ಸಾರಾಂಶ
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ನಟರಾಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಂದಾಯ, ಮೆಸ್ಕಾಂ, ಭೂ ದಾಖಲೆಗಳು, ಪಾಲಿಕೆ ಹಾಗೂ ಕೃಷಿ ಇಲಾಖೆಗೆ ಸಂಬಂಧಿಸಿ ಒಟ್ಟು 10 ದೂರುಗಳು ಸ್ವೀಕೃತವಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಕಳೆದ 15 ವರ್ಷಗಳಿಂದ ಶೆಡ್‌ನಲ್ಲಿ ಮಕ್ಕಳೊಂದಿಗೆ ಕುಟುಂಬ ಸಹಿತವಾಗಿ ವಾಸಿಸುತ್ತಿದ್ದೇವೆ. ಜಾಗದ ಮಾಲೀಕರು ಮಾನವೀಯತೆಯ ನೆಲೆಯಲ್ಲಿ ನಮಗೆ ಆಶ್ರಯ ನೀಡಿದ್ದರು. ಆದರೆ 2022ರಲ್ಲಿ 108 ರ ಹರೆಯದ ಮನೆಯ ಮಾಲೀಕ ತೀರಿ ಹೋದ ಬಳಿಕ ನಾವು ವಾಸಿಸುವ ಶೆಡ್‌ನ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಮಾತ್ರವಲ್ಲದೆ ಕಳೆದ ಮೂರು ತಿಂಗಳಿನಿಂದ ಶೆಡ್‌ಗೆ ಹೋಗುವ ಗೇಟ್‌ನ ಬೀಗವನ್ನೂ ಹಾಕಲಾಗಿದ್ದು, ಕಂಪೌಂಡ್ ಹಾರಿ ಹೋಗುವಂತಾಗಿದೆ ಎಂದು ಲೇಡಿಹಿಲ್‌ನಲ್ಲಿ ವಾಸವಾಗಿರುವ ಸರಳ ಎಂಬವರು ಲೋಕಾಯುಕ್ತ ಪೊಲೀಸರಿಗೆ ಅಹವಾಲು ಸಲ್ಲಿಸಿದ್ದಾರೆ. ಮಂಗಳೂರು ತಾಲೂಕು ಕಚೇರಿಯಲ್ಲಿ ಬುಧವಾರ ನಡೆದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಸರಳ ಈ ಬಗ್ಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.ಲೋಕಾಯುಕ್ತ ಪೊಲೀಸ್ ಅಧೀಕ್ಷಕ ನಟರಾಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಂದಾಯ, ಮೆಸ್ಕಾಂ, ಭೂ ದಾಖಲೆಗಳು, ಪಾಲಿಕೆ ಹಾಗೂ ಕೃಷಿ ಇಲಾಖೆಗೆ ಸಂಬಂಧಿಸಿ ಒಟ್ಟು 10 ದೂರುಗಳು ಸ್ವೀಕೃತವಾಯಿತು.
ಪೊಲೀಸ್ ಉಪಾಧೀಕ್ಷಕಿ ಡಾ. ಗಾನ ಪಿ. ಕುಮಾರ್, ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ, ಸುರೇಶ್ ಕುಮಾರ್, ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಮತ್ತಿತರರಿದ್ದರು.