ಸಾರಾಂಶ
ಸುದ್ದಿಗೋಷ್ಠಿ । ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಿ.ಎ.ಮಹೇಂದ್ರ । ಮಹೇಶ್‌ರಿಗೆ ಜೆಡಿಎಸ್‌ನೊಂದಿಗೆ ನಂಟಿರಲಿಲ್ಲವೇ?ಕನ್ನಡಪ್ರಭ ವಾರ್ತೆ ಹಾಸನ
ಮಹೇಶ್ ಅವರದ್ದು ಬ್ಲ್ಯಾಕ್‌ಮೇಲ್ ಸಂಸ್ಕೃತಿಯೇ ಹೊರತು ಶಿವರಾಂ ಅವರದ್ದಲ್ಲ, ಜಿಲ್ಲಾ ಉಸ್ತುವಾರಿ ಸಚಿವರನ್ನು ಓಲೈಸುವ ಸಲುವಾಗಿ ಅವರ ಪರ ಮಾತನಾಡುತ್ತಿದ್ದಾರೆ ಎಂದು ಹಾಸನ ಗ್ರಾಮಾಂತರ ಬ್ಲಾಕ್ ಮಾಜಿ ಅಧ್ಯಕ್ಷ ಬಸವರಾಜು ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಿ.ಎ. ಮಹೇಂದ್ರ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಬಿ. ಶಿವರಾಂ ೪ ಬಾರಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಹಿರಿಯ ಮುಖಂಡರು. ಇವರ ಬಗ್ಗೆ ಎಚ್.ಕೆ. ಮಹೇಶ್ ಹಾಗೂ ವಿನಯ ಗಾಂಧಿ ಅಪಪ್ರಚಾರ ಮಾಡುತ್ತ ಪೊಳ್ಳು ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ. ಎಚ್.ಕೆ. ಮಹೇಶ್ ಶಿವರಾಂ ರವರನ್ನು ಬಿಜೆಪಿ ಜೊತೆ ನಂಟನ್ನು ಗಟ್ಟಿಗೊಳಿಸುತ್ತಿದ್ದಾರೆ ಎಂಬ ಅನುಮಾನ ಇದೆಯೆಂದು ಸುಳ್ಳು ಹೇಳುತ್ತಿದ್ದಾರೆ. ಶಿವರಾಂ ರವರು ಕಳೆದ ೪೦ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ೧೯೮೫ ರಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಈಗಿನವರೆಗೂ ಪಕ್ಷದಲ್ಲಿ ಸಕ್ರಿಯವಾಗಿದ್ದು, ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಅರ್ಜಿ ಹಾಕಿದ್ದಾರಾ? ಶಿವರಾಂ ಈ ಹೇಳಿಕೆ ಹೇಳುವುದರ ಉದ್ದೇಶವಾದರೂ ಏನು ಎಂದು ಪ್ರಶ್ನಿಸುವುದರಲ್ಲಿ ಅರ್ಥವೇ ಇಲ್ಲ ಎಂದು ಹೇಳಿದರು.
ಮಹೇಶ್‌ಗೆ ಜೆಡಿಎಸ್‌ನೊಂದಿಗೆ ನಂಟಿರಲಿಲ್ಲವೇ?:‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ರವರನ್ನು ಕೋರಿದ್ದರು. ಇದರಲ್ಲಿ ತಪ್ಪೇನಿದೆ? ಈ ಮಹೇಶ್ ಸಚಿವ ರಾಜಣ್ಣ ರವರನ್ನು ಓಲೈಸುವ ಸಲುವಾಗಿಯೇ ಅವರ ಪರ ಮಾತನಾಡುತ್ತಿದ್ದಾರೆ, ಎಚ್.ಕೆ. ಮಹೇಶ್ ರವರೇ ಈ ಹಿಂದೆ ಜೆಡಿಎಸ್‌ನೊಂದಿಗೆ ನಂಟು ಬೆಳೆಸಿದ್ದರು. ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಕುಟುಂಬದೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಮಹೇಶ್ ರವರು ಯಾವಾಗಲೂ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುತ್ತಾರೆ. ಇಂದು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧೋಗತಿಗೆ ಇಳಿಯಲು ಎಚ್.ಕೆ. ಮಹೇಶ್ ಕಾರಣ’ ಎಂದು ದೂರಿದರು.
‘ಮಹೇಶ್‌ಗೆ ಹಣ ಮಾಡುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ವರ್ಗಾವಣೆಯ ದಂಧೆಯಲ್ಲೂ ಇವರು ಪಾಲ್ಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವನ್ನೂ ಪಡೆದು ಈಗ ಕಾಂಗ್ರೆಸ್ ಪಕ್ಷದ ನಿಷ್ಠಾವಂತರ ವಿರುದ್ಧ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ. ಇಂತಹವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದಷ್ಟು ದಿವಸ ಪಕ್ಷದ ಅವನತಿ ಆಗುತ್ತದೆ. ಇವರನ್ನು ಕಾಂಗ್ರೆಸ್ ಪಕ್ಷದಿಂದಲೂ ಉಚ್ಛಾಟಿಸಬೇಕು. ಹಾಗಾಗಿ ಕೆಪಿಸಿಸಿ ಅಧ್ಯಕ್ಷರಿಗೆ ಮಹೇಶ್ ವಿರುದ್ಧ ದೂರು ನೀಡಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.ಯಾವುದೇ ಚುನಾವಣೆ ಬರಲಿ, ಶಾಸಕ ಮತ್ತು ಸಂಸದ ಅಭ್ಯರ್ಥಿ ಎಂದು ಹೇಳಿಕೊಂಡು ಸರ್ಕಾರ ಬಂದಾಗಲೆಲ್ಲಾ ಹುದ್ದೆಗೆ ಅರ್ಜಿ ಹಾಕುವುದೇ ಇವರ ಸಾಧನೆ. ಇಂತಹವರಿಂದ ಮಾಜಿ ಸಚಿವ ಬಿ. ಶಿವರಾಂ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕತೆ ಇದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೀರ್ತಿಕುಮಾರ್, ಮಾಜಿ ಪ್ರಧಾನ ಕಾರ್ಯದರ್ಶಿ ಬಾಲಶಂಕರ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೋಮಲೇಶ್, ಶೇಖರಪ್ಪ ಇದ್ದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಾಸನ ಗ್ರಾಮಾಂತರ ಬ್ಲಾಕ್ ಮಾಜಿ ಅಧ್ಯಕ್ಷ ಬಸವರಾಜು ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಿ.ಎ. ಮಹೇಂದ್ರ.