ಸಾರಾಂಶ
ಕಲ್ಪತರು ನಾಡಿನ ಜನತೆಯ ಬಹುದಿನಗಳ ಬೇಡಿಕೆಯಂತೆ ತಿಪಟೂರಿನ ನಗರಸಭೆ ಪಕ್ಕದಲ್ಲಿ ಅತ್ಯಾಧುನಿಕ ಉಪಕರಣಗಳನ್ನೊಳಗೊಂಡ ಶೇಖರ್ ಬ್ಲಡ್ ಬ್ಯಾಂಕ್ ಫೆ.2ರಂದು ಪ್ರಾರಂಭಗೊಳ್ಳಲಿದೆ ಎಂದು ಶೇಖರ್ ಬ್ಲಡ್ ಬ್ಯಾಂಕ್ ಮುಖ್ಯಸ್ಥರಾದ ಡಾ. ಸೋಮಶೇಖರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಕಲ್ಪತರು ನಾಡಿನ ಜನತೆಯ ಬಹುದಿನಗಳ ಬೇಡಿಕೆಯಂತೆ ತಿಪಟೂರಿನ ನಗರಸಭೆ ಪಕ್ಕದಲ್ಲಿ ಅತ್ಯಾಧುನಿಕ ಉಪಕರಣಗಳನ್ನೊಳಗೊಂಡ ಶೇಖರ್ ಬ್ಲಡ್ ಬ್ಯಾಂಕ್ ಫೆ.2ರಂದು ಪ್ರಾರಂಭಗೊಳ್ಳಲಿದೆ ಎಂದು ಶೇಖರ್ ಬ್ಲಡ್ ಬ್ಯಾಂಕ್ ಮುಖ್ಯಸ್ಥರಾದ ಡಾ. ಸೋಮಶೇಖರ್ ತಿಳಿಸಿದರು. ನಗರದ ಬಿ.ಎಚ್. ರಸ್ತೆಯಲ್ಲಿ ನೂತನವಾಗಿ ಪ್ರಾರಂಭಗೊಳ್ಳುತ್ತಿರುವ ಶೇಖರ್ ಬ್ಲಡ್ ಬ್ಯಾಂಕ್ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿಪಟೂರಿಗೆ ಬ್ಲಡ್‌ಬ್ಯಾಂಕ್‌ನ ಅವಶ್ಯಕತೆ ಬಹಳ ಹೆಚ್ಚಿದೆ. ಇದನ್ನು ಮನಗಂಡ ನಾವು ಬ್ಲಡ್ ಬ್ಯಾಂಕ್ ಪ್ರಾರಂಭಿಸುತ್ತಿದ್ದು, ಫೆ.೨ರಂದು ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಉದ್ಘಾಟಿಸಲಿದ್ದಾರೆ. ಸಾನಿಧ್ಯವನ್ನು ಕೆರಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ, ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭದೇಶೀಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ, ಗುರುಕುಲಾನಂದಾಶ್ರಮದ ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಷಡಕ್ಷರಿ, ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಜನರಿಗೆ ತುರ್ತು ಅಗತ್ಯವಾಗಿದ್ದ ಬ್ಲಡ್ ಬ್ಯಾಂಕ್ ಸೌಲಭ್ಯ ತರಲು ಸತತ ನಾಲ್ಕು ವರ್ಷಗಳ ಪ್ರಯತ್ನ ಫಲವಾಗಿ ತಿಪಟೂರಿಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯಂತ್ರೋಪಕರಣ, ನುರಿತ ತಂತ್ರಜ್ಞರು ಹಾಗೂ ವೈದ್ಯರನ್ನೊಳಗೊಂಡ ಬ್ಲಡ್ ಬ್ಯಾಂಕ್ ಪ್ರಾರಂಭವಾಗುತ್ತಿದೆ. ಅಪಘಾತ, ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದ ಜೀವನ್ಮರಣ ಅನುಭವಿಸುವ ಸಮಯದಲ್ಲಿ ಹಾಗೂ ತಿಪಟೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಜನರ ಸಮಸ್ಯೆಗಳನ್ನು ಅರಿತು ಬ್ಲಡ್ ಬ್ಯಾಂಕ್ ಆರಂಭಿಸಲಾಗುತ್ತಿದೆ. ಈ ಬ್ಲಡ್ ಬ್ಯಾಂಕ್ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಅರಸೀಕೆರೆ ಸೇರಿದಂತೆ ಸುಮಾರು 70 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬರುವಂತಹ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದ್ದು ನಮ್ಮ ಬ್ಲಡ್ ಬ್ಯಾಂಕ್ ಉತ್ತಮ ಸೇವೆ ನೀಡಲಿದೆ. ಬ್ಲಡ್ ಬ್ಯಾಕ್‌ನಲ್ಲಿ ರಕ್ತದಾನಿಗಳು ನೀಡುವ ರಕ್ತವನ್ನು ಪರೀಕ್ಷೆ ಮಾಡಿ ಹಲವಾರು ವಿಭಾಗಗಳಲ್ಲಿ ವಿಂಗಡಿಸಿ ಅಗತ್ಯವಿರುವಂತಹ ರೋಗಿಗಳಿಗೆ ನೀಡಲಾಗುವುದು. ಪರೀಕ್ಷಾ ಶುಲ್ಕ ಹಾಗೂ ಕೇಂದ್ರದ ನಿರ್ವಹಣೆ ಶುಲ್ಕಗಳನ್ನ ಮಾತ್ರ ವಿಧಿಸಲಾಗುವುದು. ಕೇಂದ್ರ ಸರ್ಕಾರದ ನಿಯಮದಂತೆ ನಿಗದಿಪಡಿಸಿರುವ ದರಕ್ಕೆ ರಕ್ತವನ್ನು ನೀಡಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬ್ಲಡ್ ಬ್ಯಾಂಕ್ ತಂತ್ರಜ್ಞರಾದ ನಾಗೇಶ್ ಅದಂ ಮತ್ತಿತರರಿದ್ದರು.