ಸಾರಾಂಶ
ಮುಂಡಗೋಡ:
ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮುಂದೆಯೇ ಕಾರ್ಯಕರ್ತರು ಒತ್ತಾಯಿಸಿದ ಪ್ರಸಂಗ ಶನಿವಾರ ನಡೆಯಿತು.ಪಟ್ಟಣಕ್ಕೆ ಆಗಮಿಸಿದ ಸಚಿವರ ಮುಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪಕ್ಷವನ್ನು ತಮ್ಮ ಸ್ವಾರ್ಥಕ್ಕೆ ಬಲಿ ಕೊಡುತ್ತಿದ್ದಾರೆ. ತಾಲೂಕಿನಲ್ಲಿ ಪಕ್ಷವನ್ನು ದಿವಾಳಿ ಮಾಡಿದ್ದಾರೆ. ಅವರನ್ನು ಅಧ್ಯಕ್ಷರನ್ನಾಗಿ ಮುಂದುವರಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಲಿದೆ. ಹಾಗಾಗಿ ಅವರನ್ನು ತಕ್ಷಣ ಬದಲಾಯಿಸಲೇಬೇಕು ಎಂದು ಪಟ್ಟು ಹಿಡಿದರು. ಇದರಿಂದ ಆಕ್ರೋಶಗೊಂಡ ಸಚಿವ ಮಂಕಾಳು ವೈದ್ಯ ಕಾರ್ಯಕರ್ತರನ್ನು ವಿಶ್ವಾಸದಿಂದ ನೋಡಿಕೊಂಡು ಹೋಗಲು ನಿಮಗೆ ಆಗುವುದಿಲ್ಲವೇ? ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಈ ಬಗ್ಗೆ ಹಿರಿಯರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.
ಕಾದು ಸುಸ್ತಾದ ನಾಯಕರು:ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಆಗಮಿಸುತ್ತಾರೆಂದು ಶನಿವಾರ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಕಾದು ಕಾದು ಸುಸ್ತಾದರು. ಬೆಳಗ್ಗೆ 10.30ಕ್ಕೆ ಇಲ್ಲಿಯ ಮಿನಿ ವಿಧಾನಸೌದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗ್ಗೆ ೧೦ ಗಂಟೆಯಿಂದಲೇ ತಮ್ಮ ನಾಯಕರು ಬರುತ್ತಾರೆಂದು ಕಾರ್ಯಕರ್ತರೆಲ್ಲ ಸೇರಿ ಪಟ್ಟಣದ ಹೊರವಲಯ ಟಿಬೇಟಿಯನ್ ಕಾಲನಿ ಬಳಿ ತೆರಳಿ ಅವರ ದಾರಿ ಕಾಯುತ್ತಿದ್ದರು. ೧೨ ಗಂಟೆಯಾದರು ಸಚಿವರು ಬರುವುದು ಮತ್ತಷ್ಟು ತಡವಾಗಲಿದೆ ಎಂಬ ವಿಷಯ ತಿಳಿದು ಮುಂಡಗೋಡ ಪ್ರವಾಸಿ ಮಂದಿರಕ್ಕೆ ಮರಳಿದರು. ಬಳಿಕ ಸಚಿವರು ೧ ಗಂಟೆಗೆ ಬರುತ್ತಾರೆ ಎಂದು ಹೇಳಲಾಯಿತು. ಆದರೆ ಸಚಿವರು ಆಗಮಿಸಿದ್ದು, ಬರೋಬರಿ ೨.೩೦ಕ್ಕೆ. ಇದರಿಂದ ಕಾಂಗ್ರೆಸ್ ಧುರೀಣರು ಹಾಗೂ ಕಾರ್ಯಕರ್ತರು ಇಡೀ ದಿನ ಸಚಿವರಿಗಾಗಿ ಕಾಯುವಂತಾಯಿತು.