ಮತದಾರರಿಗೆ ಆಯೋಗದ ಅರ್ಜಿ ತಲುಪಿದರೆ ಸಾಲದು. ಅದನ್ನು ಸರಿಯಾಗಿ ಭರ್ತಿ ಮಾಡಿ ಆಯೋಗಕ್ಕೆ ಸಲ್ಲಿಕೆಯಾಗಬೇಕು. ಅಂದಾಗ ಮಾತ್ರ ಎಸ್‌ಐಆರ್ ಕಾರ್ಯ ಯಶಸ್ವಿಗೊಳ್ಳುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾರ್ಯಕರ್ತರಿಗೆ ಕರೆ ನೀಡಿದರು.
ಹೊಸಪೇಟೆ: ಮತದಾರರಿಗೆ ಆಯೋಗದ ಅರ್ಜಿ ತಲುಪಿದರೆ ಸಾಲದು. ಅದನ್ನು ಸರಿಯಾಗಿ ಭರ್ತಿ ಮಾಡಿ ಆಯೋಗಕ್ಕೆ ಸಲ್ಲಿಕೆಯಾಗಬೇಕು. ಅಂದಾಗ ಮಾತ್ರ ಎಸ್‌ಐಆರ್ ಕಾರ್ಯ ಯಶಸ್ವಿಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಪಕ್ಷದ ಬಿಎಲ್‌ಎಗಳು ಹಾಗೂ ಬೂತ್ ಮಟ್ಟದ ಕಾರ್ಯಕರ್ತರು ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತ ವಿಶೇಷ ಸಭೆ ಉದ್ಘಾಟಿಸಿ ಮಾತನಾಡಿದರು.ಎಸ್‌ಐಆರ್ ನೋಂದಣಿ ಪ್ರಕ್ರಿಯೆಯ ಜಿಲ್ಲೆಯ ಸಾಧನೆ ತೃಪ್ತಿಕರವಾಗಿದೆ. ಅದಕ್ಕಾಗಿ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷದ ಬಿಎಲ್‌ಎಗಳು, ಬೂತ್ ಮಟ್ಟದ ಕಾರ್ಯಕರ್ತರ ಶ್ರಮವನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು.
ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಹೀಗಾಗಿ, ಪಕ್ಷದ ಎಲ್ಲ ಹಂತದ ಕಾರ್ಯಕರ್ತರನ್ನು ಪಕ್ಷದ ಮುಖಂಡರು ಗೌರವಿಸಬೇಕು. ಕಾರ್ಯಕರ್ತರನ್ನು ನಾವು ಪ್ರೀತಿ, ವಿಶ್ವಾಸದಿಂದ ಕಾಣಬೇಕು. ಮುಂಬರುವ ಗ್ರಾಪಂ ತಾಪಂ, ಜಿಪಂ ಚುನಾವಣೆಗಳಲ್ಲಿ ಪಕ್ಷದ ಪ್ರಾಮಾಣಿಕ, ನಿಷ್ಠಾವಂತ ಕಾರ್ಯಕರ್ತರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು. ಅವರ ಗೆಲುವಿಗಾಗಿ ಮುಖಂಡರು ಶ್ರಮಿಸಬೇಕು ಎಂದು ಅವರು ಹೇಳಿದರು.ನಮ್ಮ ಪಕ್ಷದ ಕಾರ್ಯಕರ್ತರು ಗೆದ್ದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾರ್ಯಕರ್ತರೂ ಅತ್ಯುತ್ಸಾಹದಿಂದ ಕೆಲಸ ಮಾಡುತ್ತಾರೆ. ಪಕ್ಷದ ಗೆಲುವಿಗೆ ಕಾರಣರಾಗುತ್ತಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಪಕ್ಷದ ಶಾಸಕರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.
ಬಿಜೆಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಬಳ್ಳಾರಿ ಸಹ ಪ್ರಭಾರಿ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ನಡೆದಿರುವ ಎಸ್‌ಐಆರ್ ನೋಂದಣಿ ಪ್ರಗತಿಯ ಅಂಕಿ ಅಂಶಗಳನ್ನು ವಿವರಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ಸಂಜೀವರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಡಗಲಿ ಶಾಸಕ ಕೃಷ್ಣಾ ನಾಯ್ಕ, ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ, ಬಿ. ಶ್ರೀರಾಮುಲು, ಮಾಜಿ ಶಾಸಕ ಪಿ. ರಾಜೀವ್, ಶಶೀಲ್ ಜಿ. ನಮೋಶಿ, ಅಮರನಾಥ್ ಪಾಟೀಲ್, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಒಬಿಸಿ ರಾಜ್ಯ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂದೀಪ್ ಸಿಂಗ್, ನಗರಸಭೆ ಅಧ್ಯಕ್ಷ ಎನ್. ರೂಪೇಶ್ ಕುಮಾರ್, ಉಪಾಧ್ಯಕ್ಷ ಜೀವರತ್ನಂ, ಹುಡಾ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ, ಓದೋ ಗಂಗಪ್ಪ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.