ಮಳೆಗಾಲ ಇನ್ನೂ ಮುಗಿದಿಲ್ಲ, ಆದರೆ ತಾಲೂಕಿನಲ್ಲಿ ಈಗಾಗಲೇ ಸುಡುಬಿಸಿಲಿನ ಝಳ ಹೆಚ್ಚಾಗಿದೆ. ಜನರು ಬಿಸಿಲಿನ ತಾಪಕ್ಕೆ ಕಂಗೆಡುವಂತಾಗಿದೆ. ಸೆಪ್ಟೆಂಬರನಲ್ಲೇ ಇಂತಹ ವಾತಾವರಣ ಇದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬ ಆತಂಕ ಮೂಡಿದೆ.

ರಾಘು ಕಾಕರಮಠ

ಅಂಕೋಲಾ: ಮಳೆಗಾಲ ಇನ್ನೂ ಮುಗಿದಿಲ್ಲ, ಆದರೆ ತಾಲೂಕಿನಲ್ಲಿ ಈಗಾಗಲೇ ಸುಡುಬಿಸಿಲಿನ ಝಳ ಹೆಚ್ಚಾಗಿದೆ. ಜನರು ಬಿಸಿಲಿನ ತಾಪಕ್ಕೆ ಕಂಗೆಡುವಂತಾಗಿದೆ. ಸೆಪ್ಟೆಂಬರನಲ್ಲೇ ಇಂತಹ ವಾತಾವರಣ ಇದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬ ಆತಂಕ ಮೂಡಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸಾಮಾನ್ಯ ಗರಿಷ್ಠ ತಾಪಮಾನ ಸುಮಾರು 29 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು. ಆದರೆ ಈ ವರ್ಷ ಇದೇ ಅವಧಿಯಲ್ಲಿ ತಾಪಮಾನ ಸುಮಾರು 5 ಡಿಗ್ರಿಯಷ್ಟು ಏರಿಕೆಯಾಗಿ 34ಕ್ಕೆ ತಲುಪಿದೆ. ಭಾರತೀಯ ಹವಾಮಾನ ಇಲಾಖೆ ದಾಖಲೆಯ ಪ್ರಕಾರ, ಸೆಪ್ಟೆಂಬರ್ 1ರಿಂದ 12ರ ವರೆಗೆ ಸರಾಸರಿ ಗರಿಷ್ಠ ತಾಪಮಾನ 32.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದರ ನಡುವೆ ಮಳೆಯ ಪ್ರಮಾಣವೂ ವಾಡಿಕೆಗಿಂತ ಶೇ. 42ರಷ್ಟು ಕುಸಿದಿದೆ. ಮಳೆ ಸುರಿಯಬೇಕಾದ ದಿನಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದು ಜನರಲ್ಲಿ ಬೆವರು ಹರಿಸುವಂತಾಗಿದೆ.

ಮಳೆ ಬದಲಿಗೆ ಬಿಸಿಲಿನ ತಾಪ: ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ತಾಪಮಾನ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ ಮಳೆಗಾಲ ಹಾಗೂ ಚಳಿಗಾಲದಲ್ಲಿ ಮಳೆ, ಮೋಡ ಮತ್ತು ತಂಪಾದ ವಾತಾವರಣದಿಂದ ಜನತೆ ಬಿಸಿಲಿನ ತಾಪದಿಂದ ಸ್ವಲ್ಪ ನಿರಾಳರಾಗಿರುತ್ತಾರೆ. ಈ ಬಾರಿ ಮಾತ್ರ ಮಳೆಗಾಲದ ಸಂದರ್ಭದಲ್ಲೇ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದು ಅಸಹನೆಗೆ ಕಾರಣವಾಗಿದೆ.

ಸುದೀರ್ಘವಾಗಿ ಮಳೆ ಕೈಕೊಟ್ಟು ಒಣಹವೆ ಮುಂದುವರಿದಿರುವುದರಿಂದ ಜನರು ಕಂಗೆಡುವಂತಾಗಿದೆ. ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಕಾಣಿಸಿಕೊಳ್ಳುವಂತಹ ಬಿಸಿಲಿನ ವಾತಾವರಣವೇ ಸೆಪ್ಟೆಂಬರ್‌ನಲ್ಲೇ ಕಾಣಿಸಿಕೊಳ್ಳುತ್ತಿರುವುದು ಹವಾಮಾನ ಬದಲಾವಣೆಯ ಕುರಿತು ಚರ್ಚೆಗೆ ಕಾರಣವಾಗಿದೆ.

ಮಳೆಗಾಲದಲ್ಲೇ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಾಗಬಹುದು ಎನ್ನುವ ನಿರೀಕ್ಷೆ ಇದೆ.ಮಳೆಗೆ ತಂದ ಕೊಡೆ ಬಿಸಿಲಿಗೇ ಬಂತು!: ಮಳೆಗಾಲ ಎಂದಾಕ್ಷಣ ಯಾವ ಕ್ಷಣದಲ್ಲಿ ಮಳೆ ಸುರಿಯಬಹುದು ಎಂಬ ಕಾರಣಕ್ಕೆ ಜನರು ಮನೆಯಿಂದ ಹೊರಡುವಾಗ ಕೊಡೆ ಹಿಡಿದುಕೊಂಡು ಬರುತ್ತಾರೆ. ಆದರೆ ಈ ಬಾರಿ ಅಂಕೋಲಾದಲ್ಲಿ ಜನರು ಮಳೆಯಿಂದ ರಕ್ಷಿಸಿಕೊಳ್ಳಲು ಅಲ್ಲ, ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಛತ್ರಿ ಬಳಸುತ್ತಿದ್ದಾರೆ.

ಉಷ್ಣತೆ ಹೆಚ್ಚಳ: ಮಳೆಯ ಪ್ರಮಾಣ ತೀವ್ರವಾಗಿ ಕುಸಿದಿರುವುದರಿಂದ, ಸಹಜವಾಗಿ ಉಷ್ಣತೆಯು ಹೆಚ್ಚಿದೆ. ವಾತಾವರಣದಲ್ಲಿ ತೇವಾಂಶದ ಪ್ರಮಾಣ, ಗಾಳಿಯ ದಿಕ್ಕು ಹಾಗೂ ವಾಯುಭಾರದಲ್ಲಾಗುವ ಬದಲಾವಣೆಗಳಿಂದ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದಿರಬಹುದು. ಇದರ ಪರಿಣಾಮ ಉಷ್ಣಾಂಶ ಹೆಚ್ಚಲು ಕಾರಣವಾಗಿದೆ ಎಂದು ಹಮಾಮಾನ ಅಧಿಕಾರಿ ಅವಿನಾಶ ಹೇಳಿದರು.