ಸಾರಾಂಶ
ಕಳಪೆ ಕಾಮಗಾರಿ ಗುತ್ತಿಗೆದಾರನನ್ನು ಬ್ಲಾಕ್ ಲಿಸ್ಟಿನಲ್ಲಿಡುವಂತೆ ಆಗ್ರಹಿಸಿ ಸಾರ್ವಜನಿಕರು ತಾಲೂಕಿನ ಇಟಗಿ ಗ್ರಾಮದ ಬಳಿ ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿ ತಡೆ ಮಾಡಿ ಪ್ರತಿಭಟನೆ ನಡೆಸಿದರು.
ರಾಣಿಬೆನ್ನೂರು: ಕಳಪೆ ಕಾಮಗಾರಿ ಗುತ್ತಿಗೆದಾರನನ್ನು ಬ್ಲಾಕ್ ಲಿಸ್ಟಿನಲ್ಲಿಡುವಂತೆ ಆಗ್ರಹಿಸಿ ಸಾರ್ವಜನಿಕರು ತಾಲೂಕಿನ ಇಟಗಿ ಗ್ರಾಮದ ಬಳಿ ಹರಿಹರ-ಸಮ್ಮಸಗಿ ರಾಜ್ಯ ಹೆದ್ದಾರಿ ತಡೆ ಮಾಡಿ ಪ್ರತಿಭಟನೆ ನಡೆಸಿದರು.
ಗುತ್ತಿಗೆದಾರನು ಜಿಲ್ಲೆಯಲ್ಲಿ ರಸ್ತೆ ಮತ್ತು ಇತರ ಕಾಮಗಾರಿಗಳ ಗುತ್ತಿಗೆ ಪಡೆದು, ಟೆಂಡರ್ ನಿಯಮಗಳನ್ನೆಲ್ಲ ಗಾಳಿಗೆ ತೂರಿ, ಕಾಮಗಾರಿ ಮುಗಿಯದಿದ್ದರೂ ಬಿಲ್‌ಗೆ ಸಹಿ ಮಾಡುವಂತೆ ಹಿರಿಯ ಮತ್ತು ತಾಂತ್ರಿಕ ವರ್ಗದ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಒಪ್ಪದ ಅಧಿಕಾರಿಗಳನ್ನು ಲೋಕಾಯುಕ್ತ ಮತ್ತು ಇಡಿ ಹೆಸರಿನಲ್ಲಿ ಬೆದರಿಸಿ ಸಹಿ ಮಾಡಿಸಿಕೊಳ್ಳುತ್ತಿದ್ದಾರೆ. ಕಳಪೆ ಕಾಮಗಾರಿ ಮಾಡಿ ಸರ್ಕಾರ, ಇಲಾಖೆ ಮತ್ತು ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಿ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಹೊಡೆಯುವುದನ್ನೇ ರೂಢಿ ಮಾಡಿಕೊಂಡಿರುವ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ, ತನಿಖೆಗೊಳಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮರಿಸ್ವಾಮಿ, ಹಲಗೇರಿ ಪಿಎಸ್‌ಐ ಪರಶುರಾಮ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿ, ಗುತ್ತಿಗೆದಾರನ ಜತೆ ಸಭೆ ನಡೆಸುವ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ರೈತ ಸಂಘಟನೆಯ ರವೀಂದ್ರಗೌಡ ಪಾಟೀಲ, ಈರಣ್ಣ ಮಾಕನೂರ, ಚಂದ್ರಣ್ಣ ಬೇಡರ, ಮಾರುತಿ ಗುಡಿಯವರ, ಮಂಜಪ್ಪ ಶಿವಲಿಂಗಪ್ಪನವರ, ಬಸವರಾಜ ತಳವಾರ, ಗ್ರಾಪಂ ಉಪಾಧ್ಯಕ್ಷ ಹನುಮಂತಪ್ಪ ಉಕ್ಕುಂದ, ವೆಂಕರಡ್ಡಿ ಎರೇಶಿಮಿ, ಆನಂದ ದೇಶಗತ್ತಿ, ಹಾಲೇಶ ಕೆಂಚನಾಯ್ಕರ, ಮೌನೇಶ ಎಂ. ಗುತ್ತಲ, ಸುರೇಶ ಮಲ್ಲಾಪುರ, ರುದ್ರಗೌಡ ಸಣ್ಣಗೌಡ್ರ, ಶಿವಣ್ಣ ಮಾಕನೂರ, ಭೀಮಣ್ಣ ಮಾಕನೂರು, ಹನುಮಂತಪ್ಪ ಬಾನುವಳ್ಳಿ, ಹರಿಹರಗೌಡ ಪಾಟೀಲ, ಪವನ ಬೆನಕನಗೊಂಡ, ಚನ್ನಬಸಪ್ಪ ಶಿವಲಿಂಗಪ್ಪನವರ, ಚಂದ್ರಪ್ಪ ದೇಶಗತ್ತಿ, ಹಾಲೇಶ ಗುತ್ತಲ, ಪ್ರಕಾಶ ದೊಂಬರಮತ್ತೂರ ಹಾಗೂ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.