡಿದೇವರಾಯನ ಪತ್ನಿ ಅಟಣಲಾದೇವಿಯ ನೆನಪಿಗಾಗಿ ’ಅಂಣಲಾಪುರ’ಎಂಬ ಊರನ್ನು ಹಿತ್ತಿಲ ಬಾಗಿಲ ಮಲ್ಲದೇವರು ಕಟ್ಟಿಸಿದನೆಂದು ಆತನ ಹೆಸರಲ್ಲಿ ದಾನ ನೀಡಿದ ವಿವರವಿದೆ. ಆ ಅಪ್ರಕಟಿತ ಶಾಸನವನ್ನು ವಿಜಯನಗರ ತಿರುಗಾಟ ಸಂಶೋಧನ ತಂಡವು ಈ ಹಿಂದೆ ಪತ್ತೆ ಮಾಡಲಾಗಿತ್ತು. ಧರ್ಮಸಾಗರ ಗ್ರಾಮದ ಶಂಕರ ಅವರ ನೆರವಿನಿಂದ ವಿಜಯನಗರ ತಿರುಗಾಟ ಸಂಶೋಧನ ತಂಡದ ಸದಸ್ಯರಾದ ಪ್ರೊ. ತಿಪ್ಪೇಸ್ವಾಮಿ ಎಚ್, ಡಾ. ಗೋವಿಂದ, ಡಾ. ಕೃಷ್ಣೇಗೌಡ, ಸಂಶೋಧಕರಾದ ಎಚ್. ರವಿ, ಅಶೋಕ್ ನಾಯಕ್ ದಿದ್ದಿಗಿ, ಇಸ್ಮಾಯಿಲ್ ಸಿದ್ದಿಕ್ ಅವರು ಕ್ಷೇತ್ರಕಾರ್ಯದ ವೇಳೆ ಪತ್ತೆಮಾಡಿದ್ದಾರೆ.ಐತಿಹಾಕ ಹಿನ್ನೆಲೆಯ ಧರ್ಮಸಾಗರ: ಈ ಗ್ರಾಮದ ಹೊರವಲಯದಲ್ಲಿ ಕೆರೆಯೊಂದು ಕಟ್ಟಲಾಗಿದೆ. ಈ ಕೆರೆಗೆ ಹಾಸಿದ ಹಾಸು ಬಂಡೆಕಲ್ಲಿಗೆ ಬರೆಸಿದ ಪ್ರಕಟಿತ ಶಾಸನವೊಂದು ಕೃಷ್ಣದೇವರಾಯನಿಗೆ ಸಂಬಂಧಿಸಿದ್ದೆಂದು ತಿಳಿದುಬರುತ್ತದೆ. ಈ ಶಾಸನವು ಕನ್ನಡ ಲಿಪಿಯ ತೆಲುಗು ಮಿಶ್ರಿತ ಭಾಷೆಯಲ್ಲಿ ಬರೆಸಿದ ದಾನಶಾನವಾಗಿದೆ. ಅಲ್ಲದೇ ರಾಜನು ಎರಡು ಭಾಷೆಗೆ ಸಮಾನ ಗೌರವ ನೀಡುತ್ತಿದ್ದ ಎನ್ನಲಿಕ್ಕೆ ಪುರಾವೆ ಒದಗಿಸುತ್ತದೆ ಎಂದು ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಗುಡ್ಡದ ಮೆಟ್ಟಿಲುಗಳ ಚಿತ್ರಣ: ಈ ಗ್ರಾಮದಲ್ಲಿ ಆಧಿಮಾನವನು ನೆಲೆಸಿದ್ದ ಎನ್ನಲಿಕ್ಕೆ ಅನೇಕ ಕುರುಹುಗಳು ಸಾಕ್ಷಿಯಾಗಿ ದೊರಕಿವೆ. ಈ ಮೆಟ್ಟಿಲು ಕಲ್ಲುಗಳ ರಚನೆಯು ಡೊಲರೈಟ್ ಡೈಕ್ (ಕಪ್ಪು ಶಿಲೆ) ಮಾದರಿಯಲ್ಲಿ ಕಾಣಸಿಗುತ್ತದೆ ಎಂಬುದು ತಜ್ಞರ ಅಭಿಪ್ರಾವಾಗಿದೆ. ಈ ಕಲ್ಲುಗುಡ್ಡದ ಮೇಲೆ ರಾಮ, ಲಕ್ಷ್ಮಣ, ಸೀತೆ ನಡೆದುಕೊಂಡು ಹೋಗಿದ್ದರಿಂದ ಆ ಕಲ್ಲುಗಳು ಕಪ್ಪಾಗಿವೆ. ಅಲ್ಲದೇ ಗುಡ್ಡದ ಮೆಟ್ಟಿಲಿನ ಕಲ್ಲು ಕಪ್ಪಾಗಿದೆ. ಈ ರೀತಿ ಕಪ್ಪು ಗುಂಡುಕಲ್ಲುಗಳ ಸಮೂಹಕ್ಕೆ ’ಕರೆಕಲ್ಲು ಮಾಗಣಿ’ ಎಂತಲೂ ಕರೆಯತೊಡಗಿದ್ದಾರೆ.