‘ರಕ್ತದಾನ-ಜೀವದಾನ’ ಎಂಬ ಸಂದೇಶದೊಂದಿಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿಯ ಎನ್‌ಸಿಸಿ , ಎನ್‌ಎಸ್‌ಎಸ್‌ ಹಾಗೂ ಯುವ ರೆಡ್ ಕ್ರಾಸ್ (ವೈಆರ್‌ಸಿ) ಘಟಕಗಳ ಸಂಯುಕ್ತ ಆಶ್ರಯದಲ್ಲಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಗುರುವಾರ ಬೃಹತ್ ರಕ್ತದಾನ ಶಿಬಿರ ನಡೆಯಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ ಒಟ್ಟು 65 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

‘ರಕ್ತದಾನ-ಜೀವದಾನ’ ಎಂಬ ಸಂದೇಶದೊಂದಿಗೆ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿಯ ಎನ್‌ಸಿಸಿ , ಎನ್‌ಎಸ್‌ಎಸ್‌ ಹಾಗೂ ಯುವ ರೆಡ್ ಕ್ರಾಸ್ (ವೈಆರ್‌ಸಿ) ಘಟಕಗಳ ಸಂಯುಕ್ತ ಆಶ್ರಯದಲ್ಲಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಗುರುವಾರ ಬೃಹತ್ ರಕ್ತದಾನ ಶಿಬಿರ ನಡೆಯಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ ಒಟ್ಟು 65 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಮಾತನಾಡಿ, ನಿಮ್ಮ ಒಂದು ರಕ್ತದ ಹನಿ ಮತ್ತೊಬ್ಬರ ಬದುಕಿನ ಹೊಸ ಅಧ್ಯಾಯಕ್ಕೆ ನಾಂದಿಯಾಗುತ್ತದೆ ಎಂದು ಹೇಳಿದರು. ರಕ್ತದಾನವು ಜಾತಿ, ಧರ್ಮ, ಭಾಷೆಯ ಭೇದವಿಲ್ಲದೆ ಮತ್ತೊಂದು ಜೀವಕ್ಕೆ ಜೀವದಾನ ಮಾಡುವ ಶ್ರೇಷ್ಠ ಮಾನವೀಯ ಸೇವೆಯಾಗಿದೆ ಎಂದರು.

ಹಳೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಮಾತನಾಡಿ, ಪ್ರಸ್ತುತ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಪ್ರಮಾಣ ಕಡಿಮೆಯಿರುವ ಹಿನ್ನೆಲೆಯಲ್ಲಿ ಹೆಚ್ಚಿನ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಅಗತ್ಯವಿ ಎಂದರು.

59 ಬಾರಿ ರಕ್ತದಾನ ಮಾಡಿರುವ ಮತ್ತೊಬ್ಬ ಮುಖ್ಯ ಅತಿಥಿ ಖಲೀಲ್ ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠ ಮಾನವೀಯ ಸೇವೆಯಾಗಿದ್ದು, ನಮ್ಮ ರಕ್ತ ಮತ್ತೊಬ್ಬರ ಅಮೂಲ್ಯ ಜೀವ ಉಳಿಸಲು ನೆರವಾಗುತ್ತದೆ ಎಂದರು.

ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಬೊಟ್ಟಂಗಡ ಗಣಪತಿ ಅವರು ವಿದ್ಯಾರ್ಥಿಗಳು ಸಮಾಜ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಹಾಗೂ ಜಿಲ್ಲಾ ಆಸ್ಪತ್ರೆ, ಮಡಿಕೇರಿಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ರವಿ ಕರುಂಬಯ್ಯ ಅವರು ರಕ್ತದಾನದ ಮಹತ್ವದ ಕುರಿತು ಮಾಹಿತಿ ನೀಡಿದರು.

ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆ, ರಕ್ತಹೀನತೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಎದುರಾಗುತ್ತದೆ. ರಕ್ತಕ್ಕೆ ಯಾವುದೇ ಪರ್ಯಾಯವಿಲ್ಲದ ಕಾರಣ ಸ್ವಯಂಪ್ರೇರಿತ ರಕ್ತದಾನದಿಂದ ಮಾತ್ರ ರಕ್ತದ ಲಭ್ಯತೆಯನ್ನು ನಿರಂತರವಾಗಿ ಕಾಪಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ರಕ್ತದಾನಕ್ಕೂ ಮುನ್ನ ದಾನಿಗಳ ಆರೋಗ್ಯ ತಪಾಸಣೆ ನಡೆಸಿ, ಅರ್ಹರಾದವರಿಂದ ಮಾತ್ರ ರಕ್ತ ಸಂಗ್ರಹಿಸಲಾಗುತ್ತದೆ ಎಂದು ವಿವರಿಸಿದರು.ಆರೋಗ್ಯ ತಪಾಸಣೆಯ ಬಳಿಕ ಅರ್ಹ ದಾನಿಗಳಿಂದ ಸ್ವಯಂಪ್ರೇರಿತವಾಗಿ ರಕ್ತ ಸಂಗ್ರಹಿಸಲಾಯಿತು. ಕಾಲೇಜಿನ ಎನ್ಎಸ್‌ಎಸ್‌ ಅಧಿಕಾರಿಗಳಾದ ಡಾ. ಶೈಲಶ್ರೀ ಕೆ. ಹಾಗೂ ಅಲೋಕ್ ಬಿಜೈ ಸಂಯೋಜಿಸಿದರು. ಐಕ್ಯುಎಸಿ ಸಂಚಾಲಕರಾದ ಡಾ. ಸೌಮ್ಯ ಕೆ. ಸಹಕರಿಸಿದರು. ಕವನ ನಿರೂಪಿಸಿದರು. ಗಾನ ಸ್ವಾಗತಿಸಿದರು ಹಾಗೂ ಸಾನಿಕ ವಂದಿಸಿದರು. ಎನ್‌ಸಿಸಿ ಎನ್‌ಎಸ್‌ಎಸ್‌ ಹಾಗೂ ವೈಆರ್‌ಸಿ ಘಟಕಗಳ ಅಧಿಕಾರಿಗಳು, ಹಳೆ ವಿದ್ಯಾರ್ಥಿ ಸಂಘ, ಕೊಡಗು ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಸಿಬ್ಬಂದಿ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಶಿಬಿರ ಯಶಸ್ವಿಯಾಗಿ ನಡೆಯಿತು.