ವೃಕ್ಷೋಥಾನ್ ಹೆರಿಟೇಜ್ ರನ್-2024ಕ್ಕೆ ಪೂರಕವಾಗಿ ಬಿಎಲ್‌ಡಿಇ ಸಂಸ್ಥೆಯ ಎಲ್ಲ ಸಿಬ್ಬಂದಿ ಅ.7ರಂದು ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಅವರ ಜನ್ಮದಿನದ ಅಂಗವಾಗಿ ಸಸಿ ನೆಟ್ಟು ಅದನ್ನು ಪೋಷಿಸುವ ಜವಾಬ್ದಾರಿ ತೆಗೆದುಕೊಳ್ಳೋಣ ಎಂದು ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಬಿಎಲ್‌ಡಿಇ ಡೀಮ್ಡ್ ವಿವಿ ರಿಜಿಸ್ಟ್ರಾರ ಡಾ.ಆರ್‌.ವಿ.ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವೃಕ್ಷೋಥಾನ್ ಹೆರಿಟೇಜ್ ರನ್-2024ಕ್ಕೆ ಪೂರಕವಾಗಿ ಬಿಎಲ್‌ಡಿಇ ಸಂಸ್ಥೆಯ ಎಲ್ಲ ಸಿಬ್ಬಂದಿ ಅ.7ರಂದು ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಅವರ ಜನ್ಮದಿನದ ಅಂಗವಾಗಿ ಸಸಿ ನೆಟ್ಟು ಅದನ್ನು ಪೋಷಿಸುವ ಜವಾಬ್ದಾರಿ ತೆಗೆದುಕೊಳ್ಳೋಣ ಎಂದು ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ಬಿಎಲ್‌ಡಿಇ ಡೀಮ್ಡ್ ವಿವಿ ರಿಜಿಸ್ಟ್ರಾರ ಡಾ.ಆರ್‌.ವಿ.ಕುಲಕರ್ಣಿ ಹೇಳಿದರು.

ನಗರದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ವೃಕ್ಷೋಥಾನ್ ಹೆರಿಟೇಜ್ ರನ್-2024ರ ಅಂಗವಾಗಿ ನಡೆದ ಸಂಸ್ಥೆಯ ನಾನಾ ಹೈಸ್ಕೂಲ್‌ಗಳ ಮುಖ್ಯೋಪಾಧ್ಯಾಯರು ಮತ್ತು ಕಾಲೇಜುಗಳ ಪ್ರಾಚಾರ್ಯರ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅರಣ್ಯೀಕರಣಕ್ಕಾಗಿ ಎಂ.ಬಿ.ಪಾಟೀಲ ಅವರು ವೃಕ್ಷೋಥಾನ್ ಹೆರಿಟೇಜ್ ರನ್ ಪ್ರಾರಂಭಿಸುವ ಮೂಲಕ ಹಸಿರಿಕರಣಕ್ಕೆ ನಾಂದಿ ಹಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದರು.ಅ.7ರಂದು ಎಂ.ಬಿ.ಪಾಟೀಲರ ಜನ್ಮದಿನದ ಪ್ರಯುಕ್ತ ಎಲ್ಲ ಸಿಬ್ಬಂದಿ ಒಂದೊಂದು ಸಸಿ ನೆಟ್ಟು ಅವುಗಳನ್ನು ದತ್ತು ಪಡೆದು ಬೆಳೆಸೋಣ. ಪ್ರತಿವರ್ಷ ಅವುಗಳ ಆಡಿಟ್ ಮಾಡಿಸಿ ಸಚಿವರ ಸಂಕಲ್ಪದಂತೆ ಜಲ, ವೃಕ್ಷ, ಶಿಕ್ಷಣದ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿಯೂ ಉತ್ತಮ ಸೇವೆ ಒದಗಿಸಲು ಪ್ರಯತ್ನಿಸೋಣ. ಅಲ್ಲದೇ, ಸಂಸ್ಥೆಯ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಹೂವು, ಹಾರ, ಶಾಲು ಬದಲು ಅತಿಥಿಗಳಿಗೆ ನೋಟ್ ಬುಕ್‌ಗಳನ್ನು ನೀಡೋಣ ಎಂದು ಹೇಳಿದರು.