ಆ ಗುಡ್ಡಕ್ಕೆ ರಾಮ, ಲಕ್ಷ್ಮಣ, ಸೀತೆ ಸಾಗಿಹೋಗಿರುವರೆಂದು, ಅವರು ಕಲ್ಲುಗುಂಡು ಮೇಲೆ ನಡೆದಾಡಿದ್ದಕ್ಕೆ ಕಪ್ಪು ಕಲ್ಲಾಗಿವೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಹಾಗೇನೆ ಆತ ಬಳಸುತ್ತಿದ್ದ ಎನ್ನಲಾದ ನುಣುಪಾದ ಕೆತ್ತನೆಯ ಕಲ್ಲುಗೊಡಲಿಗಳು ಕ್ಷೇತ್ರ ಕಾರ್ಯದ ವೇಳೆ ದೊರಕಿವೆ. ಇದರಿಂದ ಈ ಭಾಗದಲ್ಲೂ ಸಹ ಆದಿಮಾನವ ವಾಸವಾಗಿರಬೇಕು. ಸ್ಥಳೀಯರು ತಿಳಿಸಿದಂತೆ ಗುಡ್ಡದ ಇಳಿಜಾರಿನಲ್ಲಿ ಹಳೆ ಊರು ಇತ್ತಂತೆ. ಈಗ ತಾವು ವಾಸವಾಗಿರುವ ಊರು ಹೊಸ ಉರೆಂದು ತಿಳಿಸಿದ್ದಾರೆ. ಹಳೆ ಊರು ಇತ್ತು ಎನ್ನಲಿಕ್ಕೆ ಅಳಿದುಳಿದ ವಾಸದ ಮನೆಗಳ ತಳಪಾಯದ ರಚನೆ ಕಾಣಸಿಗುತ್ತದೆ. ಅಲ್ಲದೇ ಅನತಿ ದೂರದಲ್ಲೇ ಇರುವ ಕೆರೆ ಹಾಗೂ ಕೆರೆಯ ತೂಬು ಕಾಣಸಿಗುತ್ತದೆ. ವಿಶೇಷ ಎಂದರೆ ಈ ಕೆರೆಯಲ್ಲಿ ನೀರು ಸಂಗ್ರಹವಿಲ್ಲ ಎಂದು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಪ್ರಾಧ್ಯಾಪಕ ಡಾ. ಗೋವಿಂದ ತಿಳಿಸಿದ್ದಾರೆ.
101 ಲಿಂಗಗಳ ಗುಡಿ: ಗ್ರಾಮದ ಹೊರವಲಯದಲ್ಲಿರುವ ಈ ಗುಡಿಯು ಪೂರ್ವಭಿಮುಖವಾಗಿ ನಿರ್ಮಿಸಲಾಗಿದೆ. ಈ ಚಿಕ್ಕದಾದ ಗುಡಿಯ ಗರ್ಭಗುಡಿಯ ಗೋಡೆಗೆ ಲಿಂಗದ ತರ ಇರುವ ಗುಂಡು ಕಲ್ಲುಗಳಿವೆ. ಇದರ ಎಡ ಮತ್ತು ಬಲ ಬದಿಗೆ ಇರುವ ಸಣ್ಣ ಮತ್ತು ದೊಡ್ಡದಾದ 101 ಗುಂಡುಕಲ್ಲುಗಳನ್ನು ಶಿವಲಿಂಗಗಳೆಂದು ಭಾವಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಶಿವರಾತ್ರಿಯ ಜಾಗರಣೆಯ ದಿನದಂದು ಆ ಗುಡಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಇಂತಹ ಸ್ಮಾರಕಗಳನ್ನು ಸಂಬಂಧಪಟ್ಟ ಇಲಾಖೆಯು ರಕ್ಷಿಸಿ, ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಡಾ. ಕೃಷ್ಣೇಗೌಡ ಅವರು ತಿಳಿಸಿದ್ದಾರೆ.