ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ರಕ್ತದಾನ ಮಹಾದಾನವಾಗಿದ್ದು, ಆ ಮೂಲಕ ಒಂದು ಜೀವ ಉಳಿಸಲು ಸಹಾಯವಾಗಲಿದೆ ಎಂದು ಮಡಿಕೇರಿ ರಕ್ತ ನಿಧಿ ಕೇಂದ್ರ ಮುಖ್ಯಸ್ಥ ಡಾ.ಕರುಂಬಯ್ಯ ಹೇಳಿದ್ದಾರೆ.ಭಾರತೀಯ ರೆಡ್ ಕ್ರಾಸ್ ತಾಲೂಕು ಘಟಕ ಮತ್ತು ರೋಟರಿ ಸಂಸ್ಥೆ ಕುಶಾಲನಗರ ಹಾಗೂ ಮಡಿಕೇರಿ ರಕ್ತನಿಧಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರೋಟರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಹಾಗೂ ಕಣ್ಣು ಮತ್ತು ಅಂಗಾಂಗ ದಾನದ ಮಾಹಿತಿ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಇದೆ. ಇಂತಹ ಶಿಬಿರ ಏರ್ಪಡಿಸುವ ಮೂಲಕ ರೋಗಿಗಳ ತುರ್ತು ಚಿಕಿತ್ಸೆಗೆ ಅವಕಾಶವಾಗಲಿದೆ. ಯುವ ಜನಾಂಗ ಕೆಟ್ಟ ಚಟಗಳಿಗೆ ದಾಸರಾಗದೇ ಒಳ್ಳೆಯ ಆಹಾರ ಸೇವಿಸಿ ಆರೋಗ್ಯವಂತರಾಗಿ ಇನ್ನೊಂದು ಜೀವ ಉಳಿಸುವ ಮಹತ್ಕಾರ್ಯದ ಚಿಂತನೆ ನಡೆಸಬೇಕಾಗಿದೆ ಎಂದರು.ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಅಸಹಾಯಕರಾಗುವುದನ್ನು ತಪ್ಪಿಸಬೇಕು. ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದೆ ಎಂದರು.
ನೇತ್ರ ತಜ್ಞ ಡಾ.ನಿರಂಜನ್ ಮಾತನಾಡಿ, ನೇತ್ರ ಮತ್ತು ಅಂಗಾಂಗ ದಾನ ವ್ಯಕ್ತಿ ಮೃತಪಟ್ಟ ನಂತರ ನೀಡುವ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ಆಸಕ್ತಿಯುಳ್ಳವರು ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು ಎಂದರು.ನೇತ್ರ ಮತ್ತು ಅಂಗಾಂಶ ದಾನದ ಮೂಲಕ, ಒಬ್ಬ ಅಂಗಾಂಗ ದಾನಿ ಏಳು ಜೀವಗಳನ್ನು ಉಳಿಸಬಹುದು. ದಾನಿಗಳು ಮತ್ತು ಅವರ ಕುಟುಂಬಗಳು ಸಾವಿನ ನಂತರ ತಮ್ಮ ಅಂಗಗಳು ಮತ್ತು ಅಂಗಾಂಶಗಳನ್ನು ದಾನ ಮಾಡಲು ಒಪ್ಪಿಗೆ ನೀಡಬೇಕು ಎಂದು ಮಾಹಿತಿ ಒದಗಿಸಿದರು.
ತಾಲೂಕು ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಸತೀಶ್ ಮಾತನಾಡಿ, ರಕ್ತದಾನ ಮಹಾದಾನ. ಆರೋಗ್ಯವಂತ ವ್ಯಕ್ತಿಯು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹದು. ಕೆಲವರಿಗೆ ರಕ್ತ ದಾನ ಮಾಡುವ ವಿಚಾರದಲ್ಲಿ ತಪ್ಪುಕಲ್ಪನೆ, ಗೊಂದಲ ಮತ್ತು ಭಯವಿದೆ. ರಕ್ತ ನೀಡಿದ ಕೆಲವೇ ದಿನದಲ್ಲಿ ಪರಿಶುದ್ಧವಾದ ರಕ್ತ ಸೇರ್ಪಡೆಗೊಳ್ಳಲಿದೆ ಎಂದರು.ಕುಶಾಲನಗರ ರೋಟರಿ ಸಂಸ್ಥೆ ಅಧ್ಯಕ್ಷ ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಮಡಿಕೇರಿ ರಕ್ತ ನಿಧಿಯ ಡಾ ಕರುಂಬಯ್ಯ ಅವರನ್ನು ಗೌರವಿಸಲಾಯಿತು
ರೋಟರಿ ವಲಯಾಧ್ಯಕ್ಷ ಡಾ. ಹರೀಶ್ ಶೆಟ್ಟಿ, ರೋಟರಿ ಸದಸ್ಯರಾದ ಶೋಭಾ ಸತೀಶ್,ರೆಡ್ ಕ್ರಾಸ್ ಉಪಾಧ್ಯಕ್ಷ ಎಂ.ಡಿ.ರಂಗಸ್ವಾಮಿ, ಪುರಸಭೆ ಸದಸ್ಯ ಬಿ.ಅಮೃತ ರಾಜ್, ರೆಡ್ ಕ್ರಾಸ್ ಕಾರ್ಯಕರ್ತರಾದ ಚಂದ್ರು, ನಂಜುಂಡಸ್ವಾಮಿ, ದೇವರಾಜು, ಕೋದಂಡರಾಮ, ಎನ್.ಕೆ.ಮೋಹನ್ ಕುಮಾರ್, ಬಿ.ಅಮೃತ್ ರಾಜ್, ಕೂರನ ಪ್ರಕಾಶ್, ಮಡಿಕೇರಿ ಆಸ್ಪತ್ರೆಯ ಡಾ.ಚೇತನ್ ಕುಮಾರ್ ಇದ್ದರು. ಮಡಿಕೇರಿ ರಕ್ತನಿಧಿ ಕೇಂದ್ರ ತಂಡದವರು ರಕ್ತ ಸಂಗ್ರಹಣೆ ಕಾರ್ಯ ನೆರವೇರಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))