20 ವರ್ಷಗಳ ವನವಾಸಕ್ಕೆ ಮುಕ್ತಿ: ಎಸ್. ಬಾಲರಾಜ್

| Published : Mar 20 2024, 01:17 AM IST

ಸಾರಾಂಶ

ದಿವಂಗತ ಆರ್. ಧ್ರುವನಾರಾಯಣ್ ಅವರೊಡನೆ 31 ವರ್ಷಗಳಿಂದ ಯುವ ಕಾಂಗ್ರೆಸ್ ಮೂಲಕ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. 2004ರಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದರೂ ಮೂರುವರೆ ವರ್ಷ ಮಾತ್ರ ಕೆಲಸ ಮಾಡಲು ಸಾಧ್ಯವಾಯಿತು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ಧ್ರುವನಾರಾಯಣ್ ಅವರು ಕೊಳ್ಳೇಗಾಲ ಕ್ಷೇತ್ರಕ್ಕೆ ಬಂದ ಮೇಲೆ ಅವಕಾಶ ಸಿಗಲಿಲ್ಲ

ಕನ್ನಡಪ್ರಭ ವಾರ್ತೆ ಮೈಸೂರು

ನನ್ನ ಇಪ್ಪತ್ತು ವರ್ಷಗಳ ರಾಜಕೀಯ ವನವಾಸಕ್ಕೆ ಮುಕ್ತಿ ಸಿಗುವ ವಿಶ್ವಾಸವಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು, ನಾನು ಕಳೆದ ಆರು ತಿಂಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆ. ಇದನ್ನು ಗಮನಿಸಿ, ಟಿಕೆಟ್ ನೀಡಿದ್ದಾರೆ ಎಂದರು.

ದಿವಂಗತ ಆರ್. ಧ್ರುವನಾರಾಯಣ್ ಅವರೊಡನೆ 31 ವರ್ಷಗಳಿಂದ ಯುವ ಕಾಂಗ್ರೆಸ್ ಮೂಲಕ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. 2004ರಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದರೂ ಮೂರುವರೆ ವರ್ಷ ಮಾತ್ರ ಕೆಲಸ ಮಾಡಲು ಸಾಧ್ಯವಾಯಿತು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ಧ್ರುವನಾರಾಯಣ್ ಅವರು ಕೊಳ್ಳೇಗಾಲ ಕ್ಷೇತ್ರಕ್ಕೆ ಬಂದ ಮೇಲೆ ಅವಕಾಶ ಸಿಗಲಿಲ್ಲ ಎಂದರು.

ಮುಂದೆ ಏನಾದರೂ ಮಾಡೋಣ ಎಂದು ಧ್ರುವನಾರಾಯಣ್ ಅವರು ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ಕೆಲವರಿಂದ ಅವಕಾಶ ಕೈತಪ್ಪಿತು. ಇದಕ್ಕೆ ಯಾಕೆ ಕಲ್ಲು ಬಿತ್ತು, ಏನಾಯಿತು ಎಂಬುದನ್ನು ಮುಂದೆ ಹೇಳುತ್ತೇನೆ. ಈ ನಡುವೆ ಹಲವು ಕಾರಣಗಳಿಗೆ ಪಕ್ಷ ಬದಲಿಸಿದರೂ ಸಾರ್ವಜನಿಕರ ಕೆಲಸ ಮಾಡಿಕೊಂಡು ಬಂದಿದ್ದೇನೆ. ಈಗ ಬಿಜೆಪಿ ನಾಯಕರು ಗುರುತಿಸಿ ಟಿಕೆಟ್ ನೀಡಿದ್ದಾರೆ. ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ನ ಕೆಲವು ನಾಯಕರು ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದರು.

ಸಂಸದ ವಿ. ಶ್ರೀನಿವಾಸಪ್ರಸಾದ್ ಅವರು ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಬಿಜೆಪಿಗೆ ಮತ ಹಾಕುವ ಜತೆಗೆ ಎಲ್ಲರಿಗೂ ಹೇಳುವ ಭರವಸೆ ನೀಡಿದ್ದಾರೆ. ಅವರ ಅಳಿಯ ಡಾ. ಮೋಹನ್ ಅವರಿಗೆ ಟಿಕೆಟ್ ದೊರೆಯದೆ ಇರುವುದರಿಂದ ಯಾವ ಅಸಮಾಧಾನ ಇಲ್ಲ ಎಂದರು.