ವಿಜ್ಞಾನ ಎಷ್ಟೇ ಮುಂದುವರಿದರೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ, ಆದ ಕಾರಣ ರಕ್ತದಾನ ಮತ್ತೊಬ್ಬರ ಜೀವಕ್ಕೆ ಜೀವ ನೀಡಲಿದೆ.

ಕನ್ನಡಪ್ರಭ ವಾರ್ತೆ ಮಧುಗಿರಿ

ರಕ್ತದಾನವು ಎಲ್ಲ ದಾನಗಳಿಗಿಂತ ಅತ್ಯಂತ ಶ್ರೇಷ್ಠ ದಾನ, ವಿಜ್ಞಾನ ಎಷ್ಟೇ ಮುಂದುವರಿದರೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ, ಆದ ಕಾರಣ ರಕ್ತದಾನ ಮತ್ತೊಬ್ಬರ ಜೀವಕ್ಕೆ ಜೀವ ನೀಡಲಿದೆ. ಮಾನವೀಯ ಮೌಲ್ಯಗಳು, ಸಹಕಾರ ಮನೋಭಾವ ಹಾಗೂ ರಕ್ತದಾನವು ಮನುಷ್ಯ ಜೀವನದ ಸಂತೋಷದ ಕ್ಷಣಗಳಾಗಿರುತ್ತವೆ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕುಮಾರ್ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ಎನ್ಎಸ್ಎಸ್ ಮತ್ತು ಆರೋಗ್ಯ ರಕ್ತನಿಧಿ ಕೇಂದ್ರ ,ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆ ಮಧುಗಿರಿ ಇವರ ಆಶ್ರಯದಲ್ಲಿ ನಡೆದ ರಕ್ತದಾನ ಉಚಿತ ಶಿಬಿರ ,ರಕ್ತಗುಂಪು ಪರೀಕ್ಷೆ ಹಾಗೂ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಒಂದು ಯೂನಿಟ್ ರಕ್ತ ಒಂದು ಕುಟುಂಬದ ಸಂತೋಷ, ರಸ್ತೆ ಅಪಘಾತಗಳು ,ಹೆರಿಗೆ ಶಸ್ತ್ರ ಚಿಕಿತ್ಸೆಗಳು ಅನೇಕ ಮಾರಣಾಂತಿಕ ರೋಗಗಳಿಗೆ ರಕ್ತ ಅಗತ್ಯವಾಗಿದೆ ಎಂದರು. ಮುಖ್ಯ ಅತಿಥಿ ವೈದ್ಯಾಧಿಕಾರಿ ಡಾ.ಖದಿರಾ ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಕಣಗಳು 24 ಗಂಟೆ ಒಳಗೆ ಮರು ಉತ್ಪಿತ್ತಿಯಾಗುತ್ತದೆ. ಇದಲ್ಲದೆ ಹೃದಯಕ್ಕೆ ಸಂಬಂಧಪಟ್ಟ ಹತ್ತಾರು ಕಾಯಿಲೆಗಳನ್ನು ದೂರ ಮಾಡುತ್ತವೆ. ಆರೋಗ್ಯವಂತ ವ್ಯಕ್ತಿ 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನದ ಬಗ್ಗೆ ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ರಕ್ತದಾನ ಮಾಡುವುದರಿಂದ ಯಾವುದೇ ಅಪಾಯವಿಲ್ಲ. ಬದಲಾಗಿ ದೇಹದಲ್ಲಿ ರಕ್ತ ಸಂಚಲನ ವ್ಯವಸ್ಥೆ ಚುರುಕಾಗುತ್ತದೆ ಎಂದರು.

ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ.ದುರ್ಗಪ್ಪ ಮಾತನಾಡಿ, ಯುವಕರಲ್ಲಿ ಹೊಸ ಚೈತನ್ಯ,ಉತ್ಸಾಹ ಹಾಗೂ ಸೇವಾ ಮನೋಭಾವ ಬೆಳಸಿಕೊಳ್ಳಲು ರಕ್ತದಾನವು ಒಂದು ಮಾದರಿ ಎಂದರು.

ಕನ್ನಡ ‍ವಿಭಾಗದ ಮುಖ್ಯಸ್ಥ ಪ್ರೊ. ಎಂ.ಗೋವಿಂದರಾಯ ಮಾತನಾಡಿ, ಪ್ರತಿದಿನ ರೋಗಿಗಳಿಗೆ ಅವಶ್ಯಕವಾದ ರಕ್ತವನ್ನು ದಾನಿಗಳಿಂದ ಸಂಗ್ರಹಿಸಬೇಕು. ರಕ್ತ ಹೀನತೆಯಿಂದ ಬಳಲುವವರು ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಂಡರೆ ರಕ್ತ ಉತ್ಪತ್ತಿಯಾಗುತ್ತದೆ.ಸದೃಡ ಯುವಕರು ರಕ್ತದಾನ ಮಾಡಲು ಮುಂದಾಗಬೇಕು ಎಂದರು.

ಐಕ್ಯೂಎಸಿ ಸಂಚಾಲಕಿ ವೇದಲಕ್ಷ್ಮೀ, ಅಧ್ಯಾಪಕರಾದ ಡಾ.ರಂಜಿತಾ, ಶ್ರೀನಿವಾಸಪ್ಪ,ಸಂಜೀವಮೂರ್ತಿ, ನಾಗರಾಜು, ದೈಹಿಕ ನಿರ್ದೇಶಕ ಮುರುಳೀಧರ, ಎನ್‌ಎಸ್‌ಎಸ್ ಅಧಿಕಾರಿಗಳಾದ ಮಂಜುನಾಥ್, ಡಾ.ಮಂಜುನಾಥ್, ಬುಡಸನಹ‍ಳ್ಳಿ ಡಾ.ಲೀಲಾವತಿ, ಮಂಜುನಾಥ ಪೂಜಾರಿ, ಡಾ.ನಾಗರಾಜು, ಡಾ.ನಂದಿನಿ, ಮ್ಯಾನೇಜರ್ ಚಂದ್ರಕಲಾ, ಇತರರಿದ್ದರು. ಬಿಕಾಂ,ಬಿಎಸ್ಸಿ ,ಎಂಕಾಂ,ಬಿಎ ವಿದ್ಯಾರ್ಥಿಗಳಿಂದ ಒಟ್ಟು 42 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಕೋಟ್‌..

ರಕ್ತದಾನದಿಂದ ಹೊಸ ರಕ್ತ ಬಂದು ದೇಹಕ್ಕೆ ಚೈತನ್ಯ ಒದಗಿಸುತ್ತದೆ. ಇಂದಿನ ದಿನಗಳಲ್ಲಿ ಅಪಘಾತ ಸಂಖ್ಯೆಗಳು ಹೆಚ್ಚಿದ್ದು, ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಬಹಳಷ್ಟಿರುತ್ತದೆ. ಅದರಲ್ಲೂ ವಿರಳ ಗುಂಪುಗಳ ರಕ್ತದಾನಿಗಳು ಸಿಗುವುದು ಕಷ್ಟ. ಆದ್ದರಿಂದ ವಿರಳ ಗುಂಪಿನ ರಕ್ತ ಹೊಂದಿರುವವರು ವ್ಯಸನಗಳಿಂದ ದೂರವಿದ್ದರೆ ಸಾಕಷ್ಟು ಜೀವಗಳನ್ನು ಉಳಿಸಬಹುದು.

- ಡಾ.ದುರ್ಗಪ್ಪ, ರೆಡ್‌ ಕ್ರಾಸ್‌ ಕಾರ್ಯಕ್ರಮಾಧಿಕಾರಿ