ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ಮಂಗಳವಾರ ರಕ್ತ ಕ್ಯಾನ್ಸರ್ ಮತ್ತು ಬ್ಲಡ್ ಸ್ಟೆಮ್ ಕೋಶ ದಾನ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ನೋಂದಣಿ ಜರಗಿತು.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್) ಘಟಕಗಳ ವತಿಯಿಂದ ಸಾಮಾಜಿಕ ಜವಾಬ್ದಾರಿ ಉಪಕ್ರಮ ಸಮಿತಿ ಮತ್ತು ಡಿ ಕೆ ಎಂ ಎಸ್ – ಬಿ ಎಂ ಎಸ್ ಟಿ ಫೌಂಡೇಶನ್ ಇಂಡಿಯಾ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿ, ಡಿ.ಕೆ.ಎಂ.ಎಸ್. - ಬಿ.ಎಂ.ಎಸ್.ಟಿ. ಫೌಂಡೇಶನ್ ಇಂಡಿಯಾದ ಅಸೋಸಿಯೇಟ್ ರೋಹಿತ್ ರಾಜೀವ್ ಮಾತನಾಡಿ, ಸಂಸ್ಥೆಯ ಮುಖ್ಯ ಉದ್ದೇಶ ಮತ್ತು ಗುರಿಗಳ ಕುರಿತು ತಿಳಿಸಿದರು. ರಕ್ತ ಕ್ಯಾನ್ಸರ್ ಮತ್ತು ಬ್ಲಡ್ ಸ್ಟೆಮ್ ಕೋಶದ ದಾನ ಕುರಿತ ಮಾಹಿತಿ ನೀಡಿದರು.ಪ್ರಪಂಚದಲ್ಲಿ ಎಷ್ಟೋ ಮಂದಿ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಮತ್ತು ಅದಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕಿಮೋಥೆರಪಿ ಮತ್ತು ರೇಡಿಯೋಥೆರಪಿ ಫಲಿಸದೇ ಇದ್ದಾಗ ಕೊನೆಯ ಆಯ್ಕೆ ಬ್ಲಡ್ ಸ್ಟೆಮ್ ಕೋಶದ ಕಸಿ. ಆ ಉದ್ದೇಶದಿಂದ ಸ್ಥಾಪನೆಗೊಂಡ ಸಂಸ್ಥೆಯೇ ಡಿ.ಕೆ.ಎಂ.ಎಸ್. - ಬಿ.ಎಂ.ಎಸ್.ಟಿ. ಎಂದು ಅವರು ತಿಳಿಸಿದರು.
ತಲಸೇಮಿಯಾ ಸಮಸ್ಯೆ ಭಾರತದಲ್ಲಿ ಅದೆಷ್ಟೋ ಇದೆ ಆದರೆ ಈ ಕುರಿತು ಭಾರತೀಯರಿಗೆ ಮಾಹಿತಿ ಇಲ್ಲದಿರುವುದು ಬೇಸರದ ಸಂಗತಿ. ಪ್ರತೀ 5 ನಿಮಿಷಕ್ಕೆ ಒಬ್ಬ ವ್ಯಕ್ತಿ ಬ್ಲಡ್ ಕ್ಯಾನ್ಸರ್ ನಿಂದ ಸಾಯುತ್ತಿದ್ದಾನೆ. 10 ಲಕ್ಷ ಜನರಲ್ಲಿ ಓರ್ವನ ಬ್ಲಡ್ ಸ್ಟೆಮ್ ಕೋಶ ಇನ್ನೊಬ್ಬನಿಗೆ ಹೊಂದಾಣಿಕೆಯಾಗುತ್ತದೆ. ಪ್ರಪಂಚದ 7 ಕಡೆಗಳಲ್ಲಿ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 12 ಲಕ್ಷಕ್ಕಿಂತ ಅಧಿಕ ಜನರ ಬ್ಲಡ್ ಸ್ಟೆಮ್ ಕೋಶದ ದಾನ ಮಾಡಲು ನೋಂದಣಿಯಾಗಿದೆ. ಹತ್ತು ಸಾವಿರಕ್ಕಿಂತಲೂ ಹೆಚ್ಚು ದಾನಿಗಳಿಗೆ ದಾನ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಅವರು ವಿವರಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ, ಮಾನವನ ರಕ್ತಕ್ಕೆ ಮಾನವನ ರಕ್ತವೇ ಸಮಾನ. ಜೀವನ ಎನ್ನುವುದು ಸದಾ ಅಸ್ತಿತ್ವಕ್ಕಾಗಿ ಹೋರಾಟ. ಈ ಹೋರಾಟದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಅಂತಹ ಕಾಯಿಲೆಗಳಲ್ಲಿ ಪ್ರಧಾನ ಕಾಯಿಲೆ ಕ್ಯಾನ್ಸರ್. ಗೊತ್ತಿದ್ದು ಅಥವಾ ಗೊತ್ತಿಲ್ಲದೇ ಪ್ರತಿಯೊಬ್ಬರ ದೇಹದಲ್ಲೂ ಕ್ಯಾನ್ಸರ್ ಅಂಶ ಇದ್ದೇ ಇರುತ್ತವೆ. ಅದರಲ್ಲಿ ಕೆಲವು ನಿಯಂತ್ರಣ ತಪ್ಪಿ ವಿಪರೀತ ಬೆಳವಣಿಗೆ ಆಗುತ್ತದೆ ಎಂದರು.
ಬ್ಲಡ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುವವರಿಗೆ ನಾವು ಬ್ಲಡ್ ಸ್ಟೆಮ್ ಕೋಶದ ದಾನ ಮಾಡುವುದರಿಂದ ಜೀವ ಉಳಿಸುವ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬಹುದು ಎಂದರು.ಬ್ಲಡ್ ಸ್ಟೆಮ್ ಕೋಶ ದಾನದ ನೋಂದಣಿ ನಡೆಸಲಾಯಿತು.
ಎನ್ನೆಸ್ಸೆಸ್ ಘಟಕದ ಯೋಜನಾಧಿಕಾರಿಗಳಾದ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ಮತ್ತು ಪ್ರೊ. ದೀಪ ಆರ್.ಪಿ. ಹಾಗೂ ಸಾಮಾಜಿಕ ಜವಾಬ್ದಾರಿ ಉಪಕ್ರಮ ಸಮಿತಿ ಸದಸ್ಯೆ ಹರಿಣಿ ಇದ್ದರು.ಸ್ವಯಂಸೇವಕಿಯರಾದ ಮಾನ್ಯ ಕೆ.ಆರ್. ಸ್ವಾಗತಿಸಿ, ಸನುಷ ಪಿಂಟೋ ವಂದಿಸಿ, ಪ್ರೀತಿ ಆರ್. ನಿರೂಪಿಸಿದರು.