ಸಚಿವ ಎಂ.ಬಿ.ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಮಾತನಾಡಿ, ಸಚಿವರು ಪ್ರಾರಂಭಿಸಿದ ಕೋಟಿ ವೃಕ್ಷ ಅಭಿಯಾನದಿಂದಾಗಿ ಇಂದು ಜಿಲ್ಲೆಯಲ್ಲಿ ಅರಣ್ಯೀಕರಣ ಹೆಚ್ಚಾಗಿದೆ. ಬಹಳಷ್ಟು ಕಡೆಗಳಲ್ಲಿ ನರ್ಸರಿಗಳೂ ಪ್ರಾರಂಭವಾಗಿವೆ. ಪರಿಸರದಲ್ಲಿ ಬದಲಾವಣೆ ತರುವುದು ಸಾಮಾನ್ಯ ಸಂಗತಿಯಲ್ಲ. ಹುಲ್ಲು ಕಡ್ಡಿಯೂ ಬೆಳೆಯದ ಕರಾಡ ದೊಡ್ಡಿಯಲ್ಲಿ ಈಗ ನೆಟ್ಟಿರುವ ಸಸಿಗಳು ಭವಿಷ್ಯದಲ್ಲಿ ದಟ್ಟ ಕಾಡುಗಳಾಗಿ ಮಾರ್ಪಡಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗೌರವಾರ್ಥವಾಗಿ ಮಮದಾಪುರ ಬಳಿ ಸಚಿವರು ಸರ್ಕಾರಿ ಜಮೀನಿನಲ್ಲಿ ಅರಣ್ಯ ನಿರ್ಮಿಸಲು ಕ್ರಮ ಕೈಗೊಂಡಿದ್ದು, ಅಲ್ಲಿ ಜೀವವೈವಿಧ್ಯತೆ ಬದಲಾಗುತ್ತಿದೆ. ಆಲಮಟ್ಟಿಯಲ್ಲಿ 100 ಟಿಎಂಸಿ ಹೆಚ್ಚುವರಿ ಸಂಗ್ರಹಿಸಿದಾಗ ಆ ನೀರು ನಮ್ಮ ಜಿಲ್ಲೆಗೆ ಲಭಿಸಲಿದೆ. ಅಲ್ಲದೇ, ವಿಮಾನ ನಿಲ್ದಾಣ ಪೂರ್ಣಗೊಂಡ ಬಳಿಕ ಜಿಲ್ಲೆ ಮತ್ತಷ್ಟು ಅಭಿವೃದ್ಧಿಯಾಗಲಿದೆ. ಪ್ರತಿವರ್ಷ ಡಿಸೆಂಬರ್ 2-3 ನೇ ವಾರದಲ್ಲಿ ವೃಕ್ಷೋಥಾನ್ ಆಯೋಜನೆಗೆ ನಿರ್ಧರಿಸಲಾಗಿದ್ದು, ಈ ಕಾರ್ಯಕ್ರಮ ನಿರಂತರವಾಗಿರಬೇಕು. ಈ ಬಾರಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್‌ನಲ್ಲಿ ಎಲ್ಲರೂ ತಪ್ಪದೆ ಪಾಲ್ಗೊಳ್ಳಬೇಕು ಎಂದು ಹೇಳಿದರು.ಆಡಳಿತಾಧಿಕಾರಿ ಎಸ್.ಎಚ್.ಲಗಳಿ ಮಾತನಾಡಿ, ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ಜಗತ್ತಿನ ಪರಿಸರದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಈಗಿನಿಂದಲೇ ಹವಾಮಾನ ವೈಪರಿತ್ಯ ತಡೆಯಲು ಎಲ್ಲರೂ ಕಾರ್ಯೋನ್ಮುಖರಾಗಬೇಕಿದೆ. ಸಚಿವ ಎಂ.ಬಿ.ಪಾಟೀಲರು ಜಲಸಂಪನ್ಮೂಲ ಸಚಿವರಾದಾಗಿನಿಂದ ಈ ನಿಟ್ಟಿನಲ್ಲಿ ಅರಣ್ಯೀಕರಣಕ್ಕೆ ಒತ್ತು ನೀಡಿದ್ದಾರೆ. ಮುಂದಿನ ಪೀಳಿಗೆಗಾಗಿ ನಾವೆಲ್ಲರೂ ನಮ್ಮ ನಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.ವೃಕ್ಷೋಥಾನ್ ಹೆರಿಟೇಜ್ ರನ್ ಸಂಚಾಲಕ ಡಾ.ಮುರುಗೇಶ ಪಟ್ಟಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿಗಳಾದ ಬಿ.ಆರ್‌.ಪಾಟೀಲ, ವಿಲಾಸ ಬಗಲಿ ಮತ್ತು ನಾನಾ ಹೈಸ್ಕೂಲು ಮತ್ತು ಕಾಲೇಜುಗಳ ಪ್ರಾಚಾರ್ಯರು ಉಪಸ್ಥಿತರಿದ್ದರು.

ಮೂರ್ನಾಲ್ಕು ದಿನಗಳ ಹಿಂದೆ 34 ವರ್ಷಗಳಲ್ಲಿಯೇ ಅತೀ ಹೆಚ್ಚು ದಾಖಲೆಯ ಮಳೆ ಸುರಿದಿದೆ. ಇದು ಅರಣ್ಯೀಕರಣದ ಪ್ರಭಾವದಿಂದಲೇ ಆಗಿರಬಹುದಾದ ಸಾಧ್ಯತೆ ಹೆಚ್ಚಾಗಿದೆ. ಪರಿಸರದಲ್ಲಿ ಬದಲಾವಣೆ ತರುವುದು ಸಾಮಾನ್ಯ ಸಂಗತಿಯಲ್ಲ. ಹುಲ್ಲು ಕಡ್ಡಿಯೂ ಬೆಳೆಯದ ಕರಾಡ ದೊಡ್ಡಿಯಲ್ಲಿ ಈಗ ನೆಟ್ಟಿರುವ ಸಸಿಗಳು ಭವಿಷ್ಯದಲ್ಲಿ ದಟ್ಟ ಕಾಡುಗಳಾಗಿ ಮಾರ್ಪಡಲಿವೆ.

ಡಾ.ಮಹಾಂತೇಶ ಬಿರಾದಾರ,
ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ.